1951ರ ನಂತರದ ಲೋಕಸಭೆ ಚುನಾವಣೆಗಳಲ್ಲಿಅತಿ ಕಡಿಮೆ ಸ್ಥಾನಗಳಲ್ಲಿ ಅಂದರೆ ಸುಮಾರು 300 ಸ್ಥಾನಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮುಂದಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನದಲ್ಲಿ ಪಕ್ಷವು ದೇಶಾದ್ಯಂತ ಇಂಡಿಯಾ ಒಕ್ಕೂಟದ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಹಿಂದಿನ ಚುನಾವಣೆಗಳಲ್ಲಿ 400ಕ್ಕೂ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿತ್ತು.
ಇಲ್ಲಿಯವರೆಗೆ, ಪಕ್ಷವು ಕೇಂದ್ರಾಡಳಿತ ಪ್ರದೇಶ ಒಳಗೊಂಡು 29 ರಾಜ್ಯಗಳಲ್ಲಿ 236 ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಪಂಜಾಬ್, ಹರಿಯಾಣ, ದೆಹಲಿ, ಗೋವಾ, ಹಿಮಾಚಲ ಪ್ರದೇಶ, ದಾದ್ರಾ ಮತ್ತು ನಗರ ಹವೇಲಿ, ಚಂಡೀಗಢ ಮತ್ತು ಲಡಾಖ್ಗೆ ಇಲ್ಲಿಯವರೆಗೆ ಒಬ್ಬ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ.
1951ರ ಮೊದಲ ಚುನಾವಣೆಯಲ್ಲಿ 479 ಮಂದಿ ಸ್ಪರ್ಧಿಸಿ 364 ಮಂದಿ ಜಯಗಳಿಸಿದ್ದರು. ಕಾಂಗ್ರೆಸ್ ಕೊನೆಯದಾಗಿ ಅಧಿಕಾರ ಹಿಡಿದಿದ್ದ 2009ರಲ್ಲಿ 440 ಮಂದಿ ಕಣಕ್ಕಿಳಿದು 206 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ | ಬಿಜೆಪಿ ಮಣಿಸಲು ಕಾಂಗ್ರೆಸ್ನ ಮಹಿಳಾ ಶಕ್ತಿ ಮುಂದಾಗುವುದೇ?
ಮುಂದಿನ ಹಂತಗಳಿಗೆ ನಡೆಯುವ ಚುನಾವಣೆಗೆ ಆಂಧ್ರಪ್ರದೇಶಕ್ಕೆ ಬಹುಪಾಲು ಅಭ್ಯರ್ಥಿಗಳನ್ನು ಹೆಸರಿಸಬೇಕಾಗಿದೆ. ಹಾಗೆಯೇ ಬಿಹಾರ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಇನ್ನೂ ಕೆಲವು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಬೇಕಿದೆ. ಒಟ್ಟಾರೆಯಾಗಿ, ಕಾಂಗ್ರೆಸ್ ಕೊನೆಯ ಹಂತದ ಅಧಿಸುಚನೆಯವರೆಗೂ ಸುಮಾರು 70 ರಿಂದ 80 ಅಭ್ಯರ್ಥಿಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಜನವರಿ 4 ರ ಸಭೆಯಲ್ಲಿ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯವಾಗಿ 255 ಸ್ಥಾನಗಳ ಮೇಲೆ ಕೇಂದ್ರೀಕರಿಸುದಾಗಿ ತಿಳಿಸಿದರು. ಗೆಲ್ಲುವ ಕಡೆಗಳಲ್ಲಿ ಹಾಗೂ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಹೇಳಿದ್ದರು.
ಕಾಂಗ್ರೆಸ್ ಪಕ್ಷವು ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳ ಪ್ರಬಲವಾಗಿರುವ ಕ್ಷೇತ್ರಗಳು ಹಾಗೂ ರಾಜ್ಯಗಳಲ್ಲಿ ಬೆಂಬಲ ನೀಡುವುದಾಗಿ ತಿಳಿಸಿದೆ.
ಕಾಂಗ್ರೆಸ್ ತನ್ನ ಮಿತ್ರಪಕ್ಷಗಳಿಗೆ ಸೀಟುಗಳನ್ನು ಬಿಟ್ಟುಕೊಟ್ಟಿದ್ದರಿಂದಾಗಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಪಕ್ಷವು ರಾಜಸ್ಥಾನದಲ್ಲಿ ಆರ್ಎಲ್ಪಿ ಮತ್ತು ಸಿಪಿಎಂ, ಉತ್ತರಪ್ರದೇಶದಲ್ಲಿ ಎಸ್ಪಿ ಮತ್ತು ಹರಿಯಾಣದಲ್ಲಿ ಎಎಪಿ ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಎಡಪಕ್ಷಗಳಿಗೆ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡುವ ಸಾಧ್ಯತೆಯಿದೆ.
2019 ರಲ್ಲಿ ಉತ್ತರ ಪ್ರದೇಶದಲ್ಲಿ 67 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಪಕ್ಷವು ಈ ಬಾರಿ 17 ಸ್ಥಾನಗಳಲ್ಲಿ ಮಾತ್ರ ಕಣಕ್ಕಿಳಿದಿದೆ.
