ಉತ್ತರ ಪ್ರದೇಶ ಮದರಸಾ ಕಾಯ್ದೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಉತ್ತರ ಪ್ರದೇಶದ ಮದರಸಾ ಶಿಕ್ಷಣ ಕಾಯ್ದೆ 2004 ಜಾತ್ಯತೀತ ಮೌಲ್ಯಗಳನ್ನು ಉಲ್ಲಂಘಿಸುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಕಾಯ್ದೆಯನ್ನು ರದ್ದುಗೊಳಿಸಿತ್ತು. ಇದಲ್ಲದೆ ರಾಜ್ಯ ಸರ್ಕಾರ ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರಿಗೆ ಔಪಚಾರಿಕ ಶಾಲಾ ಶಿಕ್ಷಣ ವ್ಯವಸ್ಥೆ ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಈ ಆದೇಶದಿಂದ ಉತ್ತರ ಪ್ರದೇಶದ ಮದರಸಾಗಳಲ್ಲಿ ವ್ಯಾಸಂಗ ಮಾಡುತ್ತಿರುವ 17 ಲಕ್ಷ ವಿದ್ಯಾರ್ಥಿಗಳು ಹಾಗೂ 10 ಸಾವಿರ ಶಿಕ್ಷಕರ ಭವಿಷ್ಯಕ್ಕೆ ಅಡ್ಡಿಯುಂಟಾಗಿತ್ತು.
ಉತ್ತರ ಪ್ರದೇಶದಲ್ಲಿ 25 ಸಾವಿರ ಮದರಸಗಳಿದ್ದು, ಅವುಗಳಲ್ಲಿ 16 ಸಾವಿರ ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯಲ್ಲಿ ಮಾನ್ಯತೆ ಪಡೆದಿವೆ.
ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ನೊಟೀಸ್ ನೀಡಿದೆ.
ಮದರಸಾ ಕಾಯ್ದೆ ಧಾರ್ಮಿಕ ಶಿಕ್ಷಣ ನೀಡುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಂದೋ ಕೈತಪ್ಪಿದ ‘ಕಚ್ಚತೀವು’ ಕಥೆ ಇರಲಿ; ಚೀನಾ ಅತಿಕ್ರಮಣ ಬಗ್ಗೆ ಮೋದಿ ಮಾತಾಡಲಿ
ಹೈಕೋರ್ಟ್ ಆದೇಶ ಪ್ರಶ್ನಿಸಿ ವಕೀಲರಾದ ಸಂಜೀವ್ ಮಲ್ಹೋತ್ರಾ ಮತ್ತು ಪ್ರದೀಪ್ ಕುಮಾರ್ ಯಾದವ್ ಅವರ ಮೂಲಕ ಮೇಲ್ಮನವಿ ಸಲ್ಲಿಸಲಾಗಿದೆ.
ಮದರಸಾಗಳು ಇಸ್ಲಾಮಿಕ್ ಅಧ್ಯಯನ ಮತ್ತಿತರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತವೆ. ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆ- 2004 ಪ್ರಕಾರ ಮದರಸಾ ಶಿಕ್ಷಣ ಎಂಬುದು ಅರೇಬಿಕ್, ಉರ್ದು, ಪರ್ಷಿಯನ್, ಇಸ್ಲಾಮಿಕ್-ಅಧ್ಯಯನಗಳು, ತತ್ವಶಾಸ್ತ್ರ ಹಾಗೂ ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ನಿರ್ದಿಷ್ಟಪಡಿಸಿದ ಇತರ ಕಲಿಕಾ ಕ್ಷೇತ್ರವನ್ನು ಒಳಗೊಂಡಿದೆ.
ಜೈನರು, ಸಿಖ್ಖರು, ಬೌದ್ಧರು ಶಿಕ್ಷಣ ಸಂಸ್ಥೆಗಳನ್ನು ಹೊಂದಬಹುದಾದರೆ ಮುಸ್ಲಿಂ ಸಮುದಾಯ ಏಕೆ ಹೊಂದಬಾರದು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
