ಭಾರತದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳು ನಡೆಯಬೇಕು ಎಂಬ ವಿಶ್ವಸಂಸ್ಥೆ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಜಾಗತಿಕ ಸಂಸ್ಥೆ ನಮ್ಮ ದೇಶದ ಚುನಾವಣೆಯ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ತಿರುವನಂತಪುರಂನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಜೈಶಂಕರ್, ಕಳೆದ ವಾರ ವಿಶ್ವಸಂಸ್ಥೆಯ ವಕ್ತಾರರು ಭಾರತದ ಚುನಾವಣೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ತುಂಬ ಭಾವನಾತ್ಮಕವಾಗಿ ಪರಿಣಾಮ ಬೀರುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ವಿಶ್ವಸಂಸ್ಥೆಯು ನಮ್ಮ ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತ ನಡೆಯಬೇಕೆಂದು ಹೇಳುವ ಅಗತ್ಯವಿಲ್ಲ. ನಮಗೆ ಭಾರತದ ಜನರಿದ್ದಾರೆ. ಭಾರತದ ಜನರು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವ ಬಗ್ಗೆ ಖಾತ್ರಿಪಡಿಸುತ್ತಾರೆ. ಆದ್ದರಿಂದ ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಂದೋ ಕೈತಪ್ಪಿದ ‘ಕಚ್ಚತೀವು’ ಕಥೆ ಇರಲಿ; ಚೀನಾ ಅತಿಕ್ರಮಣ ಬಗ್ಗೆ ಮೋದಿ ಮಾತಾಡಲಿ
ಕಳೆದ ವಾರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ವಕ್ತಾರರಾದ ಸ್ಟೀಫೆನ್ ದುಜಾರಿಕ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಹಾಗೂ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಅಶಾಂತಿಯ ಬಗ್ಗೆ ಮಾತನಾಡಿದ್ದರು.
“ಚುನಾವಣೆಗಳು ನಡೆಯುವ ಯಾವುದೇ ದೇಶದಲ್ಲಿ ರಾಜಕೀಯ ನಾಯಕರು ಹಾಗೂ ನಾಗರಿಕರ ಹಕ್ಕುಗಳನ್ನು ಒಳಗೊಂಡು ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ.ಪ್ರತಿಯೊಬ್ಬರಿಗೂ ಮತದಾನ ಮಾಡಲು ಮುಕ್ತ ಮತ್ತು ನ್ಯಾಯಸಮ್ಮತ ವಾತಾವರಣವನ್ನು ಕಲ್ಪಿಸಬೇಕು. ಇದನ್ನು ನಾವು ಭಾರತದಲ್ಲೂ ಕೂಡ ಆಶಿಸುತ್ತೇವೆ” ಎಂದು ಹೇಳಿದ್ದರು.
ವಿಶ್ವಸಂಸ್ಥೆ ಹೇಳಿಕೆಗೂ ಮೊದಲು ಜರ್ಮನಿ ಹಾಗೂ ಅಮೆರಿಕ ಕೂಡ ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಆದರೆ ಭಾರತ ಇವೆರೆಡೂ ದೇಶಗಳ ಹೇಳಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತ್ತು.

ಹಾಗಾದ್ರೆ, ಭಾರತದ ವಿದೇಶಾಂಗ ಸಚಿವ ಜೈಶಂಕರ್ ವಿಶ್ವಸಂಸ್ಥೆಗೆ ಪಾಠ ಮಾಡುವರೇ…