ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆಯೆಂಬ ಕೂಗಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉತ್ತರಿಸಬೇಕೆಂದು ಹಮ್ಮಿಕೊಳ್ಳಲಾಗಿರುವ ಬಹಿರಂಗ ಚರ್ಚೆಗೆ ನಿರ್ಮಲಾ ಅವರು ಬರುತ್ತಾರಾ ಅಥವಾ ಬೆನ್ನು ತಿರುಗಿಸಿ ಹೋಗುತ್ತಾರಾ ಎಂಬ ಕುತೂಹಲ ಹುಟ್ಟಿದೆ.
ರಾಜ್ಯದ ಜನರ ಪರವಾಗಿ ಜಾಗೃತ ಕರ್ನಾಟಕ ಸಂಘಟನೆ ಆಯೋಜಿಸಿರುವ ಚರ್ಚೆಗೆ ರಾಜ್ಯ ಸರ್ಕಾರದ ಭಾಗವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ. ಕೇಂದ್ರದ ಪ್ರತಿನಿಧಿಯಾಗಿ ನಿರ್ಮಲಾ ಸೀತಾರಾಮನ್ ಅವರು ಬರಬೇಕೆಂದು ಆಗ್ರಹಿಸಲಾಗುತ್ತಿದೆ. ಶನಿವಾರ (ಇಂದು) ಸಂಜೆ 5.30ಕ್ಕೆ ಚರ್ಚೆಯನ್ನು ಏರ್ಪಡಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕರು ಈಗಾಗಲೇ ನಿರ್ಮಲಾ ಸೀತಾರಾಮನ್ ಅವರನ್ನು ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ. ಇಂದು ಬೆಂಗಳೂರಿನಲ್ಲಿಯೇ ಹಣಕಾಸು ಸಚಿವರು ಇರುವುದು ಭರವಸೆಯನ್ನು ಹುಟ್ಟು ಹಾಕಿದೆ ಎಂದು ಕಾರ್ಯಕ್ರಮ ಸಂಘಟಕರು ಹೇಳಿದ್ದಾರೆ.
“ಬಿಜೆಪಿಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆಯವರು ಎಲ್ಲಾ ಮಾಧ್ಯಮದವರಿಗೆ ಕಳಿಸಿರುವ ಆಹ್ವಾನದಂತೆ – ಇಂದು (ಶನಿವಾರ) ಮಧ್ಯಾಹ್ನ 3.15ಕ್ಕೆ ಬೆಂಗಳೂರಿನ ಜಿ.ಎಂ.ರಿಜಾಯ್ಜ್ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಅವರು ಸಂಜೆಯ ಗಾಂಧಿಭವನದ ಮುಖಾಮುಖಿ ಚರ್ಚೆಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಈಗಾಗಲೇ ಸಾಕಷ್ಟು ಏಕಮುಖಿ ಚರ್ಚೆ ಆಗಿದೆ. ಮುಖಾಮುಖಿ ಚರ್ಚೆಗೂ ಅವರು ಇಂದು ಸಂಜೆ ಬರುತ್ತಾರೆಂದು ಆಶಿಸುತ್ತೇವೆ” ಎಂದು ಸಂಘಟಕರು ತಿಳಿಸಿದ್ದಾರೆ.
ಬರ ಪರಿಹಾರ, ತೆರಿಗೆ ಪಾಲು ಕೊಡುವಲ್ಲಿ ಭಾರೀ ವಂಚನೆ ಸೇರಿದಂತೆ ರಾಜ್ಯ ಸರ್ಕಾರ ಕಾನೂನು ಹೋರಾಟಕ್ಕೂ ಇಳಿದಿದೆ. “ಉಚಿತ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ಖರ್ಚು ಮಾಡಿ, ನಮ್ಮ ಬಳಿ ಕೇಳುತ್ತಿದೆ. ಕೇಂದ್ರದಿಂದ ಬಿಡಿಗಾಸು ಕೂಡ ಬಾಕಿ ಇಲ್ಲ” ಎಂದು ನಿರ್ಮಲಾ ಸೀತಾರಾಮನ್ ಅವರು ವಾದ ಮಾಡುತ್ತಾ ಬಂದಿದ್ದಾರೆ.
ಆದರೆ ರಾಜ್ಯ ಸರ್ಕಾರವು ಕೇಂದ್ರದ ವಾದವನ್ನು ತಳ್ಳಿ ಹಾಕಿದೆ. “ನಮ್ಮ ಕಲ್ಯಾಣ ಕಾರ್ಯಕ್ರಮಗಳಿಗೆ ಕೇಂದ್ರದಿಂದ ಯಾವುದೇ ಹಣ ಬೇಡ. ಆದರೆ ನಮಗೆ ಬರಬೇಕಿರುವ ಬರ ಪರಿಹಾರವನ್ನು ಮತ್ತು ತೆರಿಗೆ ಪಾಲನ್ನು ಪಾವತಿ ಮಾಡಲಿ” ಎಂದು ದಾಖಲೆಗಳನ್ನು ಇಟ್ಟು ಮಾತನಾಡುತ್ತಿರುವ ಕಂದಾಯ ಸಚಿವರು ಸಂವಾದಕ್ಕೂ ಸೈ ಎಂದಿದ್ದಾರೆ. ಸದ್ಯ ಕೇಂದ್ರದ ವಿತ್ತ ಸಚಿವರು, ಚರ್ಚೆಗೆ ಬರುತ್ತಾರಾ ಅಥವಾ ಹಿಟ್ ಅಂಡ್ ರನ್ ಮಾಡುತ್ತಾರಾ- ಎಂಬ ಕುತೂಹಲ ಕನ್ನಡಿಗರಲ್ಲಿ ಮೂಡಿದೆ.
