ಬೀದರ್‌ | ಭಾವೈಕ್ಯತೆ ಬದುಕಿಗೆ ದೇಶೀಯತೆ ಅಗತ್ಯ: ಡಾ. ಜಗನಾಥ ಹೆಬ್ಬಾಳೆ

Date:

Advertisements

ಕಳೆದು ಹೋಗುವ ಮನುಷ್ಯ ಸಂಬಂಧ ಉಳಿಸಿಕೊಳ್ಳಲು, ತನ್ನ ಸುತ್ತಲಿನ ಹಲವು ಜೀವಿಗಳ ಜೊತೆಗೆ ಬಾಂಧವ್ಯ ಕಾಪಾಡಲು, ಭಾವೈಕ್ಯತೆಯ ಬದುಕಿಗಾಗಿ ಹಾಗೂ ತನ್ನತನ ಮತ್ತು ಸ್ವಂತಿಕೆ ರೂಪಿಸಿಕೊಳ್ಳಲು ದೇಶೀಯತೆಯ ಅಗತ್ಯವಿದೆ ಎಂದು ಬೀದರ ವಿಶ್ವವಿದ್ಯಾಲಯ ಕಲಾ ನಿಕಾಯದ ಡೀನರಾದ ಪ್ರೊ. ಜಗನ್ನಾಥ ಹೆಬ್ಬಾಳೆ ಹೇಳಿದರು.

ಬಸವಕಲ್ಯಾಣ ನಗರದ ದೊಡ್ಡಪ್ಪ ಅಪ್ಪ ಬಿಇಡಿ ಕಾಲೇಜಿನಲ್ಲಿ ತಾಲೂಕು ಜಾನಪದ ಪರಿಷತ್ತು ಶುಕ್ರವಾರ ಆಯೋಜಿಸಿದ್ದ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸ್ಮೃತಿ ಹಾಗೂ ದೇಶಿ ಚಿಂತನೆ ಕುರಿತು ವಿಶೇಷ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ನಮ್ಮ ನೆಲದ ಸಂಸ್ಕೃತಿ, ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ಅಧ್ಯಾಪಕರ ಮೇಲಿದೆ” ಎಂದರು.

“ಜನಪದ ಹಾಡು, ಕತೆ, ಒಡಪು, ಒಗಟು, ಜನರ ಜ್ಞಾನ ಪರಂಪರೆಯ ಮೂಲಕ ಕನ್ನಡ ಸಾಂಸ್ಕೃತಿಕ ಚರಿತ್ರೆಯ ಪುನರ್ಕಟ್ಟುವಿಕೆ ಮಾಡುವ ಅನಿವಾರ್ಯತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ನಮ್ಮ ಮಣ್ಣಿನಲ್ಲಿ ಸೃಷ್ಟಿಸಿದ ಜ್ಞಾನ, ತಿಳುವಳಿಕೆ ದೇಶಿ ಚಿಂತನೆಯ ಭಾಗವಾಗಿವೆ” ಎಂದರು.

Advertisements

ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ‘ದೇಶಿಯತೆ ಮತ್ತು ದೇಶಿವಾದ’ದ ಕುರಿತು ಮಾತನಾಡಿ, “ದೇಸಿ ಎಂಬುದು ಸ್ಥಳೀಯವಾದ ಜ್ಞಾನ ಮತ್ತು ಸಾಂಸ್ಕೃತಿಕ ಚಹರೆಯಾಗಿದೆ. ಮಾರ್ಗಕ್ಕೆ ಪರ್ಯಾಯವಾಗಿಯೂ, ಮಾರ್ಗದಿಂದ ಪ್ರೇರಣೆಗೊಂಡು ಸಾಹಿತ್ಯದಲ್ಲಿ ದೇಸಿತನದಿಂದ ರೂಪುಗೊಂಡ ಬಗೆಯಾಗಿದೆ. ಸಾಹಿತ್ಯ ಮತ್ತು ಸಂಗೀತ ವಲಯದಲ್ಲಿ ಮಾರ್ಗ ಅಧಿಕಾರಯುತವಾಗಿ ಬಳಕೆಯಾಗಿದೆ. ಆ ಅಧಿಕಾರಕ್ಕೆ ಪ್ರತಿರೋಧಿಸುವ, ಪರ್ಯಾಯವನ್ನು ಕಟ್ಟಿಕೊಡುವ ಶಕ್ತಿ ದೇಸಿತನಕ್ಕಿದೆ” ಎಂದರು.

“ಕನ್ನಡದಲ್ಲಿ ವಚನಗಳು, ಕೀರ್ತನೆಗಳು, ತತ್ವಪದಗಳು, ಮರಾಠಿಯಲ್ಲಿ ಅಭಂಗ, ವಾರಕರಿ ಸಂಪ್ರದಾಯ, ಹಿಂದಿಯಲ್ಲಿ ದೋಹೆಗಳು ಇವೆಲ್ಲವು ದೇಶಿ ತಾತ್ವಿಕತೆಯನ್ನು ಸಾರಿವೆ. ಪ್ರಧಾನ ಸಂಸ್ಕೃತಿಗೆ ಪ್ರತಿ ಸಂಸ್ಕೃತಿಯಾಗಿ, ಪರ್ಯಾಯ ಪಂಥವಾಗಿಯೂ ರೂಪುಗೊಂಡಿವೆ” ಎಂದರು.

“ವಸಾಹತುಶಾಹಿ ಒಡ್ಡಿದ ವಿಸ್ಮೃತಿಯಿಂದ ಹೊರಬರಲು, ಜಾಗತೀಕರಣ ತಂದ ತಲ್ಲಣ ಮತ್ತು ಆತಂಕಗಳಿಂದ ತಪ್ಪಿಸಿಕೊಳ್ಳಲು ದೇಶಿಯತೆಯ ದಾರಿ ಮಹತ್ವದ್ದು. ಏಕತ್ವದ ಹೇರಿಕೆಯಿಂದ ಪಾರಾಗಿ, ಬಹುತ್ವವನ್ನು ಉಳಿಸಿಕೊಳುವ ತತ್ವ ದೇಶಿವಾದ ಪ್ರತಿಪಾದಿಸುತ್ತದೆ. ಯಜಮಾನ್ಯ ಹಾಗೂ ಪ್ರಭುತ್ವಗಳಿಗಿಂತ ಜನ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ದೇಶಿವಾದದಲ್ಲಿ ಹೆಚ್ಚು ಮನ್ನಣೆಯಿದೆ. ವಿಮರ್ಶೆಯಲ್ಲಿ ದೇಶಿವಾದವು ಸಿದ್ಧಾಂತವಾಗಿ ಬಳಕೆಯಾಗುತ್ತಿದೆ” ಎಂದು ನುಡಿದರು.

“ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಕತೆ -ಕಾದಂಬರಿಗಳಲ್ಲಿ ನಿರ್ಲಕ್ಷಿತ ಸಮುದಾಯದ, ಅಂಚಿನ ಕೊನೆಯಲ್ಲಿರುವವರನ್ನು, ಕಾಡು, ಪ್ರಾಣಿಗಳನ್ನೆಲ್ಲ ನಾಯಕರನ್ನಾಸಿದ್ದಾರೆ. ಮಂದಣ್ಣ, ತಬರ, ಕಿರಗೂರಿನ ಗಯ್ಯಾಳಿಗಳು ಸೇರಿ ಹಲವರು ಈ ನೆಲದ ದೇಸಿತನದ ಅಸ್ಮಿತೆಗಳಾಗಿದ್ದಾರೆ. ತೇಜಸ್ವಿ ಅವರ ಸಾಹಿತ್ಯದ ಒಂದು ಕೇಂದ್ರ ಪರಿಸರವಾದಿಯಾದರೆ ಇನ್ನೊಂದು ಕೇಂದ್ರ ದೇಶಿವಾದವಾಗಿದೆ. ತಾತ್ವಿಕತೆಯ ದೃಷ್ಟಿಯಿಂದ ಒಟ್ಟು ಕನ್ನಡ ಸಾಹಿತ್ಯ ಸ್ಥಳೀಯ ಹಾಗೂ ದೇಶಿಯ ನೆಲೆಯನ್ನು ದಾಟಿ ವಿಶ್ವಾತ್ಮಕ ನೆಲೆಗೆ ನಿಲ್ಲುತ್ತದೆ” ಎಂದರು.

ಬಸವಕಲ್ಯಾಣ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಬಸವರಾಜ ಸ್ವಾಮಿ ಮಾತನಾಡಿ, “ಜಾನಪದ ಎಂಬುದು ಬದುಕಿನ ಎಲ್ಲ ವಲಯಗಳಲ್ಲಿ ತುಂಬಿದೆ. ಜಾಗತೀಕರಣ, ಖಾಸಗೀಕರಣಗಳ ಭರಾಟೆಯಲ್ಲಿ ದೇಶಿ ಸಂಸ್ಕೃತಿ ನಾಶವಾಗುತ್ತಿದೆ. ಜಾನಪದ ವೈದ್ಯಕೀಯ ಪದಧತಿಯಲ್ಲಿ ಹಲವು ರೋಗಗಳಿಗೆ ಔಷಷಧಗಳಿವೆ. ನಮ್ಮ ದಿವ್ಯ ನಿರ್ಲಕ್ಷ್ಯದಿಂದ ನಮ್ಮ ಅರಿವಿನಿಂದ ಅವು ದೂರ ಉಳಿದಿವೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ರಾಚಯ್ಯ ಮಠಪತಿ ಮಾತನಾಡಿ, “ಜಾನಪದದಲ್ಲಿ ಎಲ್ಲವೂ ಅಡಗಿದೆ. ನಮ್ಮ ಸಂಸ್ಕೃತಿಯ ತಾಯಿ ಬೇರು ಜಾನಪದದಲ್ಲಿವೆ. ಪ್ರಶಿಕ್ಷಣಾರ್ಥಿಗಳು ಜಾನಪದದ ಜ್ಞಾನ ಪರಂಪರೆಯನ್ನು ಅರಿಯಬೇಕು. ಆ ಮೂಲಕ ಬದುಕಿನ ಸತ್ವ ಗ್ರಹಿಸಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ಆರೆಸ್ಸೆಸ್‌ ಸಿದ್ಧಾಂತಕ್ಕೆ ಇಂದು ಮೋದಿ ಮುಖ – ನಾಳೆ ಮತ್ತೊಬ್ಬರ ಮುಖ: ಸ್ಟಾಲಿನ್

ಗಾಯಕ ವಿವೇಕಾನಂದ ಸ್ವಾಮಿ ವಸ್ತ್ರದ ಅವರು ಜಾನಪದ ಮತ್ತು ತತ್ವಪದಗೀತೆ ಹಾಡಿದರು. ಡಾ. ಬಸವರಾಜ ಖಂಡಾಳೆ, ಸಂಗೀತಾ ಮಠಪತಿ, ಡಾ. ರೂಪೇಶ ಭೋಸ್ಲೆ , ಶಿವಾನಂದ ಬಿರಾದಾರ ತೊಗಲೂರ, ಅರುಣಾ ಕಾಡಾದಿ ಸೇರಿದಂತೆ ಹಲವರಿದ್ದರು. ನೀಲೇಶ್ ಟೊಂಪೆ ಸ್ವಾಗತಿಸಿದರು. ರೇಣುಕಾ ಡೊಂಗರಗಾಂವ ನಿರೂಪಿಸಿದರು. ಬಸವರಾಜ ಸೇರಿ ವಂದಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X