ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡಿದ್ದು, ಜನರು ಆಶೀರ್ವಾದ ಮಾಡಬೇಕು ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದರು.
ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿ, “ನಿಮ್ಮೆಲ್ಲರ ಆಶೀರ್ವಾದ ಕೇಳಲು ಮನೆ ಬಾಗಿಲಿಗೆ ಬಂದಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು, ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ನನಗೆ ಆಶೀರ್ವದಿಸಲು ಕೆಲಸ ಮಾಡಿ” ಎಂದು ಹೇಳಿದರು.
“ಚುನಾವಣೆಗೆ ಇನ್ನು ಕೇವಲ ಒಂದೇ ತಿಂಗಳು ಬಾಕಿ ಇದೆ. ಮುಂದಿನ ತಿಂಗಳು ಮೇ 7ರಂದು ಮತ ಚಲಾಯಿಸುವ ದಿನ. ಹಾಗಾಗಿ ಎಲ್ಲರೂ ಕೂಡ ಇನ್ನು 30 ದಿನಗಳ ಕಾಲ ಎಲ್ಲರ ಮನೆ ಬಾಗಿಲಿಗೆ ಹೋಗಿ ಕಾಂಗ್ರೆಸ್ ಗ್ಯಾರಂಟಿಗಳನ್ನು ತಿಳಿಸಿ ಮತ ಕೇಳಿ. ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, 200 ಯೂನಿಟ್ ಕರೆಂಟ್ ಉಚಿತವಾಗಿ ನೀಡಿದ್ದು, ವಿದ್ಯಾನಿಧಿ ಕೂಡ ಜಾರಿಗೊಳಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಜನರ ನೆರವಿಗೆ ಧಾವಿಸಿರುವ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ, ನಡೆಯುತ್ತಿದೆ” ಎಂದು ಹೇಳಿದರು.
“ಹದಿನೈದು ದಿನಗಳ ಹಿಂದೆ ಜಗಳೂರು ತಾಲೂಕಿನ ಚೌಡಮ್ಮ ಜಾತ್ರೆಗೆ ಬಂದಿದ್ದೆ. ದೇವಿಯ ಆಶೀರ್ವಾದ ಈಗಾಗಲೇ ಪಡೆದುಕೊಂಡಿದ್ದೇನೆ. ಜನರ ಆಶೀರ್ವಾದ ಬರಬೇಕಿದೆ. ಒಳ್ಳೆಯ ಬಹುಮತದಿಂದ ನೀವೆಲ್ಲರೂ ಗೆಲ್ಲಿಸುತ್ತೀರೆಂಬ ವಿಶ್ವಾಸ ಇದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಖಂಡನೆ; ದೇಶಾದ್ಯಂತ ಉಪವಾಸ ಸತ್ಯಾಗ್ರಹ
ಜಗಳೂರು ಶಾಸಕ ಬಿ ದೇವೇಂದ್ರಪ್ಪ, ಅಸಗೋಡು ಜಯಸಿಂಹ, ಕೆ ಪಿ ಪಾಲಯ್ಯ, ಸಂಶೀರ ಅಹ್ಮದ್ ಸೇರಿದಂತೆ ಸ್ಥಳೀಯ ನಾಯಕರು, ಗ್ರಾಮಸ್ಥರು ಇದ್ದರು.
