1962ರ ರೆಜಾಂಗ್ ಲಾ ಕದನದಲ್ಲಿ ಮೇಜರ್ ಶೈತಾನ್ ಸಿಂಗ್ ಮಡಿದರು. ಅವರ ಮೃತದೇಹ ಸಿಕ್ಕ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲಾಗಿತ್ತು. ಆದರೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಿಂದ ಸ್ಮಾರಕ ನೆಲಸಮ ಆಗಿದೆ. ಮೋದಿ ಈ ಕುರಿತು ಮಾತನಾಡುತ್ತಿಲ್ಲ. ಎಂದೋ ಕಳೆದುಕೊಂಡ ಕಚ್ಚತೀವು ದ್ವೀಪದ ಬಗ್ಗೆ ಇರುವ ಆಸಕ್ತಿ ಗಾಲ್ವಾನ್ ಪ್ರದೇಶದ ಮೇಲೆ ಏಕಿಲ್ಲ?
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಿಂದ ಒಮ್ಮೆಯೂ ಪತ್ರಿಕಾಗೋಷ್ಠಿಯನ್ನು ಎದುರಿಸಲಿಲ್ಲ. ಆದರೆ ಆಯ್ದ ‘ಮಡಿಲು ಮಾಧ್ಯಮ’ಗಳಿಗೆ ಸಂದರ್ಶನಗಳನ್ನು ನೀಡುತ್ತ, ತಮ್ಮ ಇಚ್ಛಾನುಸಾರ ಮಾತನಾಡುತ್ತಾ ಬಂದಿದ್ದಾರೆ.
ಇತ್ತೀಚೆಗೆ ತಮಿಳಿನ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿರುವ ಮೋದಿಯವರು, ಮುಗಿದು ಹೋದ ಪ್ರಕರಣವೊಂದನ್ನು ಮುನ್ನೆಲೆಗೆ ತಂದು ಮತಬೇಟೆ ರಾಜಕಾರಣ ಮಾಡಲು ಯತ್ನಿಸಿದ್ದಾರೆ.
“ಶ್ರೀಲಂಕಾಕ್ಕೆ ಸೇರಿರುವ ಕಚ್ಚತೀವು ದ್ವೀಪದ ವಿಷಯದಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ತಮಿಳುನಾಡಿನ ಹಿತಾಸಕ್ತಿ ಕಾಪಾಡುವುದರಲ್ಲಿ ವಿಫಲವಾಗಿವೆ. ಇದು ಡಿಎಂಕೆಯ ದ್ವಂದ್ವ ನೀತಿಯನ್ನು ತೋರಿಸುತ್ತದೆ” ಎಂದು ನೀರನ್ನು ತಾವೇ ಕದಡಿ ಅದರಲ್ಲಿ ಮೀನು ಹಿಡಿಯಲು ತೊಡಗಿದ್ದಾರೆ.
ಕೇವಲ 266 ಎಕರೆ ಭೂ ಪ್ರದೇಶದ ಸಣ್ಣ ದ್ವೀಪ ಕಚ್ಚತೀವು. ಅದು ವಾಸಯೋಗ್ಯವಾಗಿಲ್ಲ. ಶ್ರೀಲಂಕಾ ಮೀನುಗಾರರು ಆಗಾಗ್ಗೆ ಅಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಪಾಕ್ ಜಲಸಂಧಿಯಲ್ಲಿ ಶ್ರೀಲಂಕಾ ಮತ್ತು ಭಾರತದ ನಡುವೆ ಇರುವ ಈ ಕಚ್ಚತೀವು ದ್ವೀಪವು 1.6 ಕಿಲೋಮೀಟರ್ ಉದ್ದ 300 ಮೀಟರ್ ಅಗಲವಿದೆ. ಈ ಭೂಭಾಗ ಯಾರಿಗೆ ಸೇರಬೇಕೆಂಬ ಚರ್ಚೆಗಳು ನಡೆದಾಗ ಶ್ರೀಲಂಕಾ ಐತಿಹಾಸಿಕ ದಾಖಲೆಗಳನ್ನು ಇಟ್ಟಿತು. 1974ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಶ್ರೀಲಂಕಾದ ಪ್ರಧಾನಿ ಸಿರಿಮಾವೋ ಬಂಡಾರನಾಯಿಕೆ ನಡುವೆ ನಡೆದ ಒಪ್ಪಂದದ ಪ್ರಕಾರ ಕಚ್ಚತೀವು ದ್ವೀಪ ಶ್ರೀಲಂಕಾ ಪಾಲಾಯಿತು. ದ್ವೀಪ ಪ್ರವೇಶಿಸಿದ ಮೀನುಗಾರರ ಬಂಧನ ನಡೆಯುತ್ತಲೇ ಇದೆ. ಶ್ರೀಲಂಕಾ ಪ್ರಜೆಗಳು ಭಾರತದ ಸೀಮೆಯನ್ನು ಪ್ರವೇಶಿಸಿದಾಗ ಬಂಧಿಸುವುದೂ ಸಾಮಾನ್ಯವಾಗಿದೆ. ನಮ್ಮ ಮೀನುಗಾರರ ಬಂಧನವಾಗುತ್ತಿದೆ ಎಂಬ ವಾದವನ್ನು ಹೂಡಿ ಕಚ್ಚತೀವನ್ನು ಚುನಾವಣಾ ಕಣಕ್ಕೆ ಎಳೆದು ತಂದಿರುವ ಮೋದಿಯ ಆಷಾಢಭೂತಿತನವನ್ನು ನಾವು ಅರಿಯಬೇಕಿದೆ.
ಆರ್‌ಟಿಐ ಅರ್ಜಿಯೊಂದಕ್ಕೆ 2015ರಲ್ಲಿ ಉತ್ತರಿಸುತ್ತಾ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, “ಕಚ್ಚತೀವು ವಿವಾದ ನಮ್ಮ ಮುಂದಿಲ್ಲ. 1974 ಮತ್ತು 1976ರ ಒಪ್ಪಂದದ ಪ್ರಕಾರ ಕಚ್ಚತೀವು ದ್ವೀಪವು ಶ್ರೀಲಂಕಾದ ವ್ಯಾಪ್ತಿಗೆ ಸೇರಿದೆ” ಎಂದಿದ್ದರು. ಮುಗಿದ ಅಧ್ಯಾಯವನ್ನು ಚುನಾವಣೆಯ ಹೊತ್ತಿನಲ್ಲಿ ಮತ್ತೆ ಕೆದಕುವ ಮೋದಿ ಇರಾದೆ ಪ್ರಶ್ನಾರ್ಹ.
ತಮಿಳುನಾಡಿನ ಮೀನುಗಾರರ ಬಂಧನದ ಬಗ್ಗೆ ಬಿಜೆಪಿ ವ್ಯಕ್ತಪಡಿಸುತ್ತಿರುವ ಕನಿಕರವೂ ಸೋಗಲಾಡಿತನದ್ದು. 2004 ರಿಂದ 2024ಮಾರ್ಚ್‌ವರೆಗೆ ಶ್ರೀಲಂಕಾವು ತಮಿಳುನಾಡಿನ ಒಟ್ಟು 6,184 ಮೀನುಗಾರರನ್ನು ಬಂಧಿಸಿದೆ. ಇದರಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಬಂಧಿತರಾದವರ ಸಂಖ್ಯೆ 2,915. ಮೋದಿ ಅವಧಿಯಲ್ಲಿ ಬಂಧಿತರಾದವರು 3,269. ಈ ವರ್ಷದಲ್ಲಿ ಈಗಾಗಲೇ 132 ಮೀನುಗಾರರನ್ನು ಬಂಧಿಸಿದೆ. ಮೋದಿ ಸರ್ಕಾರದ ಹುಸಿಕಾಳಜಿಗೆ ಹಿಡಿದ ಕನ್ನಡಿಯಿದು.
ಕಚ್ಚತೀವು ದ್ವೀಪವನ್ನು ಮರಳಿ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಮಿಳುನಾಡಿನ ಬಿಜೆಪಿ ಮುಖಂಡ ಅಣ್ಣಾಮಲೈ ಹೇಳಿರುವುದು ನಗೆಪಾಟಲಿನ ಸಂಗತಿ. ಅಮಾಯಕರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ. ಶ್ರೀಲಂಕಾ ದೇಶದ ಸಚಿವ ಜೀವನ್ ಥೋಂಡಮನ್ ಈ ಮರೆಮೋಸವನ್ನು ಬಯಲಿಗೆ ಎಳೆದಿದ್ದಾರೆ. “ಅಂತಹ ಯಾವುದೇ ಅಧಿಕೃತ ಸಂವಹನ ಭಾರತದೊಂದಿಗೆ ನಡೆದಿಲ್ಲ. ಭಾರತ ಪ್ರಸ್ತಾವನೆ ಸಲ್ಲಿಸಿದರೆ ಉತ್ತರಿಸುತ್ತೇವೆ” ಎಂದಿದ್ದಾರೆ.
ಅಕ್ರಮವಾಗಿ ಗಡಿ ದಾಟಿ ಬಂದ ಮತ್ತೊಂದು ದೇಶದ ಪ್ರಜೆಯನ್ನು ಯಾವುದೇ ದೇಶ ಬಂಧಿಸುವುದು ಸರ್ವೇಸಾಮಾನ್ಯ. ಅಂತೆಯೇ ಶ್ರೀಲಂಕಾದಿಂದ ಬಂದ ಮೀನುಗಾರರನ್ನು ಭಾರತ ಬಂಧಿಸುತ್ತದೆ. ಉಭಯ ದೇಶಗಳ ಮಾತುಕತೆಯ ಮೂಲಕ ಬಂಧಿತರನ್ನು ಬಿಡುಗಡೆಗೊಳಿಸುವುದು ಸಾಮಾನ್ಯ ಪ್ರಕ್ರಿಯೆ. ಮೋದಿ ಸರ್ಕಾರ ಈ ವಿಚಾರವಾಗಿ ಗಮನ ಹರಿಸಿಯೇ ಇಲ್ಲ ಎಂಬುದು ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತದೆ.
ಕಚ್ಚತೀವಿನ ಕುರಿತು ಬಿಡುಬೀಸಾಗಿ ಮಾತನಾಡುತ್ತಿರುವ ಬಿಜೆಪಿ ಸರ್ಕಾರ, ಚೀನಾ ತಗೆಯುತ್ತಿರುವ ತಂಟೆಯ ವಿಚಾರದಲ್ಲಿ ಮೌನ ವಹಿಸಿರುವುದು ಆತಂಕಕಾರಿ ಸಂಗತಿ. ಐದು ದಶಕಗಳ ಹಿಂದೆ ಕೈತಪ್ಪಿ ಹೋದ ಪುಟ್ಟ ದ್ವೀಪವೊಂದರ ಬಗ್ಗೆ ಇರುವ ಆಸಕ್ತಿ, ಮೋದಿ ಪ್ರಧಾನಿಯಾದ ನಂತರ ಚೀನಾ ಕಬಳಿಸಿರುವ ಸಾವಿರಾರು ಚದರ ಕಿ.ಮೀಗಳಷ್ಟು ಭೂ ಭಾಗದ ಮೇಲೆ ಯಾಕಿಲ್ಲ?
2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಮ್ಮ 20 ಸೈನಿಕರು ಹುತಾತ್ಮರಾದರು. ಚೀನಾ ದೇಶವು, ನಮ್ಮಲ್ಲಿ 8 ಸೈನಿಕರು ಸತ್ತಿದ್ದಾರೆ ಎಂದಿತು. ವಿಶೇಷವೆಂದರೆ ಗಾಲ್ವಾನ್ ಘರ್ಷಣೆಯಾದ ಮೇಲೆ, ಭಾರತದ ಸುಮಾರು 2 ಸಾವಿರ ಚದುರ ಕಿಲೋಮೀಟರ್ ಭೂಭಾಗ ಚೀನಾದ ವಶವಾಗಿದೆ!
ಮೋದಿಯವರು ಹುತಾತ್ಮರಾದ ಸೈನಿಕರ ಹೆಸರಲ್ಲಿ ರಾಜಕಾರಣ ಮಾಡುತ್ತಾರೆ. ಆದರೆ ನಮ್ಮ ಹೆಮ್ಮೆಯ ಹುತಾತ್ಮ ಸೈನಿಕ ಮೇಜರ್ ಶೈತಾನ್ ಸಿಂಗ್ ಸ್ಮಾರಕವನ್ನು ಚೀನಾ ಆಕ್ರಮಿಸಿಕೊಂಡಿದೆ. ಆದರೆ ಮೋದಿಯಾಗಲಿ, ಅವರ ಬೂಟು ನೆಕ್ಕುವ ಮಾಧ್ಯಮಗಳಾಗಲೀ ಈ ಕುರಿತು ತುಟಿಬಿಚ್ಚಿಲ್ಲ.
1962ರ ಚೀನಾ-ಭಾರತ ಯುದ್ಧದಲ್ಲಿ ಭಾರತಕ್ಕೆ ಹಿನ್ನಡೆಯಾಯಿತು. ಆದರೆ ಮೇಜರ್ ಶೈತಾನ್ ಸಿಂಗ್ ಹೋರಾಡಿದ ರೆಜಾಂಗ್ ಲಾ ಕಾಳಗ ಒಂದು ಬಗೆಯ ದಂತಕಥೆಯಾಗಿ ಇಂದಿಗೂ ಚಿರಹಸಿರಾಗಿ ಉಳಿದಿದೆ. ಶೈತಾನ್ ಸಿಂಗ್ ಅವರು ಮಡಿದ ಜಾಗದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿತ್ತು. ಆದರೆ ಆರು ದಶಕಗಳ ನಂತರ, ಅವರ ಸ್ಮಾರಕವು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಿಂದ (ಪಿಎಲ್‌ಎ) ನೆಲಸಮ ಆಗಿದೆ.
ಮೇಜರ್ ಶೈತಾನ್ ಸಿಂಗ್ ಮಾರಣಾಂತಿಕವಾಗಿ ಗಾಯಗೊಂಡ ಸ್ಥಳದಲ್ಲಿ 1963ರಲ್ಲೇ ಸ್ಮಾರಕ ನಿರ್ಮಿಸಲಾಗಿತ್ತು. ಬುಲೆಟ್ ತೂರಿದ್ದ ಹೊಟ್ಟೆಯನ್ನು ಒತ್ತಿ ಹಿಡಿದುಕೊಂಡಿದ್ದ ಸ್ಥಿತಿಯಲ್ಲಿ ಶೈತಾನ್ ಸಿಂಗ್ ಮೃತ ದೇಹ ಈ ಜಾಗದಲ್ಲಿ ಪತ್ತೆಯಾಗಿತ್ತು. ಆದರೆ ಚೀನಾ ಅತಿಕ್ರಮಣವನ್ನು ಒಪ್ಪಿಕೊಂಡಿರುವ ಮೋದಿ ಆಡಳಿತ ಚೀನಾದ ಬಫರ್ ಝೋನ್‌ಗೆ ಈ ಸ್ಮಾರಕವನ್ನು ಬಲಿ ಕೊಟ್ಟಿದೆ.
ಗಾಲ್ವಾನ್ ಮುಖಾಮುಖಿ ನಂತರ ಬಫರ್ ಜೋನ್ ರಚಿಸಲಾಗಿದೆ. ಉಭಯ ದೇಶಗಳು ಗೊಂದಲಗಳೊಂದಿಗೆ ಮಾತುಕತೆಯನ್ನು ಮುಂದುವರಿಸಿವೆ. ನಾವು ಒಂದಿಂಚೂ ಪ್ರದೇಶವನ್ನೂ ಕಳಕೊಂಡಿಲ್ಲ ಅಂತ ಮೋದಿ ವಾದಿಸುತ್ತ ಬಂದಿದ್ದಾರೆ.
ಜನವರಿಯಲ್ಲಿ ಹೊಸದಿಲ್ಲಿಯಲ್ಲಿ ನಡೆದಂತಹ ಪೊಲೀಸರ ವಾರ್ಷಿಕ ಸಮ್ಮೇಳನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧದಲ್ಲಿ ಲೇಹ್‌ನ ಹಿರಿಯ ಪೊಲೀಸ್ ಅಧೀಕ್ಷಕರಾದ ಪಿ.ಡಿ.ನಿತ್ಯ ಅವರು ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದರು. ಲಡಾಖ್‌ನಲ್ಲಿ ಕಾರಕೋರಂ ಪಾಸ್‌ನಿಂದ ಚುಮಾರ್‌ವರೆಗಿನ ಎಲ್‌ಎಸಿ ಉದ್ದಕ್ಕೂ 65 ಗಸ್ತು ಕೇಂದ್ರಗಳಲ್ಲಿ 26ಕ್ಕೆ ಮಾತ್ರ ಭಾರತ ಪ್ರವೇಶವನ್ನು ಮಾಡಲು ಸಾಧ್ಯವಾಗುತ್ತಾ ಇದೆ ಎಂದು ವಿವರಿಸಿದ್ದರು.
ಇದೆಲ್ಲವೂ ಚೀನಾ ಯಾವುದೇ ಅಂಕೆಶಂಕೆಯಿಲ್ಲದೆ ಒಳನುಗ್ಗುತ್ತಿರುವ ರೀತಿಯನ್ನು ಮತ್ತು ಅದನ್ನು ತಡೆಯುವಲ್ಲಿ ಮೋದಿ ಸರ್ಕಾರ ವಿಫಲವಾಗಿರುವುದನ್ನು ಸೂಚಿಸುತ್ತಿವೆ. ಕಚ್ಚತೀವು ಬಗ್ಗೆ ಮಾತನಾಡುವ ಮೋದಿಗೆ ಮೇಜರ್ ಶೈತಾನ್ ಸಿಂಗ್ ಸ್ಮಾರಕ ಕಳೆದುಕೊಂಡಿದ್ದು ಮರೆತು ಹೋಗಿದ್ದು ಏತಕ್ಕೆ? ಚೀನಾವನ್ನು ಕೆಂಗಣ್ಣು ಬಿಟ್ಟು ಹೆದರಿಸಬೇಕೆಂದು ಮನಮೋಹನಸಿಂಗ್ ಸರ್ಕಾರಕ್ಕೆ ತಾವು ನೀಡಿದ್ದ ಸಲಹೆಯನ್ನು ಮೋದಿ ಅಷ್ಟು ಸುಲಭಕ್ಕೆ ಮರೆತದ್ದು ಯಾಕೆ?
ಮತ್ತೊಂದು ಸಂಗತಿ- 2015ರಲ್ಲಿ ಭಾರತವು ಬಾಂಗ್ಲಾದೇಶದೊಂದಿಗೆ ’ಭೂ ಗಡಿ ಒಪ್ಪಂದ’ಕ್ಕೆ ಸಹಿಹಾಕಿತು. ಉಭಯ ದೇಶಗಳ ಬಾಂಧವ್ಯ ವೃದ್ಧಿಸುವುದು, ವಿದೇಶಾಂಗ ನೀತಿಯನ್ನು ಸುಧಾರಿಸುವುದು ಇದರ ಉದ್ದೇಶವಾಗಿತ್ತು. ಒಪ್ಪಂದದ ಭಾಗವಾಗಿ ಪ್ರಧಾನಿ ಮೋದಿಯವರು 40 ಚದುರ ಕಿಲೋ ಮೀಟರ್ ಭೂ ಭಾಗ ಭಾರತಕ್ಕೆ ನಷ್ಟವಾಯಿತು. ಇಂದಿರಾ ಗಾಂಧಿಯವರು ಒಂದೂವರೆ ಕಿ.ಮೀ. ಬಿಟ್ಟುಕೊಟ್ಟಿದ್ದು ಮಹಾಪರಾಧವಾದರೆ 40 ಚದುರ ಕಿಮೀ ಬಾಂಗ್ಲಾಕ್ಕೆ ನೀಡಿದ್ದು ಏತಕ್ಕೆ? ದೇಶಗಳ ನಡುವಿನ ವಿಚಾರವನ್ನು ಬಿಡುಬೀಸಾಗಿ ರಾಜಕಾರಣಕ್ಕೆ ಬಳಸುವ ದುಷ್ಟತನ ಇನ್ನಾದರೂ ನಿಲ್ಲಲಿ. ಚೀನಾ ಮಾಡುತ್ತಿರುವ ಅತಿಕ್ರಮಣದ ಕುರಿತು ಮೋದಿ ಈಗಲಾದರೂ ಧೈರ್ಯ ತೋರಲಿ.
