ಬಾಬು ಜಗಜೀವನ್ ರಾಂ ಅವರು ಬಿಹಾರ ರಾಜ್ಯದಲ್ಲಿ ಚಮ್ಮಾರ ಸಮಾಜದಲ್ಲಿ ಜನಿಸಿ, ಉನ್ನತ ಶಿಕ್ಷಣ ಪಡೆದು ಬಿಹಾರ ರಾಜ್ಯದಿಂದ 9 ಬಾರಿ ಲೋಕಸಭೆಗೆ ಸ್ಪರ್ಧಿಸಿ ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ, ರೈಲ್ವೆ, ಕೃಷಿ, ರಕ್ಷಣೆ ಹಲವಾರು ಇಲಾಖೆಯ ಸಚಿವರಾಗಿ ಕೆಲಸ ಮಾಡಿದ್ದಾರೆ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ ಎಸ್ ಮಾಳಗಿ ಹೇಳಿದರು.
ಹಾವೇರಿ ನಗರದ ಕಾಗಿನೆಲೆ ರೋಡಿನಲ್ಲಿರುವ ಮುರುಘರಾಜೇಂದ್ರ ಮಠದಲ್ಲಿ ಹಮ್ಮಿಕೊಂಡಿದ್ದ ಮಾಜಿ ಉಪಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ ಬಾಬು ಜಗಜೀವನ್ ರಾಂ ಅವರ 117ನೇ ಜಯಂತಿ ವೇಳೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
“ರಕ್ಷಣಾ ಸಚಿವರಿದ್ದ ಸಂದರ್ಭದಲ್ಲಿ ಬಾಂಗ್ಲಾದೇಶ ಪಾಕಿಸ್ಥಾನ ಯುದ್ದ ನಡೆದಾಗ ಭಾರತದ ಯೋಧರಿಗೆ ಆತ್ಮಸ್ಥೈರ್ಯ ತುಂಬಿ ಯುದ್ಧವನ್ನು ಗೆದ್ದ ಕೀರ್ತಿ ಜಗಜೀವನ್ ರಾಂ ಅವರಿಗೆ ಸಲ್ಲುತ್ತದೆ. ದೇಶದ ರೈತರಿಗೆ ಬೀಜ, ಗೊಬ್ಬರ ನೀರಾವರಿ ಕಲ್ಪಿಸಿಕೊಟ್ಟು ದೇಶದಲ್ಲಿ ಬೆಳೆದ ಆಹಾರವನ್ನು ಪಡಿತರ ಮೂಲಕ ಜನರಿಗೆ ನೀಡಿದರು. ಉಪ ಪ್ರಧಾನಮಂತ್ರಿಗಳಾಗಿ ದೇಶಕ್ಕೆ ತಮ್ಮದೆ ಆದ ಸೇವೆ ಸಲ್ಲಿಸಿದ್ದಾರೆ. ಇವರನ್ನು ಹಸಿರು ಕ್ರಾಂತಿಯ ಹರಿಕಾರರೆಂದು ಕರೆಯಲಾಗುತ್ತದೆ” ಎಂದು ಅವರ ಸಾಧನೆಗಳ ಬಗ್ಗೆ ಮಾತನಾಡಿದರು.
ಕರ್ನಾಟಕ ರಾಜ್ಯ ಪರಿಶಿಷ್ಟಿ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಾಜಾಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ, “ಬಾಬು ಜಗಜೀವನ್ ರಾಂ ಅವರು ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ದೇಶದ ಕಾರ್ಮಿಕರ ಹಕ್ಕು ಬಾಧ್ಯತೆಗಳ ಬಗ್ಗೆ ಕಾನೂನನ್ನು ಜಾರಿಗೆ ತಂದು ಈ ದೇಶದ ಕಾರ್ಮಿಕರಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡಿದರು. ಈ ದೇಶದಲ್ಲಿ ಎಲ್ಲಿಯವರೆಗೂ ಜಾತೀಯತೆ ಇರುತ್ತದೆಯೋ ಅಲ್ಲಿಯವರೆಗೂ ಈ ಸಮುದಾಯಕ್ಕೆ ಮೀಸಲಾತಿಯ ಅವಶ್ಯವಿದೆಯೆಂದು ಕೇಂದ್ರ ಸರ್ಕಾರದ ಮೇಲೆ ಹಲವಾರು ಬಾರಿ ಒತ್ತಡ ತಂದಿದ್ದರು. ಬಾಬು ಜಗಜೀವನ್ ರಾಂ ಅವರಿಗೆ ಸರ್ಕಾರವು ಭಾರತ ರತ್ನ ಪ್ರಶಸ್ತಿ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬಾಬು ಜಗಜೀವನರಾಂ ರವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು: ಜಿಲ್ಲಾಧಿಕಾರಿ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ಮುಖಂಡರುಗಳಾದ ವೈ ಎನ್ ಮಾಸೂರ, ಸುಕ್ಷೇತ್ರ ದೇವರಗುಡ್ಡದ ಗೊರವಯ್ಯನವರಾದ ಕರಿಬಸಪ್ಪ ಉರ್ಮಿ, ಮಾರ್ತಾಂಡಪ್ಪ ಏಳುಕುರಿ, ತಮ್ಮಣ್ಣ ಮುದ್ದಿ, ವಿಭೂತಿ ಶೆಟ್ಟಿ, ನಾಗರಾಜ ಮ್ಯಾಧಾರ, ಚಂದ್ರಪ್ಪ ಹರಿಜನ, ಜಗದೀಶ ಹರಿಜನ, ಹನುಮಂತಪ್ಪ ಹರಿಜನ, ಶಂಭುಲಿಂಗಪ್ಪ ದಿವಟರ, ರಾಮಪ್ಪ ಮುದಕಮ್ಮನವರ, ಸೋಮಪ್ಪ ಬಸಾಪುರ, ಪ್ರಶಾಂತ ಜೋಗಿ ಸೇರಿದಂತೆ ಇತರರು ಇದ್ದರು.
