ಸಂವಿಧಾನವನ್ನು ಕಾಪಾಡಿಕೊಳ್ಳಲು, ಶಾಂತಿಯ ತೋಟವನ್ನು ಸಂರಕ್ಷಿಸಿಕೊಳ್ಳಲು, ಏಪ್ರಿಲ್ 7ರಂದು ವಿಜಯಪುರದಲ್ಲಿ ʼದೇಶ ಉಳಿಸಿ ಸಂಕಲ್ಪ ಯಾತ್ರೆʼ ನಡೆಯಲಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀನಾಥ ಪೂಜಾರ್ ಅವರು ಹೇಳಿದರು.
ವಿಜಯಪುರ ನಗರದ ಬೆಂಗಳೂರು ರೆಸ್ಟೋರೆಂಟ್ ಹಾಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಅಂಬೇಡ್ಕರ್ ಸರ್ಕಲ್ ವರೆಗೂ ರ್‍ಯಾಲಿ ನಡೆಯುವುದು, ಬರಲಿರುವ ಲೋಕಸಭಾ ಚುನಾವಣೆ ಮುಂದಿನ 5 ವರ್ಷಗಳ ಕಾಲ ನಮ್ಮನ್ನು ಯಾರು ಆಳಬೇಕು ಎಂಬುದನ್ನು ತೀರ್ಮಾನಿಸುವ ಚುನಾವಣೆ ಮಾತ್ರವಾಗಿರದೆ, ಈ ದೇಶ ಪ್ರಜಾತಂತ್ರ ವ್ಯವಸ್ಥೆಯಡಿ ಇರಬೇಕಾ, ಸರ್ವಾಧಿಕಾರಕ್ಕೆ ಒಳಗಾಗಬೇಕಾ ಎಂಬುದನ್ನು ನಿರ್ಧರಿಸುವ ಚುನಾವಣೆಯಾಗಿದೆ ಎಂದರು.
ದೇಶ ಅವನತಿಯ ಅಂಚಿಗೆ ಬಂದು ನಿಂತಿದೆ. ಈ ಅವನತಿಯಿಂದ ದೇಶವನ್ನು ಸಂರಕ್ಷಿಸಿಕೊಳ್ಳಲು ಸಂಕಲ್ಪ ಜಾಥ ಪ್ರಾರಂಭವಾಗಿದೆ, ಈ ಯಾತ್ರೆಯ ವಿವರ, ಗುರಿ, ಉದ್ದೇಶಗಳ ಬಗ್ಗೆ ಅತಿ ಹೆಚ್ಚಿನ ಪ್ರಚಾರ ನೀಡಬೇಕೆಂದು ತಮ್ಮಲ್ಲಿ ಕೋರುತ್ತೇವೆ ಎಂದರು.
ಯಾತ್ರೆಯ ವಿವರ: ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏ. 1ರಂದು ಚಾಲನೆ ಪಡೆದಿರುವ ʼದೇಶ ಉಳಿಸಿ ಸಂಕಲ್ಪ ಯಾತ್ರೆʼಯ ಮೂರು ವಾಹನಗಳು, ಮೂರು ಮಾರ್ಗಗಳಲ್ಲಿ ಚಲಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಹಾಯ್ದು ಏಪ್ರಿಲ್ 8ರಂದು ಬೆಳಗಾವಿ ತಲುಪಲಿದೆ. ಅಲ್ಲಿ ದೇಶ ಉಳಿಸಿ ಸಂಕಲ್ಪ ಸಮಾವೇಶ ಜರುಗಲಿದೆ. ಅದರಲ್ಲಿ ನಾಡಿನ ಎಲ್ಲಾ ಸಂಘಟನೆಗಳ, ಸಮುದಾಯಗಳ, ಸಾಹಿತ್ಯ-ಸಾಂಸ್ಕೃತಿಕ ವಲಯದ ಮುಂದಾಳುಗಳು ಸಮಾಗಮಗೊಳ್ಳಲಿದ್ದಾರೆ. ಈ ದೇಶವನ್ನು ಸರ್ವಾಧಿಕಾರದಿಂದ, ದ್ವೇಷರಾಜಕಾರಣದಿಂದ ಸುಲಿಗೆಕೋರ ನೀತಿಗಳಿಂದ ಕಾಪಾಡಿಕೊಳ್ಳುವ ಪಣ ತೊಡಲಾಗುತ್ತದೆ.
ಹಿನ್ನೆಲೆ: ರಾಜ್ಯದ ಸಾಹಿತಿ, ಚಿಂತಕರು, ಹೋರಾಟಗಾರರ ನಡುವೆ ಜನವರಿ, ಫೆಬ್ರವರಿ ತಿಂಗಳುಗಳಲ್ಲಿ ಹಲವು ಸಮಾಲೋಚನಾ ಸಭೆಗಳು ನಡೆದವು. ಬರಲಿರುವ ಚುನಾವಣೆಗಳ ಗಂಭೀರತೆಯ ಬಗ್ಗೆ, ಈ ಚುನಾವಣೆಗಳಲ್ಲಿ ನಾಗರಿಕ ಸಮಾಜದ ಪಾತ್ರದ ಬಗ್ಗೆ ಆಳವಾದ ಮಂಥನಗಳು ನಡೆದವು. ರಾಜ್ಯವ್ಯಾಪಿಯಾಗಿ ವಿವಿಧ ಸಂಘಟನೆ ಮತ್ತು ವೇದಿಕೆಗಳಡಿ ಸಂವಿಧಾನ ರಕ್ಷಣೆಗಾಗಿ, ಸಹಬಾಳ್ವೆಯ ಮರುಸ್ಥಾಪನೆಗಾಗಿ ಅನೇಕ ಪ್ರಯತ್ನಗಳು ನಡೆಯುತ್ತಿವೆ.
ಈ ಎಲ್ಲಾ ಜೀವಪರ ಧಾರೆಗಳ ನಡುವೆ ತಳಮಟ್ಟದಲ್ಲೂ ಸಮರ್ಥ ಸಮನ್ವಯ ರೂಪಗೊಳ್ಳಬೇಕು ಹಾಗೂ ನಾವೆಲ್ಲರೂ ಕೂಡಿ ಒಕ್ಕೊರಲ ಸಂಕಲ್ಪ ತೊಡಬೇಕು, ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲಾ ಜನಪರ ಶಕ್ತಿಗಳ ನಡುವೆ ಸಮನ್ವಯವನ್ನು ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಜನಪರ ಶಕ್ತಿಗಳ ಐಕ್ಯ ನಿಲುವಿನ ಘೋಷಣೆಗಾಗಿ ಏಪ್ರಿಲ್ 8 ರಂದು ಬೆಳಗಾವಿಯಲ್ಲಿ ಸಂಕಲ್ಪ ಸಮಾವೇಶ ಜರುಗಲಿದೆ.
ಗುರಿ: ಕರ್ನಾಟಕದಲ್ಲಿ ಅನೇಕ ಜನ ಚಳವಳಿಗಳು, ಸಂಘಟನೆಗಳು, ವೇದಿಕೆಗಳು ಇದ್ದರೂ ಗುರಿ ಒಂದೇ ಆಗಿದ್ದು, ಬರಲಿರುವ ಚುನಾವಣೆಗಳಲ್ಲಿ ಸಂವಿಧಾನ ವಿರೋಧಿ, ಧರ್ಮಾಂಧ, ಸುಲಿಗೆಕೋರ ಬಿಜೆಪಿಯನ್ನು ಸೋಲಿಸುವುದು. ಬಣ್ಣ ಬಣ್ಣದ ಕನಸುಗಳ ಮಹಾಪೂರ ಹರಿಸಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ತನ್ನ ನಿಜಬಣ್ಣವನ್ನು ತೋರಿಸಿಕೊಂಡಿದೆ, ದೇಶದ ಪರಿಸ್ಥಿತಿಯನ್ನು ಅಧೋಗತಿಗೆ ತಂದಿಟ್ಟಿದೆ.
ಜನಸಾಮಾನ್ಯರ ಬದುಕನ್ನು ಪಾತಾಳಕ್ಕೆ ತುಳಿದಿದೆ. ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ನಿರುದ್ಯೋಗ, ಭ್ರಷ್ಟಾಚಾರ, ಕಂಪನಿಗಳ ಲೂಟಿ, ಜನಸಾಮಾನ್ಯರ ಸುಲಿಗೆ ಆದ ಅನ್ಯಾಯ ಹೆಚ್ಚುತ್ತಿರುವ ಹಿಂಸೆ, ದಮನ, ದೌರ್ಜನ್ಯ, ಧಾರ್ಮಿಕತೆ, ದೇಶದ ಬೆಳವಣಿಗೆಗಳಾಗಿವೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸ್ಲಂ ಅಭಿವೃದ್ಧಿ ಸಮಿತಿಯ ಮಾಜಿ ಜಿಲ್ಲಾ ಅಧ್ಯಕ್ಷರಾದ ಅಕ್ರಂ ಮಾಶಾಳಕರ, ಜಮಾತೆ ಇಸ್ಲಾಂ ಸ್ಥಾನಿಕ ಅಧ್ಯಕ್ಷರಾದ ಐ.ಎನ್. ಹುಲಿಕಟ್ಟಿ, ಎದ್ದೇಳು ಕರ್ನಾಟಕ ಜಿಲ್ಲೆಯ ಕೋಆರ್ಡಿನೇಟರ್ ಮಹಮ್ಮದ್ ಅಬ್ದುಲ್ ಖದಿರ್, ಸ್ಲಂ ಅಭಿವೃದ್ಧಿ ನಗರ ಸಮಿತಿ ಅಧ್ಯಕ್ಷರಾದ ಮುತ್ತಣ್ಣ ಬೋವಿ ಇತರರು ಇದ್ದರು.
