“ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ” ಎಂದು ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿರುದ್ಧ ಗುಂಡೂರಾವ್ ಪತ್ನಿ ಟಬು ಗುಂಡೂರಾವ್ ತಿರುಗಿಬದ್ದಿದ್ದು, ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಯತ್ನಾಳರ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್, ಸಂಜಯ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಯತ್ನಾಳ್ ಹೇಳಿಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಹ ಶೇಷಾದ್ರಿಪುರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಪೊಲೀಸರಿಗೆ ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಟಬು ರಾವ್, “ಈ ಬಸನಗೌಡ ಪಾಟೀಲ್ ಯತ್ನಾಳ್ ಯಾರೋ ನನಗೆ ಗೊತ್ತಿಲ್ಲ. ನಾನು ರಾಜಕೀಯದಲ್ಲಿಲ್ಲ. ನಾನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದ್ದಾರೆ.
‘ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆʼ ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಸಚಿವರ ಪತ್ನಿ ಟಬು ರಾವ್ ದೂರು@TabbuRao @dineshgrao @BasanagoudaBJP @INCKarnataka @BJP4Karnataka pic.twitter.com/C1ecLcwr4B
— eedina.com (@eedinanews) April 7, 2024
“ನಾನು ರಾಜಕೀಯದಲ್ಲಿ ಗುರುತಿಸಿಕೊಂಡಿಲ್ಲ. ನಾನು ಅರುಮುಗಂ ಎಂಬ ಫೌಂಡೇಶನ್ ನಡೆಸುತ್ತಿದ್ದೇನೆ. ದಿನೇಶ್ ಅವರು ರಾಜಕೀಯದಲ್ಲಿದ್ದಾರೆ. ಅವರ ಬಗ್ಗೆ ಏನಾದರೂ ಮಾತಾಡಿಕೊಳ್ಳಲಿ. ಆದರೆ ನಮ್ಮ ಬಗ್ಗೆ ಯಾಕೆ ಮಾತನಾಡಬೇಕು. ಮಾತೆತ್ತಿದ್ದರೆ ಭಾರತ ಮಾತೆ ಅಂತಾರೆ. ಆದರೆ ಹೆಣ್ಣು ಮಕ್ಕಳಿಗೆ ಬಿಜೆಪಿಯವರು ಕೊಡುವ ಮರ್ಯಾದೆ ಇದೇನಾ? ಯತ್ನಾಳ್‌ಗೆ ಒಳ್ಳೆಯ ಭಾಷೆ ಗೊತ್ತಿಲ್ಲವಾ?” ಎಂದು ಯತ್ನಾಳ್ ವಿರುದ್ಧ ಟಬು ರಾವ್ ಆಕ್ರೋಶ ಹೊರಹಾಕಿದ್ದಾರೆ.
ಇದನ್ನು ಓದಿದ್ದೀರಾ? ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ: ಬಿಜೆಪಿ ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ
“ಸಂಜಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಪೊಲೀಸರು ದೂರು ಸ್ವೀಕಾರ ಮಾಡಿದ್ದು, ಎಫ್‌ಐಆರ್ ಹಾಕುವುದಾಗಿಯೂ ತಿಳಿಸಿದ್ದಾರೆ. ಯತ್ನಾಳ್ ವಿರುದ್ಧ ನಾನು ಮಾನನಷ್ಟ ಮೊಕದ್ದಮೆಯನ್ನೂ ಹಾಕುತ್ತೇನೆ” ಎಂದು ಟಬು ರಾವ್ ಎಚ್ಚರಿಕೆ ನೀಡಿದ್ದಾರೆ.
