ವಾಣಿವಿಲಾಸ ಸಾಗರ ಜಲಾಶಯದಿಂದ ಚಳ್ಳಕೆರೆಗೆ ನೀರು ಹರಿಸುವುದು ಬಿಟ್ಟು ಆಂಧ್ರಕ್ಕೆ ಕಳುಹಿಸುತ್ತಿರುವುದನ್ನು ಖಂಡಿಸಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ನೀರಾವರಿ ಇಲಾಖೆ ಮುಂದೆ ಪ್ರತಿಭಟನೆ ಮಾಡಿದ ರೈತರು, ಬಾಗಿಲು ಬಂದ್ ಮಾಡಿ ಇಲಾಖೆ ಅಧಿಕಾರಿಗಳಿಗೆ ಘೆರಾವ್ ಹಾಕಿದರು.
ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿ, ಕಳೆದ 15 ದಿನಗಳಿಂದ ವಾಣಿವಿಲಾಸ ಸಾಗರದಿಂದ ವೇದಾವತಿ ನದಿ ಮೂಲಕ ಚಳ್ಳಕೆರೆ ತಾಲೂಕಿನ ಬ್ಯಾರೇಜ್‌ಗಳಿಗೆ ನೀರು ಬಿಡುವಂತೆ ಸರ್ಕಾರದ ಆದೇಶ ಇದ್ದರು ಕೂಡ, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಕಾಣದ ಕೈಗಳ ಕೈವಾಡಕ್ಕೆ ಬಲಿಯಾಗಿ ವಾಣಿವಿಲಾಸ ಸಾಗರ ಜಲಾಶಯದ ನೀರನ್ನು ಪಕ್ಕದ ಆಂಧ್ರಕ್ಕೆ ಪೋಲು ಮಾಡುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರದ ಆದೇಶ ಇದ್ದರೂ ಕೂಡ ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಹನಿ ನೀರು ಹರಿಸಲು ಸಾಧ್ಯವಾಗಲಿಲ್ಲ. ಆದರೆ, ಈಗ ಸರ್ಕಾರದ ಆದೇಶ ಇದೆ ಎಂದು ಯದ್ವಾ ತದ್ವಾ ನೀರು ಹರಿಸಲಾಗಿದೆ ಎಂದು ಆರೋಪಿಸಿದರು.
ಆಲೂರ್ ಸಿದ್ದರಾಮಣ್ಣ ಮಾತನಾಡಿ, ಇದೇ ರೀತಿ ನೀರು ಹರಿಸಿದರೆ ಜಲಾಶಯದ ನೀರು ಒಂದು ವರ್ಷದಲ್ಲಿ ಖಾಲಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಶ್ವೇಶ್ವರ ಜಲ ನಿಗಮದ ಮುಖ್ಯ ಇಂಜಿನಿಯರ್ ಪ್ರತಿಭಟನಾಕಾರರ ಜೊತೆ ದೂರವಾಣಿ ಮೂಲಕ ಮಾತನಾಡಿದಾಗ, ಇಂದೇ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಅದಕ್ಕೆ, ಅರ್ಧ ದಿನ ನಿಲ್ಲಿಸಲಾಗುವುದು ಉಳಿದ ಇನ್ನರ್ಧವನ್ನು ನಾಳೆ ನಿಲ್ಲಿಸಲಾಗುವುದು ಎಂದು ಹೇಳಿದರು. ಇದಕ್ಕೆ ಹೋರಾಟಗಾರರು ಒಪ್ಪದೆ, ಇಂದೇ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಧರಣಿ ಮುಂದುವರಿಸಿದರು. ಬಳಿಕ ಮುಖ್ಯ ಇಂಜಿನಿಯರ್ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಇಂದಿನಿಂದಲೇ ನೀರು ನಿಲ್ಲಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲೂರಿನ ನಾಗರಾಜ್, ರವಿ, ಅಜ್ಜಯ್ಯ ರಾಮಾಂಜಿನಪ್ಪ, ಸತೀಶ್, ರಾಮ್ ಕುಮಾರ್, ಮಸ್ಕಲ್ ತಿಪ್ಪೇಸ್ವಾಮಿ, ತಿಮ್ಮರೆಡ್ಡಿ, ರಂಗಸ್ವಾಮಿ ಇತರರು ಹಾಜರಿದ್ದರು.
