ಬಿಜೆಪಿಗೆ ಸೇರ್ಪಡೆಯಾಗದಿದ್ದರೆ ತಮ್ಮನ್ನು ಬಂಧಿಸಲಾಗುತ್ತದೆ ಎಂದು ಬಿಜೆಪಿಯವರು ಬೆದರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ ದೆಹಲಿ ಸಚಿವೆ ಅತಿಶಿ ಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆರೋಪದಡಿ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಆಯೋಗವು ನೋಟಿಸ್ ನೀಡಿದ್ದು, ಶನಿವಾರ ಸಂಜೆ 5 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದೆ.
“ಇವರು ಮಂತ್ರಿಯಾಗಿರುವುದರಿಂದ ಸಾರ್ವಜನಿಕವಾಗಿ ಇವರು ಹೇಳಿದ ಮಾತನ್ನು ಮತದಾರರು ನಂಬುತ್ತಾರೆ. ಒಂದು ವೇಳೆ ಈ ಮಾತನ್ನು ಹೇಳಿದ್ದರೆ ದಾಖಲೆ ಆಧಾರದ ಮೇಲೆ ದೃಢಪಡಿಸಲು ಸಿದ್ಧರಿರಬೇಕು. ಹೇಳಿಕೆಗೆ ಸಂಬಂಧಿಸಿದಂತೆ ಏ.6, 2024ರಂದು ಸಂಜೆ 5 ಗಂಟೆಯೊಳಗೆ ಪ್ರತಿಕ್ರಿಯೆ ನೀಡಬೇಕು” ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಂದೋ ಕೈತಪ್ಪಿದ ‘ಕಚ್ಚತೀವು’ ಕಥೆ ಇರಲಿ; ಚೀನಾ ಅತಿಕ್ರಮಣ ಬಗ್ಗೆ ಮೋದಿ ಮಾತಾಡಲಿ
ನೋಟಿಸ್ ಸ್ವೀಕರಿಸಿದ ನಂತರ ಮಾತನಾಡಿದ ಅತಿಶಿ, ಬಿಜೆಪಿ ದೂರು ನೀಡಿದ ನಂತರ ಚುನಾವಣಾ ಆಯೋಗವು ಮೊದಲು ಮಾಧ್ಯಮಗಳಲ್ಲಿ ನೋಟಿಸ್ ಭಿತ್ತರಿಸುತ್ತದೆ. ನಂತರ ನಾನು ಪಡೆಯುತ್ತೇನೆ. ನನ್ನ ಪ್ರಶ್ನೆ ಏನಂದರೆ ಚುನಾವಣಾ ಆಯೋಗ ಬಿಜೆಪಿಯ ಅಂಗಸಂಸ್ಥೆ ಆಗಿದೆಯೆ” ಎಂದು ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ನೀವು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸದಿದ್ದರೆ, ಚುನಾವಣಾ ಆಯೋಗ ತಪ್ಪು ಮಾಡುತ್ತಿದೆ ಎಂದು ಇತಿಹಾಸ ನೆನಸಿಕೊಳ್ಳುತ್ತದೆ” ಎಂದು ಹೇಳಿದರು.
“ನನ್ನ ನಿಕಟವರ್ತಿಗಳ ಕೆಲವರ ಮೂಲಕ ಬಿಜೆಪಿ ನನ್ನನ್ನು ಸಂಪರ್ಕಿಸಿತ್ತು. ನೀವು ನಿಮ್ಮ ರಾಜಕೀಯ ವೃತ್ತಿಯನ್ನು ಉಳಿಸಿಕೊಳ್ಳಬೇಕಾದರೆ ಬಿಜೆಪಿಗೆ ಸೇರಬೇಕೆಂದು ಅವರು ಹೇಳಿದ್ದರು. ನಾನು ಬಿಜೆಪಿ ಸೇರದಿದ್ದರೆ ಇ.ಡಿ ಒಂದು ತಿಂಗಳೊಳಗೆ ಬಂಧಿಸುತ್ತದೆ ಎಂದು ಬೆದರಿಸಿದ್ದರು” ಎಂದು ಅತಿಶಿ ಮಂಗಳವಾರ (ಏ.2) ಆರೋಪಿಸಿದ್ದರು.
