2014ರಿಂದ ಈಚೆಗೆ, ಭ್ರಷ್ಟಾಚಾರದ ಆರೋಪದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ವಿಚಾರಣೆ ಎದುರಿಸುತ್ತಿರುವ 25 ಪ್ರಮುಖ ರಾಜಕಾರಣಿಗಳು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಅವರಲ್ಲಿ ಕಾಂಗ್ರೆಸ್‌ನಿಂದ 10, ಎನ್‌ಸಿಪಿ ಮತ್ತು ಶಿವಸೇನೆಯಿಂದ ತಲಾ 4, ಟಿಎಂಸಿಯಿಂದ 3, ಟಿಡಿಪಿಯಿಂದ 2 ಹಾಗೂ ಎಸ್‌ಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್‌ನಿಂದ ತಲಾ ಒಬ್ಬರು ಬಿಜೆಪಿ ಸೇರಿದ್ದಾರೆ.
ಈ 25 ಮಂದಿಯ ಪೈಕಿ 23 ಮಂದಿ ವಿರುದ್ಧದ ಪ್ರಕರಣಗಳು ಸ್ಥಗಿತಗೊಂಡಿದೆ. ಅವರಲ್ಲಿ ಮೂರು ಮಂದಿ ವಿರುದ್ಧದ ಪ್ರಕರಣಗಳನ್ನು ಮುಚ್ಚಲಾಗಿದೆ. 20 ಮಂದಿ ವಿರುದ್ಧದ ಪ್ರಕರಣಗಳ ತನಿಖೆಯು ನಿಷ್ಕ್ರಿಯವಾಗಿದೆ. ಈ ಪಟ್ಟಿಯಲ್ಲಿರುವ ಆರು ರಾಜಕಾರಣಿಗಳು ಲೋಕಸಭಾ ಚುನಾವಣೆ ಘೋಷಣೆಯಾಗುವ ಕೆಲವೇ ವಾರಗಳ ಮುಂಚೆಯಷ್ಟೇ ಬಿಜೆಪಿ ಸೇರಿದ್ದಾರೆ.
ಅಂದಹಾಗೆ, 2022ರಲ್ಲಿ ‘ಇಂಡಿಯನ್ಸ್ ಎಕ್ಸ್‌ಪ್ರೆಸ್’ ಪ್ರಕಟಿಸಿದ್ದ ವರದಿ ಪ್ರಕಾರ, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ(ಸಿಬಿಐ)ಗಳು ತನಿಖೆ ನಡೆಸಿದ ಅಥವಾ ಪ್ರಕರಣ ದಾಖಲಿಸಿದ 95% ರಾಜಕಾರಣಿಗಳು ವಿರೋಧ ಪಕ್ಷಗಳಿಗೆ ಸೇರಿದವರು.
ಅವರಲ್ಲಿ ಹಲವರು ಬಿಜೆಪಿಗೆ ಸೇರಿದ ಬಳಿಕ, ಅವರ ವಿರುದ್ಧ ಪ್ರಕರಣಗಳನ್ನು ಮುಚ್ಚಲಾಗಿದೆ. ಹೀಗಾಗಿಯೇ, ವಿಪಕ್ಷಗಳು ಬಿಜೆಪಿಯನ್ನು ‘ವಾಷಿಂಗ್ ಮೆಷಿನ್’ ಎಂದು ಕರೆಯುತ್ತವೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕಾರಣಿಗಳು ತಮ್ಮ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದರೆ, ಅವರು ಕಾನೂನಿನ ಪರಿಣಾಮಗಳನ್ನು ಎದುರಿಸುವುದಿಲ್ಲ ಎಂದು ಆರೋಪಿಸಿವೆ.
ಆದರೆ, ಈ ಪ್ರವೃತ್ತಿ ಹೊಸದಲ್ಲ. ಈ ಹಿಂದೆ, 2009ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ, ಬಿಎಸ್‌ಪಿಯ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರು ಯುಪಿಎಗೆ ಬೆಂಬಲ ನೀಡಿದ್ದರು. ಆಗ, ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಬಿಐ ತನ್ನ ತನಿಖಾ ದಿಕ್ಕು ಬದಲಾಯಿಸಿತ್ತು ಎಂಬುದು ಆಗಲೇ ಬಹಿರಂಗವಾಗಿತ್ತು.
ಮಹಾರಾಷ್ಟ್ರದಲ್ಲಿ 2022 ಮತ್ತು 2023ರಲ್ಲಿ ರಾಜಕೀಯ ಪ್ರಕ್ಷುಬ್ಧತೆಯನ್ನು ಬಿಜೆಪಿ ನಿರ್ಮಾಣ ಮಾಡಿತ್ತು. ಹೀಗಾಗಿಯೇ, ಕೇಂದ್ರದ ಹೆಚ್ಚಿನ ಕ್ರಮಗಳು ಮಹಾರಾಷ್ಟ್ರದ ಮೇಲೆ ಕೇಂದ್ರೀಕೃತವಾಗಿವೆ ಎಂಬುದನ್ನು ಇತ್ತೀಚಿನ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಹೇಳುತ್ತದೆ.
2022 ರಲ್ಲಿ, ಏಕನಾಥ್ ಶಿಂಧೆ ಬಣವು ಶಿವಸೇನೆಯಿಂದ ಬೇರ್ಪಟ್ಟು ಬಿಜೆಪಿಯೊಂದಿಗೆ ಹೊಸ ಸರ್ಕಾರವನ್ನು ರಚಿಸಿತು. ಒಂದು ವರ್ಷದ ನಂತರ, ಅಜಿತ್ ಪವಾರ್ ಬಣವು ಎನ್‌ಸಿಪಿಯಿಂದ ಬೇರ್ಪಟ್ಟು ಆಡಳಿತಾರೂಢ ಎನ್‌ಡಿಎ ಒಕ್ಕೂಟವನ್ನು ಸೇರಿತು.
ಎನ್‌ಸಿಪಿ ಬಣದ ಇಬ್ಬರು ಪ್ರಮುಖ ನಾಯಕರಾದ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ಅವರು ಎನ್‌ಡಿಎ ಸೇರಿದ ಬಳಿಕ, ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಲಾಗಿದೆ ಎಂದು ದಾಖಲೆಗಳು ತೋರಿಸುತ್ತವೆ.
ಒಟ್ಟಾರೆಯಾಗಿ, ಮೇಲಿನ 25 ರಾಜಕಾರಣಿಗಳಲ್ಲಿ ಮಹಾರಾಷ್ಟ್ರದ 12 ಪ್ರಮುಖ ರಾಜಕಾರಣಿಗಳಿದ್ದಾರೆ. ಅವರಲ್ಲಿ ಹನ್ನೊಂದು ಮಂದಿ 2022 ಮತ್ತು ನಂತರದಲ್ಲಿ ಬಿಜೆಪಿಗೆ ಸೇರಿದ್ದಾರೆ. ಅವರಲ್ಲಿ ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್‌ನ ತಲಾ ನಾಲ್ವರು ರಾಜಕಾರಣಿಗಳಿದ್ದಾರೆ.
ಕೆಲವು ಪ್ರಕರಣಗಳ ಚಿತ್ರಣ:
* ಅಜಿತ್ ಪವಾರ್ ಪ್ರಕರಣ: 2020ರಲ್ಲಿ ಮಹಾರಾಷ್ಟ್ರದಲ್ಲಿ ಎಂವಿಎ ಸರ್ಕಾರ ಅಧಿಕಾರದತ್ತಿಲ್ಲ. ಆಗ ಅಜಿತ್ ಪವಾರ್ ಆ ಸರ್ಕಾರದ ಭಾಗವಾಗಿದ್ದರು. ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗವು (EOW) ಅಜಿತ್ ಪವಾರ್ ವಿರುದ್ಧದ ಪ್ರಕರಣವನ್ನು ಮುಚ್ಚುವುದಾಗಿ 2020ರ ಅಕ್ಟೋಬರ್‌ನಲ್ಲಿ ವರದಿ ಸಲ್ಲಿಸಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಮರಳಿದ ಬಳಿಕ, ಪ್ರಕರಣವನ್ನು ಮತ್ತೆ ತೆರೆಯಲು ಪ್ರಯತ್ನಿಸಿತು. ಈ ನಡುವೆ, 2024ರ ಮಾರ್ಚ್‌ನಲ್ಲಿ ಅವರು ಎನ್‌ಡಿಎ ಸೇರಿದ ನಂತರ ಮತ್ತೆ ಪ್ರಕರಣವನ್ನು ಮುಚ್ಚಲಾಯಿತು. ಇಒಡಬ್ಲ್ಯೂ ಕ್ರಮದ ಆಧಾರದ ಮೇಲೆ ಪವಾರ್ ವಿರುದ್ಧದ ಇಡಿ ಕೂಡ ಮೌನವಾಗಿದೆ.
* ಯಾವುದೇ ಪ್ರಗತಿ ಕಾಣದ, ಮುಚ್ಚಿಯೂ ಇಲ್ಲದ ಪ್ರಕರಣಗಳೂ ಇವೆ. ಅದರಲ್ಲಿ ಪ್ರಮುಖವಾದ್ದು, ಸುವೇಂದು ಅಧಿಕಾರಿ ವಿರುದ್ಧದ ಪ್ರಕರಣ. ಪಶ್ಚಿಮ ಬಂಗಾಳದ ನಾರದ ಕುಟುಕು ಕಾರ್ಯಾಚರಣೆಯ ಪ್ರಕರಣದಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ವಿರುದ್ಧ 2019ರಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಅವರು ಟಿಎಂಸಿ ಸಂಸದರಾಗಿದ್ದರು. 2019ರಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲು ಲೋಕಸಭೆ ಸ್ಪೀಕರ್ ಅನುಮತಿಗಾಗಿ ಸಿಬಿಐ ಕಾಯುತ್ತಿತ್ತು. ಆದರೆ, 2020ರಲ್ಲಿ ಅವರು ಟಿಎಂಸಿ ತೊರೆದು ಬಿಜೆಪಿ ಸೇರಿದರು. ಅಲ್ಲದೆ, ಈಗ ಅವರು ವಿಧಾನಸಭೆಯ ಸದಸ್ಯರಾಗಿದ್ದಾರೆ. ಆದರೆ, ಅವರ ವಿರುದ್ಧದ ತನಿಖೆ ಸ್ಥಗಿತವಾಗಿದೆ.
* ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ವಿರುದ್ಧದ ಪ್ರಕರಣಗಳು ಸಹ ಪ್ರಗತಿ ಕಂಡಿಲ್ಲ. 2014ರಲ್ಲಿ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಶರ್ಮಾ ಅವರು ಸಿಬಿಐ ವಿಚಾರಣೆ ಮತ್ತು ದಾಳಿಗಳನ್ನು ಎದುರಿಸಿದ್ದರು. ಆದರೆ, ಅವರು 2015ರಲ್ಲಿ ಬಿಜೆಪಿಗೆ ಸೇರಿದ ಬಳಿಕ, ಅವರ ವಿರುದ್ಧದ ಪ್ರಕರಣವು ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ಆದರ್ಶ್ ಹೌಸಿಂಗ್ ಪ್ರಕರಣದಲ್ಲಿ ಚವಾಣ್ ಆರೋಪಿಯಾಗಿದ್ದಾರೆ. ಸದ್ಯ ಆ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ಜಾರಿಯಲ್ಲಿರುವಾಗಲೇ ಈ ವರ್ಷ ಬಿಜೆಪಿ ಸೇರಿದ್ದಾರೆ.
25 ಪ್ರಕರಣಗಳಲ್ಲಿ ಕೇವಲ ಎರಡು ಪ್ರಕರಣಗಳಲ್ಲಿ- ಮಾಜಿ ಕಾಂಗ್ರೆಸ್ ಸಂಸದ ಜ್ಯೋತಿ ಮಿರ್ಧಾ ಮತ್ತು ಮಾಜಿ ಟಿಡಿಪಿ ಸಂಸದ ವೈಎಸ್ ಚೌಧರಿ- ಇಬ್ಬರು ನಾಯಕರು ಬಿಜೆಪಿಗೆ ಸೇರಿದ ನಂತರವೂ ಇಡಿ ಅವರ ವಿರುದ್ಧ ತನಿಖೆಯನ್ನು ಕೈಬಿಟ್ಟಿರುವಂತೆ ಕಾಣುತ್ತಿಲ್ಲ. ಅದಕ್ಕೆ ಯಾವುದೇ ಪುರಾವೆಗಳಿಲ್ಲ.
ಆದಾಗ್ಯೂ, ”ಏಜೆನ್ಸಿಯ ಎಲ್ಲ ತನಿಖೆಗಳು ‘ಸಾಕ್ಷ್ಯವನ್ನು ಆಧರಿಸಿವೆ’. ಸಾಕ್ಷಾಧಾರಗಳು ಕಂಡುಬಂದಾಗ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆರೋಪಿಗಳು ಪಕ್ಷವನ್ನು ಬದಲಿಸಿದ ನಂತರ ತನಿಖಾ ಸಂಸ್ಥೆಗಳು ತನಿಖೆಯ ದಿಕ್ಕನ್ನು ಬದಲಿಸಿದ ಪ್ರಕರಣಗಳ ಬಗ್ಗೆ ಕೇಳಿದಾಗ, ”ಕೆಲವು ಪ್ರಕರಣಗಳಲ್ಲಿ, ವಿವಿಧ ಕಾರಣಗಳಿಗಾಗಿ ಕ್ರಮ ವಿಳಂಬವಾಗುತ್ತದೆ. ಆದರೆ, ಆ ಪ್ರಕರಣಗಳು ತೆರೆದಿರುತ್ತವೆ” ಎಂದು ಹೇಳಿರುವುದಾಗಿ ‘ಟಿಐಇ’ ವರದಿ ಮಾಡಿದೆ.
ಜಾರಿ ನಿರ್ದೇಶನಾಲಯದ ಪ್ರಕರಣಗಳು ಇತರ ತನಿಖಾ ಸಂಸ್ಥೆಗಳ ಎಫ್‌ಐಆರ್‌ಗಳನ್ನು ಆಧರಿಸಿವೆ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಇತರ ತನಿಖಾ ಸಂಸ್ಥೆಗಳು ತಮ್ಮ ಪ್ರಕರಣವನ್ನು ಮುಚ್ಚಿದರೆ, ಇಡಿ ತನಿಖೆಯಲ್ಲಿ ಮುಂದುವರೆಯಲು ಕಷ್ಟವಾಗುತ್ತದೆ. ಆದರೂ, ಇಂತಹ ಹಲವು ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದೇವೆ. ತನಿಖೆ ನಡೆಯುತ್ತಿರುವ ಪ್ರಕರಣಗಳಲ್ಲಿ, ಅಗತ್ಯವಿದ್ದಾಗ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಇಡಿ ಅಧಿಕಾರಿ ತಿಳಿಸಿದ್ದಾರೆ.
ಪವಾರ್, ಪಟೇಲ್, ಅಧಿಕಾರಿ, ಶರ್ಮಾ- ಕೆಲವು ಪ್ರಕರಣಗಳನ್ನು ಹೇಗೆ ಮುಚ್ಚಲಾಗಿದೆ. ಇನ್ನೂ ಹಲವು ಪ್ರಕರಣಗಳ ತನಿಖೆಯು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಮುಚ್ಚಿದ ಪ್ರಕರಣಗಳು
ಅಜಿತ್ ಪವಾರ್
ಪಕ್ಷ ಬದಲಾವಣೆ: 2023ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಎನ್‌ಸಿಪಿ ಅಜಿತ್ ಬಣ ಬೆಂಬಲ
ಪ್ರಕರಣ: ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ನಲ್ಲಿ ಆಪಾದಿತ ಅಕ್ರಮಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅಜಿತ್ ಪವಾರ್, ಶರದ್ ಪವಾರ್ ಮತ್ತು ಇತರರ ವಿರುದ್ಧ ಆರ್ಥಿಕ ಅಪರಾಧ ವಿಭಾಗವು (EOW) 2019ರ ಆಗಸ್ಟ್‌ನಲ್ಲಿ ಎಫ್‌ಐಆರ್ ದಾಖಲಿಸಿತು. ಎಫ್‌ಐಆರ್ ದಾಖಲಿಸಲು ಆಗ ಬಾಂಬೆ ಹೈಕೋರ್ಟ್ ಆದೇಶಿಸಿತ್ತು. ಇಡಿ ತನಿಖೆಯ ವೇಳೆ ಎಫ್‌ಐಆರ್‌ಗೆ ಕಾಂಗ್ರೆಸ್ ನಾಯಕರಾದ ಜಯಂತ್ ಪಾಟೀಲ್, ದಿಲೀಪ್ ರಾವ್ ದೇಶಮುಖ್ ಮತ್ತು ದಿವಂಗತ ಮದನ್ ಪಾಟೀಲ್; ಎನ್‌ಸಿಪಿಯ ಈಶ್ವರಲಾಲ್ ಜೈನ್ ಮತ್ತು ಶಿವಾಜಿ ರಾವ್ ನಲವಾಡೆ ಮತ್ತು ಶಿವಸೇನೆಯ ಆನಂದರಾವ್ ಅಡ್ಸುಲ್ ಅವರನ್ನು ಹೆಸರಿಸಿತು.
ಆಗಸ್ಟ್ 2019: ಮುಂಬೈ ಪೊಲೀಸ್ ಇಒಡಬ್ಲ್ಯೂ ಎಫ್‌ಐಆರ್ ದಾಖಲಿಸಿತು
ಸೆಪ್ಟೆಂಬರ್ 2019: ಎಫ್‌ಐಆರ್ ಆಧರಿಸಿ ಇಡಿ ತನಿಖೆ ಆರಂಭಿಸಿತು
ಅಕ್ಟೋಬರ್ 2020: ಇಒಡಬ್ಲ್ಯೂ ಪ್ರಕರಣ ಮುಚ್ಚುವುದಾಗಿ ವರದಿ ಸಲ್ಲಿಸಿತು. ಇಡಿ ಅದನ್ನು ಪ್ರಶ್ನಿಸಿತು.
ಏಪ್ರಿಲ್ 2022: ಪವಾರ್ ಹೆಸರಿಲ್ಲದೆ ಇಡಿ ಚಾರ್ಜ್‌ಶೀಟ್ ಸಲ್ಲಿಸಿತು.
ಜೂನ್ 2022: ಶಿವಸೇನೆ ವಿಭಜನೆಯಾಯಿತು. ಶಿಂಧೆ ಬಣ ಬಿಜೆಪಿಯೊಂದಿಗೆ ಎನ್‌ಡಿಎ ಸರ್ಕಾರವನ್ನು ರಚಿಸಿತು.
ಅಕ್ಟೋಬರ್ 2022: ಮುಂಬೈ ಇಒಡಬ್ಲ್ಯು ಇಡಿ ಸಾಕ್ಷ್ಯದ ಆಧಾರದ ಮೇಲೆ ಹೆಚ್ಚಿನ ತನಿಖೆಗೆ ಮುಂದಾಯಿತು. ಜುಲೈ 2023: ಎನ್‌ಡಿಎ ಬೆಂಬಲಿಸಿದ ಪವಾರ್, ಮಹಾರಾಷ್ಟ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದರು. ಜನವರಿ 2024: ಇಒಡಬ್ಲ್ಯೂ ಎರಡನೇ ಮುಚ್ಚುವಿಕೆ ವರದಿ ಸಲ್ಲಿಸಿತು
ಪ್ರಸ್ತುತ ಸ್ಥಿತಿ: ಇಒಡಬ್ಲ್ಯೂ ಮುಚ್ಚುವಿಕೆ ವರದಿ ಕುರಿತು ನ್ಯಾಯಾಲಯದಲ್ಲಿ ಇಡಿ ಮಧ್ಯಸ್ಥಿಕೆ ಅರ್ಜಿ ಸಲ್ಲಿಸಿದೆ
***
ಪ್ರಫುಲ್ ಪಟೇಲ್
ಪಕ್ಷ ಬದಲಾವಣೆ: 2023ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಎನ್‌ಸಿಪಿ ಅಜಿತ್ ಬಣ ಬೆಂಬಲ
ಪ್ರಕರಣ: ಏರ್ ಇಂಡಿಯಾದ 111 ವಿಮಾನಗಳ ಖರೀದಿ ಮತ್ತು ಏರ್ ಇಂಡಿಯಾ – ಇಂಡಿಯನ್ ಏರ್‌ಲೈನ್ಸ್ ವಿಲೀನದಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಮಾಜಿ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ವಿರುದ್ಧ ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿದೆ. ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಲಾಭದಾಯಕ ಮಾರ್ಗಗಳನ್ನು ಬಿಟ್ಟುಕೊಡುವುದು, ವಿದೇಶಿ ಹೂಡಿಕೆಯೊಂದಿಗೆ ತರಬೇತಿ ಸಂಸ್ಥೆಗಳನ್ನು ತೆರೆಯುವುದು ಮತ್ತು ಲಾಬಿ ನಡೆಸುವ ದೀಪಕ್ ತಲ್ವಾರ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಗಳನ್ನು ಪ್ರಕರಣ ಒಳಗೊಂಡಿದೆ. ಎಫ್‌ಐಆರ್‌ಗಳಲ್ಲಿ ಪಟೇಲ್ ಅವರನ್ನು ಆರೋಪಿ ಎಂದು ಪಟ್ಟಿ ಮಾಡಿಲ್ಲ. ಆದರೆ, ಅವರ ಹೆಸರನ್ನು ಉಲ್ಲೇಖಿಸಿವೆ.
ಮೇ 2017: ಏರ್ ಇಂಡಿಯಾ-ಇಂಡಿಯನ್ ಏರ್‌ಲೈನ್ಸ್ ವಿಲೀನ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ ಸಿಬಿಐ
ಮೇ 2019: ಇಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ಪಟೇಲ್‌ರನ್ನು ಹೆಸರಿಸಿತು
ಜೂನ್ 2023: ಪಟೇಲ್ ಎನ್‌ಡಿಎ ಸೇರಿದರು
ಮಾರ್ಚ್ 2024: ಮುಚ್ಚುವಿಕೆ ವರದಿ ಸಲ್ಲಿಸಿದ ಸಿಬಿಐ
ಪ್ರಸ್ತುತ ಸ್ಥಿತಿ: ನ್ಯಾಯಾಲಯದಲ್ಲಿ ಮುಚ್ಚುವಿಕೆ ಬಾಕಿಯಿದೆ
***
ಪ್ರತಾಪ್ ಸರ್ನಾಯಕ್
ಪಕ್ಷ ಬದಲಾವಣೆ: 2022ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಶಿವಸೇನಾ ಶಿಂದೆ ಬಣ ಬೆಂಬಲ
ಪ್ರಕರಣ: ಭದ್ರತಾ ಸಂಸ್ಥೆಯೊಂದರ ಜೊತೆಗೆ ಅವರ ಕಂಪನಿಗಳು ಅಕ್ರಮ ವ್ಯವಹಾರ ನಡೆಸಿದ ಆರೋಪದ ಮೇಲೆ ಶಿವಸೇನೆಯ ವಕ್ತಾರ ಪ್ರತಾಪ್ ಸರ್ನಾಯಕ್ ವಿರುದ್ಧ ಇಡಿ ಪ್ರಕರಣ ದಾಖಲಿಸಿ, ದಾಳಿ ನಡೆಸಿದೆ. 2021ರ ಜೂನ್‌ನಲ್ಲಿ ಆಗಿನ ಮಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದ ಸರ್ನಾಯಕ್, ಬಿಜೆಪಿ ಜೊತೆ ಶಿವಸೇನೆ ಮರಳಿ ಕೈಜೋಡಿಸುವಂತೆ ಮಾಡಲು ಇಡಿ ತಮಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದರು. 2022ರ ಜೂನ್‌ನಲ್ಲಿ, ಅವರು ಏಕನಾಥ್ ಶಿಂದೆ ಜೊತೆಗೂಡಿ ಶಿವಸೇನೆಯನ್ನು ವಿಭಜಿಸಿದರು. ಮತ್ತೊಂದು ಪ್ರಕರಣ, ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಇಎಲ್) ವಂಚನೆ ಆರೋಪದ ಪ್ರಕರಣದಲ್ಲಿ ಸರ್ನಾಯಕ್ ಅವರನ್ನು ಇಡಿ ವಿಚಾರಣೆ ನಡೆಸುತ್ತಿದೆ.
ಟೈಮ್‌ಲೈನ್
ನವೆಂಬರ್ 2020: ಮುಂಬೈ ಇಒಡಬ್ಲ್ಯೂನ ಎಫ್‌ಐಆರ್ ಆಧರಿಸಿ ಇಡಿ ದಾಳಿ ನಡೆಸಿತು
ಜನವರಿ 2021 ಇಒಡಬ್ಲ್ಯೂ ಪ್ರಕರಣ ಮುಚ್ಚುವಿಕೆ ವರದಿ ಸಲ್ಲಿಸಿತು
ಜೂನ್ 2022: ಸರ್ನಾಯಕ್ ಶಿಂದೆ ಅವರೊಂದಿಗೆ ಎನ್‌ಡಿಎ ಮೈತ್ರಿ ಸೇರಿದರು.
ಸೆಪ್ಟೆಂಬರ್ 2022: ನ್ಯಾಯಾಲಯವು ಮುಚ್ಚುವಿಕೆ ವರದಿ ಸ್ವೀಕರಿಸಿತು. ಇಡಿ ಪ್ರಕರಣವನ್ನು ಸ್ಥಗಿತಗೊಳಿಸಿತು.
ಪ್ರಸ್ತುತ ಸ್ಥಿತಿ: ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ತನಿಖೆಯಲ್ಲಿ ಯಾವುದೇ ಪ್ರಗತಿಯಿಲ್ಲ. ಇನ್ನೊಂದು ಪ್ರಕರಣದಲ್ಲಿ ತನಿಖೆ ತೆವಳುತ್ತಿದೆ.
ತೆರೆದಿದ್ದೂ ಸ್ಥಗಿತಗೊಂಡಿರುವ ಪ್ರಕರಣಗಳು
ಹಿಮಂತ ಬಿಸ್ವಾ ಶರ್ಮಾ – ಹಾಲಿ ಮುಖ್ಯಮಂತ್ರಿ
ಪಕ್ಷ ಬದಲಾವಣೆ: 2015ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು
ಪ್ರಕರಣ: ಪ್ರಸ್ತುತ ಅಸ್ಸಾಂ ಮುಖ್ಯಮಂತ್ರಿ ಆಗಿರುವ ಶರ್ಮಾ, 2014 ಮತ್ತು 2015ರಲ್ಲಿ ಶಾರದಾ ಚಿಟ್ ಫಂಡ್ ಹಗರಣ ಪ್ರಕರಣದ ಆರೋಪಿ ಸುದೀಪ್ತ ಸೇನ್ ಅವರೊಂದಿಗೆ ಹಣಕಾಸಿನ ವಹಿವಾಟು ನಡೆಸಿದ್ದರು. ಸಿಬಿಐ ಮತ್ತು ಇಡಿ ಹಗರಣದ ತನಿಖೆಗೆ ಆರಂಭಿಸಿದ್ದವು. ಸಿಬಿಐ 2014 ರಲ್ಲಿ ಶರ್ಮಾ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿತ್ತು ಮತ್ತು ಅವರನ್ನು ವಿಚಾರಣೆ ಒಳಪಡಿಸಿತ್ತು. ಜೊತೆಗೆ, ಲೂಯಿಸ್ ಬರ್ಗರ್ ಪ್ರಕರಣದಲ್ಲಿ ಗೋವಾದಲ್ಲಿ ನೀರಿನ ಯೋಜನೆ ಗುತ್ತಿಗೆಗಾಗಿ ಲಂಚ ನೀಡಲಾಗಿದೆ ಎಂದೂ ಆರೋಪಿಸಲಾಗಿದೆ. ಆದರೆ, ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ.
ಟೈಮ್‌ಲೈನ್
ಆಗಸ್ಟ್ 2014: ಶರ್ಮಾ ನಿವಾಸದ ಮೇಲೆ ಸಿಬಿಐ ದಾಳಿ
ನವೆಂಬರ್ 2014: ಸಿಬಿಐನಿಂದ ಶರ್ಮಾ ವಿಚಾರಣೆ
ಆಗಸ್ಟ್ 2015: ಬಿಜೆಪಿ ಸೇರ್ಪಡೆ
ಪ್ರಸ್ತುತ ಸ್ಥಿತಿ: ಪ್ರಕರಣ ತೆರೆದಿದೆ. ಆದರೆ ಯಾವುದೇ ಕ್ರಮವೂ ಇಲ್ಲ. ತನಿಖಾ ಪ್ರಗತಿಯೂ ಇಲ್ಲ
***
ಹಸನ್ ಮುಶ್ರಿಫ್
ಪಕ್ಷ ಬದಲಾವಣೆ: 2023ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಎನ್‌ಸಿಪಿ ಅಜಿತ್ ಬಣ ಬೆಂಬಲ
ಪ್ರಕರಣ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಸರ್ ಸೇನಾಪತಿ ಸಂತಾಜಿ ಘೋರ್ಪಡೆ ಸಕ್ಕರೆ ಕಾರ್ಖಾನೆಯಲ್ಲಿ (ಎಸ್‌ಎಸ್‌ಎಸ್‌ಜಿಎಸ್‌ಎಫ್) ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಇಡಿ ಪ್ರಕರಣ ದಾಖಲಿಸಿತ್ತು. 40,000 ರೈತರಿಂದ ಬಂಡವಾಳ ಸಂಗ್ರಹಿಸಿದ ನಂತರ, ರೈತರಿಗೆ ಕಾರ್ಖಾನೆಯು ಷೇರು ಪ್ರಮಾಣಪತ್ರವನ್ನು ನೀಡಿಲ್ಲ ಎಂದು ಇಡಿ ಹೇಳಿದೆ. ಸಂಗ್ರಹಿಸಿದ ಹಣವನ್ನು ಮುಶ್ರಿಫ್ ಅವರ ಕುಟುಂಬ ಮತ್ತು ಸಂಬಂಧಿಕರಿಗೆ ಸಂಬಂಧಿಸಿದ ಶೆಲ್ ಕಂಪನಿಗಳಿಗೆ ನೀಡಲಾಗಿದೆ ಎಂದು ಇಡಿ ಆರೋಪಿಸಿದೆ.
ಟೈಮ್ ಲೈನ್
ಫೆಬ್ರುವರಿ-ಮಾರ್ಚ್ 2023: ಮುಶ್ರಿಫ್ ಅವರ ನಿವಾಸ, ಕಚೇರಿಗಳ ಮೇಲೆ ಮೂರು ಬಾರಿ ಇಡಿ ದಾಳಿ
ಜುಲೈ 2023: ಅಜಿತ್ ಪವಾರ್ ಅವರೊಂದಿಗೆ ಮುಶ್ರಿಫ್ ಎನ್‌ಡಿಎ ಸೇರಿದರು
ಪ್ರಸ್ತುತ ಸ್ಥಿತಿ: ಪ್ರಕರಣವನ್ನು ತೆರೆಯಲಾಗಿದೆ ಆದರೆ, ಯಾವುದೇ ದಾಳಿಗಳು ಅಥವಾ ಕ್ರಮಗಳನ್ನು ಜರುಗಿಸಲಾಗಿಲ್ಲ. ತನಿಖೆ ಪ್ರಗತಿಯನ್ನೂ ಕಂಡಿಲ್ಲ.
***
ಭಾವನಾ ಗವಳಿ
ಪಕ್ಷ ಬದಲಾವಣೆ: 2022ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಶಿವಸೇನೆ ಶಿಂದೆ ಬಣ ಸೇರ್ಪಡೆ
ಪ್ರಕರಣ: ಇಡಿ ದಾಳಿಗಳು 2020ರ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿವೆ. ಇದರಲ್ಲಿ ಯವತ್ಮಾಲ್-ವಾಶಿಮ್ ಎಂಪಿ ಮತ್ತು ಅವರ ಸಹಚರರು ಟ್ರಸ್ಟ್‌ವೊಂದರಲ್ಲಿ 17 ಕೋಟಿ ರೂ.ಗಳಷ್ಟು ಹಣವನ್ನು ಅಕ್ರಮವಾಗಿ ಪೋಲು ಮಾಡಿದ ಪ್ರಕರಣದಲ್ಲಿ ಭಾವನಾ ಗವಳಿ ಕೂಡ ಆರೋಪಿಯಾಗಿದ್ದಾರೆ. ಭಾವನಾ ಅವರ ಸಹಾಯಕ ಸಯೀದ್ ಖಾನ್‌ಗೆ ಸಂಬಂಧಿಸಿದ 3.75 ಕೋಟಿ ರೂಪಾಯಿ ಮೌಲ್ಯದ ಮುಂಬೈನಲ್ಲಿರುವ ಕಚೇರಿ ಕಟ್ಟಡವನ್ನು ಇಡಿ ಜಪ್ತಿ ಮಾಡಿದೆ.
ಟೈಮ್ ಲೈನ್
ಆಗಸ್ಟ್ 2021: ಭಾವನಾ ಅವರಿಗೆ ಸಂಪರ್ಕ ಇರುವವರ ನಿವಾಸ-ಕಚೇರಿಗಳ ಮೇಲೆ ಇಡಿ ದಾಳಿ
ಸೆಪ್ಟೆಂಬರ್ 2021: ಇಡಿಯಿಂದ ಆಕೆಯ ಸಹಾಯಕನ ಬಂಧನ
ನವೆಂಬರ್ 2021: ಟ್ರಸ್ಟ್ ಮತ್ತು ಸಹಾಯಕರ ವಿರುದ್ಧ ಇಡಿ ಚಾರ್ಜ್‌ಶೀಟ್ ಸಲ್ಲಿಕೆ
ಜೂನ್ 2022: ಶಿಂದೆ ಅವರೊಂದಿಗೆ ಎನ್‌ಡಿಎ ಸೇರ್ಪಡೆ
ಪ್ರಸ್ತುತ ಸ್ಥಿತಿ: ಯಾವುದೇ ಪೂರಕ ಆರೋಪಪಟ್ಟಿ ಸಲ್ಲಿಸಿಲ್ಲ. ಪ್ರಕರಣದ ತನಿಖೆ ಪ್ರಗತಿ ಕಂಡಿಲ್ಲ
***
ಯಾಮಿನಿ ಮತ್ತು ಯಶವಂತ್ ಜಾಧವ್
ಪಕ್ಷ ಬದಲಾವಣೆ: 2022ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಶಿವಸೇನೆ ಶಿಂದೆ ಬಣ ಸೇರ್ಪಡೆ
ಪ್ರಕರಣ: ಶಾಸಕಿ ಯಾಮಿನಿ ಮತ್ತು ಅವರ ಪತಿ ಕಾರ್ಪೊರೇಟರ್ ಯಶವಂತ್ ವಿರುದ್ಧ ಇಡಿ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ಉಲ್ಲಂಘನೆಯ ಆರೋಪ ಅವರ ಮೇಲಿದೆ. ಯಾಮಿನಿ ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಸಂಪರ್ಕ ಹೊಂದಿರುವ ಕನಿಷ್ಠ ಆರು ಕಂಪನಿಗಳ ಮೇಲೆ ಇಡಿ ತನಿಖೆ ನಡೆಸುತ್ತಿದೆ. ಒಂದು ಪ್ರಮುಖ ಪ್ರಕರಣವು ಯಾಮಿನಿ-ಜಾಧವ್ ಅವರು ಕೆಲ ಕಂಪನಿಗಳಿಂದ ಅಸುರಕ್ಷಿತ ಸಾಲ ಪಡೆದಿದ್ದಾರೆ ಎಂದು ಹೇಳುತ್ತದೆ. 2022 ರಲ್ಲಿ, ತೆರಿಗೆ ಇಲಾಖೆಯು 40ಕ್ಕೂ ಹೆಚ್ಚು ಆಸ್ತಿಗಳನ್ನು ಜಪ್ತಿ ಮಾಡಿದೆ.
ಟೈಮ್ ಲೈನ್
ಫೆಬ್ರವರಿ 2022: ಆಕೆ ಮತ್ತು ಪತಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಐಟಿ ದಾಳಿ
ಮೇ 2022: ಪ್ರಕರಣ ದಾಖಲಿಸಿದ ನಂತರ ಜಾದವ್‌ಗೆ ಇಡಿ ಸಮನ್ಸ್
ಜೂನ್ 2022: ಶಿಂದೆ ಅವರೊಂದಿಗೆ ಎನ್‌ಡಿಎ ಸೇರ್ಪಡೆ
ಪ್ರಸ್ತುತ ಸ್ಥಿತಿ: ಪ್ರಕರಣದಲ್ಲಿ ಯಾವುದೇ ಪ್ರಗತಿ ಇಲ್ಲ
***
ಸಿ ಎಂ ರಮೇಶ್
ಪಕ್ಷ ಬದಲಾವಣೆ: 2019ರಲ್ಲಿ ಟಿಡಿಪಿ ತೊರೆದು ಬಿಜೆಪಿ ಸೇರ್ಪಡೆ
ಪ್ರಕರಣ: 100 ಕೋಟಿ ರೂಪಾಯಿಗಳ ಅಕ್ರಮ ನಡೆಸಿದ ಆರೋಪದ ಮೇಲೆ 2018ರ ಅಕ್ಟೋಬರ್‌ನಲ್ಲಿ ಟಿಡಿಪಿ ಸಂಸದ ರಮೇಶ್ ಅವರ ಕಂಪನಿ, ಮನೆಗಳ ಮೇಲೆ ಇಟಿ ಇಲಾಖೆ ದಾಳಿ ನಡೆಸಿತ್ತು. ಪ್ರಾಸಂಗಿಕವಾಗಿ, ಐಟಿ ದಾಳಿಗಳ ನಂತರ, ರಮೇಶ್ ಅವರನ್ನು ಅನರ್ಹಗೊಳಿಸುವಂತೆ ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಅವರು ಸಂಸತ್ತಿನ ನೈತಿಕ ಸಮಿತಿಗೆ ಪತ್ರ ಬರೆದಿದ್ದರು.
ಟೈಮ್ ಲೈನ್
ಅಕ್ಟೋಬರ್ 2018: ಐಟಿ ದಾಳಿ
ಜೂನ್ 2019: ಬಿಜೆಪಿಗೆ ಸೇರ್ಪಡೆ
ಪ್ರಸ್ತುತ ಸ್ಥಿತಿ: ತನಿಖೆಯಲ್ಲಿ ಯಾವುದೇ ಪ್ರಗತಿ ಇಲ್ಲ
***
ರಣಿಂದರ್ ಸಿಂಗ್
ಪಕ್ಷ ಬದಲಾವಣೆ: 2021ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಅಮರಿಂದರ್ ಸಿಂಗ್ ಅವರ ಮಗ
ಪ್ರಕರಣ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪುತ್ರ ರಣೀಂದರ್ ಸಿಂಗ್ ಅವರು ಐಟಿ ತನಿಖೆಗೆ ಸಂಬಂಧಿಸಿದ ಫೆಮಾ ಉಲ್ಲಂಘನೆ ಆರೋಪದ ಮೇಲೆ ಇಡಿ ತನಿಖೆ ನಡೆಸುತ್ತಿದೆ. ಅವರು 2016ರಲ್ಲಿ ಇಡಿ ಮುಂದೆ ಹಾಜರಾಗಿದ್ದರು. ಮಾರ್ಚ್ 2018ರಲ್ಲಿ, ಗುರ್ಪಾಲ್ ಅವರು ಉಪ ಪ್ರಧಾನ ವ್ಯವಸ್ಥಾಪಕರಾಗಿದ್ದ ಸಿಂಭೋಲಿ ಶುಗರ್ಸ್‌ನಿಂದ ಸುಮಾರು 98 ಕೋಟಿ ರೂಪಾಯಿಗಳ ಸಾಲ ಪಡೆದು ವಂಚಿಸಿದ್ದ ಬಗ್ಗೆ ಅಮರಿಂದರ್ ಸಿಂಗ್ ಅವರ ಅಳಿಯ ಗುರ್ಪಾಲ್ ಸಿಂಗ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಸಿಬಿಐ ಎಫ್‌ಐಆರ್ ಆಧರಿಸಿ, ಇಡಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿಕೊಂಡಿದೆ. ಜುಲೈ 2019ರಲ್ಲಿ 110 ಕೋಟಿ ರೂ.ಗಳ ಗಿರಣಿ ಆಸ್ತಿಯನ್ನು ಜಪ್ತಿ ಮಾಡಿದೆ.
ಟೈಮ್ ಲೈನ್
ನವೆಂಬರ್ 2020: ರಣಿಂದರ್ ಅವರನ್ನು ಇಡಿ ವಿಚಾರಣೆ
ನವೆಂಬರ್ 2021: ತಂದೆ ಅಮರಿಂದರ್ ಕಾಂಗ್ರೆಸ್ ತೊರೆದರು
ಸೆಪ್ಟೆಂಬರ್ 2022: ಅಮರಿಂದರ್ ಬಿಜೆಪಿ ಸೇರಿದರು
ಪ್ರಸ್ತುತ ಸ್ಥಿತಿ: ಪ್ರಕರಣದಲ್ಲಿ ಯಾವುದೇ ಪ್ರಗತಿ ಇಲ್ಲ
***
ಸುವೆಂದು ಅಧಿಕಾರಿ
ಪಕ್ಷ ಬದಲಾವಣೆ: 2020ರಲ್ಲಿ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆ
ಪ್ರಕರಣ: ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಅವರು ನಾರದ ಕುಟುಕು ಕಾರ್ಯಾಚರಣೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇದೇ ಪ್ರಕರಣದಲ್ಲಿ ಇನ್ನೂ 11 ಮಂದಿ ಟಿಎಂಸಿ ನಾಯಕರು ಕೂಡ ಆರೋಪಿಗಳಾಗಿದ್ದಾರೆ. ಟಿಎಂಸಿ ನಾಯಕರು ಕಾಲ್ಪನಿಕ ಕಂಪನಿಗೆ ನಗದು ವಿತರಣೆ ಮಾಡುವ ಹಾಗೂ ಆ ಬಗ್ಗೆ ಮಾತುಕತೆ ನಡೆಸುತ್ತಿರುವುದನ್ನು 2014ರಲ್ಲಿ ಸ್ಟಿಂಗ್ ಆಪರೇಷನ್ ನಡೆಸಿ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿತ್ತು. ಅದನ್ನು 2016ರಲ್ಲಿ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಪ್ರಸಾರ ಮಾಡಲಾಗಿತ್ತು.
ಟೈಮ್ ಲೈನ್
ಏಪ್ರಿಲ್ 2017: ನಾರದ ಕುಟುಕು ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲು
ಏಪ್ರಿಲ್ 2019: ಲೋಕಸಭೆ ಸ್ಪೀಕರ್‌ನಿಂದ ತನಿಖೆಗೆ ಅನುಮತಿ ಕೋರಿ ಸಿಬಿಐ ಪತ್ರ (ಆಗ ಸುವೇಂದು ಸಂಸದರಾಗಿದ್ದರು)
ಡಿಸೆಂಬರ್ 2020: ಬಿಜೆಪಿಗೆ ಸೇರ್ಪಡೆ
ಪ್ರಸ್ತುತ ಸ್ಥಿತಿ: ಇನ್ನೂ ಸ್ಪೀಕರ್ ಅನುಮತಿಗಾಗಿ ಕಾಯಲಾಗುತ್ತಿದೆ
***
ನವೀನ್ ಜಿಂದಾಲ್
ಪಕ್ಷ ಬದಲಾವಣೆ: ಕಾಂಗ್ರೆಸ್ ತೊರೆದು 2024ರಲ್ಲಿ ಬಿಜೆಪಿ ಸೇರ್ಪಡೆ
ಪ್ರಕರಣ: ಹರಿಯಾಣದ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರನ್ನು 2016 ಮತ್ತು 2017ರಲ್ಲಿ ಎರಡು ಪ್ರತ್ಯೇಕ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಒಳಪಡಿಸಿದೆ. ಅವರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣದಲ್ಲಿ ತನಿಖೆ ನಡೆಸಿದ ಇಡಿ ಕೂಡ ಚಾರ್ಜ್‌ಶೀಟ್ ಸಲ್ಲಿಸಿದೆ. ಏಪ್ರಿಲ್ 2022ರಲ್ಲಿ ಫಾರೆಕ್ಸ್ ಉಲ್ಲಂಘಿಸಿದ ಆರೋಪ ಸಂಬಂಧಿತ ಹೊಸ ಪ್ರಕರಣದಲ್ಲಿ ಜಿಂದಾಲ್ ಸ್ಟೀಲ್ ಅಂಡ್ ಪವರ್ ಕಂಪನಿ ಮತ್ತು ನವೀನ್ ಜಿಂದಾಲ್ ನಿವಾಸಗಳ ಮೇಲೆ ಇಡಿ ದಾಳಿ ನಡೆಸಿತು.
ಟೈಮ್ ಲೈನ್
ಜೂನ್ 2013: ಕಲ್ಲಿದ್ದಲು ಅಕ್ರಮದಲ್ಲಿ ಜಿಂದಾಲ್ ವಿರುದ್ಧ ಸಿಬಿಐ ಎಫ್‌ಐಆರ್
2016/2017: ಆರೋಪಪಟ್ಟಿ ಸಲ್ಲಿಕೆ
ಏಪ್ರಿಲ್ 2022: ಹೊಸ ಪ್ರಕರಣದಲ್ಲಿ ಇಡಿ ದಾಳಿ
ಮಾರ್ಚ್ 2024: ಬಿಜೆಪಿಗೆ ಸೇರ್ಪಡೆ
ಪ್ರಸ್ತುತ ಸ್ಥಿತಿ: ಪ್ರಕರಣ ತೆರೆದಿದೆ. ಇಡಿ ತನಿಖೆ ಸ್ಥಗಿತಗೊಂಡಿದೆ.
***
ಇವರಲ್ಲದೆ,
ಕೆ ಗೀತಾ
ಸೋವನ್ ಚಟರ್ಜಿ
ಛಗನ್ ಭುಜಬಲ್
ಕೃಪಾಶಂಕರ್ ಸಿಂಗ್
ದಿಗಂಬರ್ ಕಾಮತ್
ಅಶೋಕ್ ಚವಾಣ್
ತಪಸ್ ರಾಯ್
ಅರ್ಚನಾ ಪಾಟೀಲ್
ಗೀತಾ ಕೋಡ
ಬಾಬಾ ಸಿದ್ದಿಕಿ
ಜ್ಯೋತಿ ಮಿರ್ಧಾ
ಸುಜನಾ ಚೌಧರಿ – ಇವರೂ ಕೂಡ ಆ 25 ಮಂದಿಯಲ್ಲಿದ್ದಾರೆ. ಇವರೆಲ್ಲರೂ ಬಿಜೆಪಿ ಸೇರಿದ ಬಳಿಕ, ಇವರ ವಿರುದ್ಧದ ತನಿಖೆಗಳು ಸ್ಥಗಿತಗೊಂಡಿವೆ.
ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ