2024ರ ಲೋಕಸಭಾ ಚುನಾವಣೆ ಸನ್ನಿಹಿತವಾಗಿದೆ. ಅಧಿಕಾರದಲ್ಲಿರುವಾಗ ಜನರ ಕೆಂಗಣ್ಣಿಗೆ ಗುರಿಯಾಗುವ ಬಂಡವಾಳಶಾಹಿ ಪಕ್ಷಗಳು ಹೊಸ ಮುಖಗಳೊಂದಿಗೆ, ಹೊಸ ಗ್ಯಾರಂಟಿಗಳೊಂದಿಗೆ ಮತ್ತೆ ಜನರ ಬಳಿಗೆ ಬರುತ್ತಿವೆ. ಇನ್ನೊಂದೆಡೆ, ದುಡಿಯುವ ಜನರ, ರೈತ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ನಿತ್ಯವೂ ಹೋರಾಟ ಕಟ್ಟುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಕೂಡ ಈ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ನಡೆಸುತ್ತಿದೆ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ ಸುನೀತ್ ಕುಮಾರ್ ತಿಳಿಸಿದರು.
ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, “ದೇಶದ 19 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಮ್ಮ ಪಕ್ಷವು 151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಈ ಬಾರಿ ಒಟ್ಟು 19 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದೆ” ಎಂದರು.
“ಕಳೆದ 10 ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. 2014ರಲ್ಲಿ ದನಿ ಎತ್ತಿದ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಈಗ ಮೌನವಾಗಿದೆ. ಅಬ್ಬರದ ಪ್ರಚಾರ ಮಾಡಿದ ‘ಗುಜರಾತ್ ಮಾದರಿ’ ಅದೃಶ್ಯವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗದ ಮಾತಿರಲಿ, ಭಾರತದ ಯುವಜನರು ನಿರುದ್ಯೋಗದ ಕಷ್ಟ ತಡೆಯಲಾಗದೆ, ಯುದ್ಧಪೀಡಿತ ಇಸ್ರೇಲ್, ರಷ್ಯಾಗಳಿಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ” ಎಂದು ಹೇಳಿದರು.
“ಕಪ್ಪುಹಣ, ಸ್ವಿಸ್‌ಬ್ಯಾಂಕ್ ಹಣ ವಶಪಡಿಸಿಕೊಳ್ಳುವ ಬಗ್ಗೆ ಇರಲಿ, ಎಸ್‌ಬಿಐನಲ್ಲಿರುವ ಚುನಾವಣಾ ಬಾಂಡ್ ಕುರಿತು ಮಾಹಿತಿ ನೀಡದಂತೆ ತಡೆಯಲು ಬಿಜೆಪಿ ಸರ್ವ ಪ್ರಯತ್ನ ಮಾಡಿದೆ. ಜಾಗತಿಕ ಹಸಿವಿನ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಪಾತಾಳದಲ್ಲಿದೆ. ರಾಜ್ಯದಲ್ಲಿ ಭೀಕರ ಬರ ಬಂದಿದ್ದು, ನೀರಿಗಾಗಿ ಹಾಹಾಕಾರ ಇದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕ್ಷುಲ್ಲಕ ರಾಜಕೀಯದಲ್ಲಿ ಮುಳುಗಿವೆಯೇ ಹೊರತು ಜನರ ಸಂಕಷ್ಟಗಳಿಗೆ ಕಿವಿಗೊಡುತ್ತಿಲ್ಲ” ಎಂದು ಆರೋಪಿಸಿದರು.
“ಮೋದಿಯವರು ಇನ್ನೊಂದೆಡೆ ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಇಷ್ಟು ವರ್ಷ ಆಳ್ವಿಕೆ ನಡೆಸಿ ದೇಶವನ್ನು ಹಾಳುಗೆಡವಿದ ಕಾರಣ ದೇಶವನ್ನು ಅಭಿವೃದ್ಧಿಯ ಪಥಕ್ಕೆ ತರಲು ಇನ್ನೂ ಒಂದು ಅವಕಾಶ ಕೊಡಿರೆಂದು ಕೇಳುತ್ತಿದ್ದಾರೆ. ಹಿಂದೆ ಕಾಂಗ್ರೆಸ್ ಆಳ್ವಿಕೆಯಲ್ಲಿ ಕಾಂಗ್ರೆಸ್‌ನ ನಾಯಕರೂ ಇದೇ ರೀತಿ ಬ್ರಿಟಿಷರ ಮೇಲೆ ಗೂಬೆ ಕೂರಿಸುತ್ತಿದ್ದರು. ಒಂದೆಡೆ ಜನರ ಮತವನ್ನು ಕೋಮುವಾದದ ಮೂಲಕ ಧ್ರುವೀಕರಣ ಮಾಡಲು ಮಂದಿರ, ಮಸೀದಿ, ಬಾವುಟ, ಸಿಎಎ ಮುಂತಾದ ಬಗೆ ಬಗೆಯ ದಾರಿಗಳನ್ನು ಬಿಜೆಪಿಯು ಹುಡುಕುತ್ತಿದೆ” ಎಂದರು.
“ಚುನಾವಣಾ ಆಯೋಗವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದೀಗ ಬಹುದೊಡ್ಡ ಹಗರಣವೆಂದೆ ಕುಖ್ಯಾತವಾಗುತ್ತಿರುವ ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ಹಣವನ್ನು ಕಾರ್ಪೊರೇಟರ್‌ಗಳ ಮೂಲಕ ಅನೈತಿಕವಾಗಿ ಪಡೆದಿದೆ ಎನ್ನುವ ವರದಿಯನ್ನು ನಾವೆಲ್ಲ ಗಮನಿಸಿದ್ದೇವೆ. ಇನ್ನೊಂದೆಡೆ ವಿರೋಧ ಪಕ್ಷಗಳನ್ನು ಹತ್ತಿಕ್ಕಲು, ಇಡಿ, ಸಿಬಿಐ ಮೂಲಕ ಹೆದರಿಸುವುದು, ವಿಪಕ್ಷಗಳ ನಾಯಕರನ್ನು ಕೇಸ್‌ಗಳಲ್ಲಿ ಸಿಲುಕಿಸಿ ಜೈಲಿಗೆ ತಳ್ಳುವ ಮೂಲಕ ಜನತಂತ್ರದ ಹತ್ಯೆ ಮಾಡುತ್ತಿದೆ” ಎಂದರು.
ಭಾರತ ಏಕಮಾತ್ರ ನೈಜ ಕಮ್ಯುನಿಸ್ಟ್ ಪಕ್ಷ ಎಸ್‌ಯುಸಿಐಯಿಂದ ದೇಶದ 151 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪಕ್ಷವು ನಾಗಜ್ಯೋತಿ ಅವರನ್ನು ಕಣಕ್ಕಿಳಿಸಿದೆ. ನಾಗಜ್ಯೋತಿ ಅವರು ವಿದ್ಯಾರ್ಥಿ ದೆಸೆಯಿಂದ ತಮ್ಮನ್ನು ಸಂಪೂರ್ಣವಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶುಲ್ಕ ಏರಿಕೆ ವಿರುದ್ಧ, ಸ್ಕಾಲರ್‌ಶಿಪ್, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಸೇರಿದಂತೆ ಕನ್ನಡದ ಹೋರಾಟಗಳಿಗೆ ನಾಯಕತ್ವವನ್ನು ನೀಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ ಬಿ ಎ ರಮೇಶ್ ಹೆಗ್ಡೆ ನೇಮಕ
ಪ್ರಸ್ತುತವಾಗಿ ಮಹಿಳಾ ಸಂಘಟನೆಯ ಸದಸ್ಯೆಯಾಗಿ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ, ಮಹಿಳಾ ಶಿಕ್ಷಣ ಹಾಗೂ ರಕ್ಷಣೆಗಾಗಿ ಹಲವಾರು ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಎಸ್ಎಸ್ಐ ಕಮ್ಯುನಿಸ್ಟ್ ಪಕ್ಷದ ಸದಸ್ಯರಲ್ಲಿ ಅನೇಕ ಜನಪರ ಹೋರಾಟಗಳಲ್ಲಿ ತೊಡಗಿದ್ದಾರೆ. ಪಕ್ಷದ ರಾಜ್ಯ ಸಂತೆ ಸಲಹೆ ಮೇರೆಗೆ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇಂತಹ ಜನಪರ ಅಭ್ಯರ್ಥಿಯನ್ನು ವಿಜಯಪುರ ಲೋಕಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರು ಬೆಂಬಲಿಸಬೇಕು” ಎಂದು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಬಿ ಭಗವಾನ್ ರೆಡ್ಡಿ, ಅಭ್ಯರ್ಥಿ ನಾಗಜ್ಯೋತಿ, ಮಲ್ಲಿಕಾರ್ಜುನ್ ಎಚ್ ಟಿ, ಭರತ್ ಕುಮಾರ್ ಎಚ್ ಟಿ, ಸಿದ್ದಲಿಂಗ ಬಾಗೇವಾಡಿ ಇದ್ದರು.
