ವಲಸೆ ಕಾರ್ಮಿಕನಾಗಿದ್ದ ಯೂಟ್ಯೂಬರ್ ಒಬ್ಬರು ಗುರುವಾರ ರಾತ್ರಿ ಕೇರಳದ ಮುವಾಟ್ಟುಪುಳ ಬಳಿಕ ವಳಕೊಮ್‌ನಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿಗೆ ಗುಂಪು ಹಲ್ಲೆಯೇ ಕಾರಣವಾಗಿದೆ. ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ ಅಶೋಕ್ ದಾಸ್ (24) ಮೃತ ದುರ್ದೈವಿ. ಅವರು ವಾಲಕೋಮ್‌ನ ರೆಸ್ಟೋರೆಂಟ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು. ಅವರ ಮೇಲೆ 10 ಮಂದಿ ಗುಂಪು ಹಲ್ಲೆ ನಡೆಸಿ, ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರನ್ನು – ವಿಜೇಶ್, ಅನೀಶ್, ಸತ್ಯನ್, ಸೂರಜ್, ಕೇಶವ್, ಇಲಿಯಾಸ್ ಕೆ ಪಾಲ್, ಅಮಲ್, ಅತುಲ್ ಕೃಷ್ಣ, ಎಮಿಲ್ ಮತ್ತು ಸನಲ್ – ಎಂದು ಗುರುತಿಸಲಾಗಿದೆ. ಎಲ್ಲರೂ ವಳಕೋನ್ ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿಗಳ ಗುಂಪು ಅಶೋಕ್ ಮೇಲೆ ಹಲ್ಲೆ ನಡೆಸಿದ್ದು, ಅನೈತಿಕ ಪೊಲೀಸ್ ಗಿರಿ ನಡೆಸಿದೆ. ಅಶೋಕ್‌ಗೆ ತಲೆ ಮತ್ತು ಎದೆಗೆ ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆಯು ಗಾಯಗಳನ್ನು ದೃಢಪಡಿಸಿದೆ. ಅಶೋಕ್‌ನನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬಂಧಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದೆ” ಎಂದು ಎರ್ನಾಕುಲಂ ಗ್ರಾಮಾಂತರ ಪೊಲೀಸ್ ಅಧಿಕಾರಿ ವೈಭವ್ ಸಕ್ಸೇನಾ ತಿಳಿಸಿದ್ದಾರೆ.
ವಾಲಕೊಮ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಮಹಿಳಾ ಸಹೋದ್ಯೋಗಿಯ ಮನೆಯಿಂದ ಅಶೋಕ್‌ನನ್ನು ಗುಂಪೊಂದು ಎಳೆದೊಯ್ದು ಥಳಿಸಿದೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಅಶೋಕ್ ಅವರನ್ನು ಕಂಬಕ್ಕೆ ಕಟ್ಟಿಹಾಕುವ ಮೊದಲು ಮತ್ತು ನಂತರ ಹಲ್ಲೆ ನಡೆಸಲಾಗಿದೆ. ಅಶೋಕ್ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆತನ ಸ್ನೇಹಿತೆ ಮತ್ತು ಆಕೆಯ ಮನೆಯವರು ಹೇಳಿಕೆ ನೀಡಿದ್ದಾರೆ.
ಒನ್ಮನೋರಮಾ ವರದಿಯ ಪ್ರಕಾರ ಅಶೋಕ್ ದಾಸ್ ಯೂಟ್ಯೂಬರ್ ಆಗಿದ್ದು, ಅವರು ಹತ್ಯೆಯಾಗುವ 11 ದಿನಗಳ ಮೊದಲು ‘ಲಾಸ್ಟ್ ಆಫ್ ಟೈಮ್’ ಎಂಬ ಶೀರ್ಷಿಕೆಯಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.