ಪ್ರಜಾಪ್ರಭುತ್ವ ಯಶಸ್ಸಿಗೆ ಕಡ್ಡಾಯವಾಗಿ ಮತದಾನವನ್ನು ಮಾಡುವುದು ಅತ್ಯವಶ್ಯ. ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ಮತದಾನ ಮಾಡುವ ಹಕ್ಕು ನೀಡಿದೆ ಎಂದು ಶಿಗ್ಲಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಕೊರಕನವರ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿಯ ವಲಸೆ ಯಾಕ್ರೀ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನದ ಸಮುದಾಯ ಕಾಮಗಾರಿ ಸ್ಥಳದಲ್ಲಿ ಏರ್ಪಡಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಎಲ್ಲ ಅರ್ಹ ನಾಗರಿಕರು ಕಡ್ಡಾಯವಾಗಿ ಮತದಾನ ಮಾಡುವುದರಿಂದ ಮಾತ್ರ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ಸಾಂವಿಧಾನಿಕ ಹಕ್ಕಾದ ಮತದಾನ ಕಾರ್ಯದಲ್ಲಿ ಎಲ್ಲರೂ ತಪ್ಪದೇ ಪಾಲ್ಗೊಳ್ಳುವಂತಾಗಬೇಕು. ಮೇ 7ರಂದು ಲೋಕಸಭೆ ಚುನಾವಣೆಗೆ ಮತದಾನ ಜರುಗಲಿದ್ದು, ಕುಟುಂಬದ ಎಲ್ಲ ಸದಸ್ಯರೊಂದಿಗೆ ಭಾಗಿಯಾಗಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮೋದಿ ಪ್ರಧಾನಿಯಾದರೆ ಸಂವಿಧಾನಕ್ಕೆ ಅಪಾಯ: ಗೃಹ ಸಚಿವ ಪರಮೇಶ್ವರ್
“ಈ ಬೇಸಿಗೆ ಅವಧಿಯಲ್ಲಿ ಹೆಚ್ಚು ಕೆಲಸ ಒದಗಿಸಲು ಮನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿ ಆರಂಭಿಸಲಾಗಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು” ಎಂದರು.
ಗ್ರಾ.ಪಂ ಸಿಬ್ಬಂದಿಗಳಾದ ಕವಿತಾ ಅಣ್ಣಿಗೇರಿ, ಎಸ್ ಡಿ ಗೋಣೆಪ್ಪಮವರ, ಟಿಎಇವಿಎಸ್ ಅಳವಂಡಿಮಠ, ಗ್ರಾಪಂ ಇತರ ಸಿಬ್ಬಂದಿ, ಉದ್ಯೋಗ ಖಾತ್ರಿ ಕಾಯಕ ಬಂಧುಗಳು, ಕೂಲಿಕಾರ್ಮಿಕರು ಇದ್ದರು.
