ಯಾರಿಗೂ ತಿಳಿಸದೆ ಇನ್ನೊಬ್ಬ ಉದ್ಯೋಗಿಯೊಂದಿಗೆ ನಿಕಟ ವೈಯಕ್ತಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ರಾಯಲ್ ಬ್ಯಾಂಕ್ ಆಫ್ ಕೆನಡಾ (ಆರ್‌ಸಿಬಿ) ತನ್ನ ಮಧ್ಯಂತರ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ನಡಿನ್ ಅಹ್ನ್ ಅವರನ್ನು ವಜಾಗೊಳಿಸಿದೆ. ನಡಿನ್ ಅವರು ಬ್ಯಾಂಕಿನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಂದು ಬ್ಯಾಂಕ್ ಆರೋಪಿಸಿದೆ.
ಇನ್ನು ನಡಿನ್ ಅಹ್ನ್ ವಜಾದಿಂದ ತೆರವಾಗಿದ್ದ ಸಿಎಫ್‌ಒ ಸ್ಥಾನಕ್ಕೆ ಕ್ಯಾಥರೀನ್ ಗಿಬ್ಸನ್ ಅವರನ್ನು ನೇಮಿಸಲಾಗಿದೆ ಎಂದು ಬ್ಯಾಂಕ್ ಹೇಳಿದೆ.
ಬ್ಯಾಂಕ್‌ನ ನಿಯಮದ ಪ್ರಕಾರ ಯಾವುದೇ ವ್ಯಕ್ತಿಯು ಬ್ಯಾಂಕ್‌ನ ಇನ್ನೊಬ್ಬ ವ್ಯಕ್ತಿಯೊಂದಿಗೆ ವೈಯಕ್ತಿಕ ನಿಕಟ ಸಂಬಂಧವನ್ನು ಹೊಂದಿದ್ದರೆ, ಅದನ್ನು ಬ್ಯಾಂಕ್‌ನಲ್ಲಿ ಬಹಿರಂಗಪಡಿಸಬೇಕು. ಆದರೆ ಅಹ್ನ್ ಉದ್ಯೋಗಿಯೊಂದಿಗಿನ ಸಂಬಂಧದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ಇದನ್ನು ಓದಿದ್ದೀರಾ? ನಿರ್ಮಾಪಕರ ಸಂಘದ ವಿರುದ್ಧ ನಟ ಸುದೀಪ್ ಮಾನನಷ್ಟ ಮೊಕದ್ದಮೆ: ಅರ್ಜಿ ವಜಾಗೊಳಿಸಲು ಹೈಕೋರ್ಟ್ ನಕಾರ
ಅಹ್ನ್ ವಿರುದ್ಧದ ‘ಆರೋಪಗಳ’ ಬಗ್ಗೆ ತಿಳಿದ ಬಳಿಕ ಬ್ಯಾಂಕ್ ತನಿಖೆಯನ್ನು ಪ್ರಾರಂಭಿಸಿದೆ. “ನಡಿನ್ ಅಹ್ನ್ ಇನ್ನೊಬ್ಬ ಉದ್ಯೋಗಿಯೊಂದಿಗೆ ಯಾರಿಗೂ ತಿಳಿಸದೆ ನಿಕಟ ವೈಯಕ್ತಿಕ ಸಂಬಂಧವನ್ನು ಹೊಂದಿದ್ದಾರೆ. ಇದರಿಂದಾಗಿ ಬ್ಯಾಂಕಿನ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ. ಈ ಸಂಬಂಧವು ಬಡ್ತಿ ಮತ್ತು ವೇತನ ಹೆಚ್ಚಳ ಸೇರಿದಂತೆ ಇತರೆ ಕ್ರಮಗಳ ಮೇಲೆ ಪ್ರಭಾವ ಬೀರಿದೆ” ಎಂದು ವರದಿ ಉಲ್ಲೇಖಿಸಿದೆ.
ಇಬ್ಬರನ್ನು ಕೂಡಾ ವಜಾಗೊಳಿಸಲಾಗಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ರಾಯಲ್ ಬ್ಯಾಂಕ್ ಆಫ್ ಕೆನಡಾದ ಕಾರ್ಯತಂತ್ರ ಅಥವಾ ಅದರ ಹಣಕಾಸು ಅಥವಾ ವ್ಯವಹಾರದ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಮಾಜಿ ಸಿಎಫ್‌ಒ ಅಥವಾ ಇತರ ಉದ್ಯೋಗಿಯಿಂದ ದುಷ್ಕೃತ್ಯದ ಯಾವುದೇ ಪುರಾವೆಗಳು ತನಿಖೆಯಲ್ಲಿ ಕಂಡುಬಂದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.
ಸೆಪ್ಟೆಂಬರ್ 2021 ರಲ್ಲಿ ರಾಯಲ್ ಬ್ಯಾಂಕ್ ಆಫ್ ಕೆನಡಾದ ಸಿಎಫ್‌ಒ ಆಗುವ ಮುನ್ನ ಅಹ್ನ್ ಈ ಹಿಂದೆ ಹೂಡಿಕೆದಾರರ ಸಂಬಂಧಗಳ ಮುಖ್ಯಸ್ಥರಾಗಿದ್ದರು.