ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾಲರಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ 6 ಕಾಲರಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 3, ಬೆಂಗಳೂರು ನಗರ ಜಿಲ್ಲೆ 6 ಹಾಗೂ ರಾಮನಗರ ಜಿಲ್ಲೆಯಲ್ಲಿ 1 ಕಾಲರಾ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಇನ್ನು ಕಳೆದ 4 ವರ್ಷಗಳ ಕಾಲರಾ ಪ್ರಕರಣಗಳ ಅಂಕಿ ಅಂಶಗಳನ್ನು ನೋಡಿದರೆ, ಪ್ರತಿವರ್ಷ ಕ್ರಮವಾಗಿ 30, 40, 48 ಪ್ರಕರಣಗಳು ದಾಖಲಾಗಿದೆ. ಆದರೆ, ಈ ಬಾರಿ ಈಗಾಗಲೇ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ 6 ರಿಂದ 7 ಪ್ರಕರಣಗಳು ವರದಿಯಾಗಿವೆ.
ಏಪ್ರಿಲ್ 4ರವರೆಗೆ ಒಟ್ಟು 6 (ಬಿಬಿಎಂಪಿ-3, ಬೆಂಗಳೂರು ನಗರ-2, ರಾಮನಗರ-01) ಕಾಲರಾ ಪ್ರಕರಣಗಳು ದೃಢಪಟ್ಟಿದ್ದವು ಎಂದು ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ. ರಂದೀಪ್ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಬೆಂಗಳೂರು ಮೆಡಿಕಲ್ ಕಾಲೇಜು ಹಾಸ್ಟೆಲ್‌ನ 47 ವಿದ್ಯಾರ್ಥಿನಿಯರು ಶುಕ್ರವಾರ ಅತಿಸಾರ ಹಾಗೂ ನಿರ್ಜಲೀಕರಣದಿಂದ ಅಸ್ವಸ್ಥಗೊಂಡು ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದರು. ಈ ಪೈಕಿ ಇಬ್ಬರಿಗೆ ಕಾಲರಾ ಇರುವುದು ಪತ್ತೆಯಾಗಿತ್ತು. ಮತ್ತೊಬ್ಬ ವಿದ್ಯಾರ್ಥಿನಿಯ ವರದಿ ಬರಬೇಕಿದೆ. ಏಪ್ರಿಲ್ ತಿಂಗಳಲ್ಲಿ 4 ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿರುವುದರಿಂದ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 10ಕ್ಕೇರಿದೆ.
ಈ ಸುದ್ದಿ ಓದಿದ್ದೀರಾ? ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ದೂರು ದಾಖಲು
ಬೆಂಗಳೂರಿನ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಕಾರು ಚಾಲಕನಿಗೆ ಕಾಲರಾ ಪಾಸಿಟಿವ್ ದೃಢಪಟ್ಟಿದೆ. ಇನ್ನೊಂದರಡೆ ಬಿಎಂಸಿ ಹಾಸ್ಟೆಲ್ ವಿದ್ಯಾರ್ಥಿನಿಯರಲ್ಲಿ ಕಾಲರಾ ಪತ್ತೆ ಹಿನ್ನೆಲೆ ವಿದ್ಯಾರ್ಥಿನಿಯರಲ್ಲಿ ಆತಂಕ ಹೆಚ್ಚಿದೆ. ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕಾಲರಾ ಪತ್ತೆ ಬೆನ್ನಲ್ಲೇ ಮೆಡಿಕಲ್ ವಿದ್ಯಾರ್ಥಿನಿಯರು ಹಾಸ್ಟೆಲ್ ಖಾಲಿ ಮಾಡುತ್ತಿದ್ದಾರೆ. ಸೋಂಕು ಕಡಿಮೆಯಾಗುವವರೆಗೂ ತಮ್ಮ ತಮ್ಮ ಊರುಗಳಿಗೆ ಹೊರಟಿದ್ದಾರೆ. ಇನ್ನು ಕೆಲವು ವಿದ್ಯಾರ್ಥಿನಿಯರು ಕೆಲ ದಿನಗಳ ಕಾಲ ಹಾಸ್ಟೆಲ್ ಬಿಟ್ಟು ಬೇರೆ ಕಡೆ ಶಿಫ್ಟ್ ಆಗುತ್ತಿದ್ದಾರೆ.
ಕಾಲರಾ ತಡೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ
1) ಕೈ ಶುದ್ಧವಾಗಿರಬೇಕು
2) ಕೈ ಸ್ವಚ್ಛಗೊಳಿಸಿ ಆಹಾರ ಸೇವಿಸಬೇಕು
3) ಶುದ್ಧ ಕುಡಿಯುವ ನೀರು ಬಳಸಬೇಕು
4) ಕುದಿಸಿ ಆರಿಸಿದ ನೀರನ್ನು ಕುಡಿಯಿರಿ. ಸೋಸಿದ ನೀರು ಬಳಸಿ.
5) ಚರಂಡಿ ನೀರು ಮತ್ತು ಕುಡಿಯುವ ನೀರಿನ ಪೈಪ್ ಒಟ್ಟಾಗದಂತೆ ನೋಡಿಕೊಳ್ಳಬೇಕು
6) ಹೊರಗೆ, ಬೀದಿ ಬದಿ ಆಹಾರ ಸೇವಿಸುವುದರಿಂದ ದೂರ ಉಳಿಯಿರಿ
7) ರೆಸ್ಟೋರೆಂಟ್‌ಗಳಲ್ಲಿ ಬಿಸಿ ನೀರು ಕೇಳಿ ಪಡೆಯಿರಿ.
8) ಬೀದಿ ಆಹಾರ ಸೇವಿಸುವ ಮುನ್ನ ಅಲ್ಲಿನ ಸ್ವಚ್ಛತೆ ಪರಿಶೀಲಿಸಿ.
9) ಭೇದಿ, ಹೊಟ್ಟೆನೋವು, ಜ್ವರ ಮುಂತಾದ ಲಕ್ಷಣಗಳು ಕಂಡುಬಂದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.