ರೈಲು ನಿಲ್ದಾಣಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವುದು, ಹೊಸ ರೈಲುಗಳ ಪ್ರಾರಂಭ, ರೈಲುಗಳ ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅರವಿಂದ ಶ್ರೀವಾಸ್ತವ್ ಅವರಿಗೆ ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶ್ ಸಿಂಗ್ ಬ್ಯಾಳಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗಣೇಶ್ ಸಿಂಗ್ ಬ್ಯಾಳಿ, ಗದಗ-ವಾಡಿ ವಯಾ ಕೋಟುಮಚಗಿ, ನರೇಗಲ್, ಗಜೇಂದ್ರಗಡ, ಹನುಮಸಾಗರ, ಇಳಕಲ್-ವಾಡಿ ಮಾರ್ಗದ ಯೋಜನೆಯನ್ನು 1910ರಲ್ಲಿ ಬ್ರಿಟಿಷ್ ಸರ್ಕಾರ ಮಂಜೂರು ಮಾಡಿತ್ತು. ಆದರೆ, ನಮ್ಮ ಭಾಗದ ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಈ ಯೋಜನೆ ಗದಗ-ವಾಡಿ ಹೆಸರಿನಲ್ಲಿ ಕೊಪ್ಪಳ ಮಾರ್ಗವಾಗಿ ಸ್ಥಳಾಂತರಗೊಂಡಿತು ಎಂದು ಬೇಸರ ವ್ಯಕ್ತಪಡಿಸಿದರು.
ಸಮಿತಿಯ ಹೋರಾಟದ ಫಲವಾಗಿ ಅದಕ್ಕೆ ಪರ್ಯಾಯವಾಗಿ ಗದಗ-ಕೋಟುಮಚಗಿ-ನರೇಗಲ್-ಹನುಮಸಾಗರ-ಇರಕಲ್ಲ-ಕೃಷ್ಣನಗರ ಯೋಜನೆ ಮಂಜೂರಾಯಿತು. ಈ ಯೋಜನೆ ಸರ್ವೇ ಮಾಡಲು ಅಕ್ಟೋಬರ್ 2018ರಲ್ಲಿ ಪಾಟೀಲ್ ಎಂಜಿನಿಯರ್ಸ್ ಗ್ರೂಪ್‌ಗೆ ಗುತ್ತಿಗೆ ಸಹ ನೀಡಲಾಗಿತ್ತು. ಆಗ ನಾವೆಲ್ಲ ಸಂಭ್ರಮಾಚರಣೆ ಮಾಡಿದ್ದೆವು. ಆದರೆ, ಈ ಯೋಜನೆ ಸಹ ಕಾರ್ಯರೂಪಕ್ಕೆ ಬರದಿರುವುದು ದುರದೃಷ್ಟಕರ. ಆದಕಾರಣ ಕೂಡಲೇ ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕು, ಎಂದು ಒತ್ತಾಯಿಸಿದರು.
ಹೊಂಬಳ ಬ್ರಿಡ್ಜ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು, ಗದಗ ರೈಲ್ವೆ ಕ್ವಾಟ್ರರ್ಸ್ ಆವರಣದಲ್ಲಿ ಕೇಂದ್ರೀಯ ವಿದ್ಯಾಲಯ ಹಾಗೂ ಈಜುಕೊಳ ಆರಂಭಿಸಲು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಗದಗದಿಂದ-ಬೆಂಗಳೂರು-ಗದಗ ವಂದೇ ಭಾರತ್ ರೈಲು ಆರಂಭ, ಗದಗ-ಬೆಂಗಳೂರು ಗದಗ ವಯಾ ಹೊಸಪೇಟೆ ಇಂಟರ್‌ಸಿಟಿ, ಗದಗ ಹೈದರಾಬಾದ್-ಗದಗ ಇಂಟರ್‌ಸಿಟಿ, ಮಂತ್ರಾಲಯಕ್ಕೆ ಹೋಗಿ ಬರಲು ಅನುಕೂಲವಾಗುವಂತೆ ಗದಗ-ರಾಯಚೂರು-ಗದಗ ಇಂಟರ್‌ಸಿಟಿ ರೈಲು, ಶ್ರೀಶೈಲಕ್ಕೆ ಹೋಗಿ ಬರಲು ಅದಕ್ಕೆ ಸಮೀಪದ ಕರ್ನೂಲ್‌ಗೆ ಗದಗದಿಂದ ಇಂಟರ್‌ಸಿಟಿ ರೈಲುಗಳು ಹೊಸದಾಗಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಧಾರವಾಡ-ಸೊಲ್ಲಾಪೂರ-ಧಾರವಾಡ ಗಾಡಿ ಸಂಖ್ಯೆ 07322, ಫಂಡರಾಪುರದವರೆಗೆ, ಯಶವಂತಪುರ-ಹೊಸಪೇಟೆ-ಯಶವಂತಪುರ ಗಾಡಿ ಸಂಖ್ಯೆ 06243 ಅದನ್ನು ಗದಗವರೆಗೆ, ಬಾಗಲಕೋಟ-ಬೆಂಗಳೂರು-ಬಾಗಲಕೋಟ ಗಾಡಿ ಸಂಖ್ಯೆ 17307 ಅದನ್ನು ಗದಗವರೆಗೆ, ಹುಬ್ಬಳ್ಳಿ-ಹಜರತ್ ನಿಜಾಮುದ್ದೀನ್-ಹುಬ್ಬಳ್ಳಿ ಗಾಡಿ ಸಂಖ್ಯೆ 12779 ಗೋವಾ ಎಕ್ಸ್‌ಪ್ರೆಸ್ ಅನ್ನು ಗದಗವರೆಗೆ, ಕೊಲ್ಲಾಪೂರ-ತಿರುಪತಿ-ಕೊಲ್ಲಾಪುರ ಗಾಡಿ ಸಂಖ್ಯೆ 17416 ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು ಚೆನ್ನೈವರೆಗೆ, ಹುಬ್ಬಳ್ಳಿ ರಾಮೇಶ್ವರ-ಹುಬ್ಬಳ್ಳಿ ಸಾಪ್ತಾಹಿಕ ರೈಲು 07355 ಗದಗವರೆಗೆ ಹಾಗೂ ಹುಬ್ಬಳ್ಳಿ-ಬಳ್ಳಾರಿ-ಹುಬ್ಬಳ್ಳಿ 17330 ಮೀರಜ್‌ವರೆಗೆ ವಿಸ್ತರಿಸಬೇಕು ಎಂದು ಕೋರಿದರು.
ಮನವಿ ಸ್ವೀಕರಿಸಿದ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅರವಿಂದ ಶ್ರೀವಾಸ್ತವ್ ಮಾತನಾಡಿ, ಗದಗ ಜಿಲ್ಲೆಯ ಜನರ ಬೇಡಿಕೆಗಳು ಸೂಕ್ತವಾಗಿದ್ದು ತಮ್ಮ ವ್ಯಾಪ್ತಿಗೆ ಬರುವ ಬೇಡಿಕೆಗಳನ್ನು ಈಡೇರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಎಂ.ಟಿ. ಕಬ್ಬಿಣದ, ಕೆ.ಎಸ್. ಲಕ್ಕುಂಡಿ, ಸಂಧ್ಯಾ ಗುಂಡಿ, ಈರಣ್ಣ ಜ್ಯೋತಿ, ಅಶೋಕ ಅಂಗಡಿ, ವಿವೇಕರಾಣಿ ನಿಯೋಗದಲ್ಲಿ ಇದ್ದರು.
