ಲೆಬನಾನ್ ಮೇಲೆ ಇಸ್ರೇಲ್ ರಾತ್ರೋ ರಾತ್ರಿ ವೈಮಾನಿಕ ದಾಳಿ ನಡೆಸಿದ್ದು ಹೆಜ್ಬೊಲ್ಲಾ ಕಮಾಂಡರ್‌ನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದೆ. ಈ ನಡುವೆ ಪ್ರಾದೇಶಿಕ ಸಂಘರ್ಷದ ಆತಂಕವು ಅಧಿಕವಾಗಿದೆ.
ಈಗಾಗಲೇ ವಿಶ್ವಸಂಸ್ಥೆಯು ಯುದ್ಧ ವ್ಯಾಪಿಸುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದೆ. ಗಾಝಾ ನಡುವಿನ ಯುದ್ಧದ ಮಧ್ಯೆ ಇರಾನ್ ಮತ್ತು ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ.
ಅಸ್-ಸುಲ್ತಾನಿಯಾ ಪ್ರದೇಶದಲ್ಲಿ ದಕ್ಷಿಣ ಲೆಬನಾನ್‍ನ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ‘ರದ್ವಾನ್ ಪಡೆ’ಯ ಕಮಾಂಡರ್ ಅಲಿ ಅಹ್ಮದ್ ಹುಸೈನ್ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಇತರ ಮೂವರು ಹಿಜ್ಬುಲ್ಲಾ ಗುಂಪಿನ ಸದಸ್ಯರೂ ಮೃತರಾಗಿದ್ದಾರೆ ಎಂದು ವರದಿಯಾಗಿದೆ.
ಇನ್ನು ಇಸ್ರೇಲ್ ಆಕ್ರಮಿತ ಗೊಲಾನ್ ಹೈಟ್ಸ್‍ಗೆ 10ಕ್ಕೂ ಅಧಿಕ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಲೆಬನಾನ್‌ನ ದಕ್ಷಿಣ ಗಡಿಯಲ್ಲಿ ಗಾಝಾ ಯುದ್ಧ ನಡೆಯುತ್ತಿರುವ ಮಧ್ಯೆ ಹಿಜ್ಬುಲ್ಲಾ ಮತ್ತು ಇಸ್ರೇಲ್ ಮಿಲಿಟರಿಯು ಈ ದಾಳಿ ನಡೆಸಿರುವುದು ಪ್ರಾದೇಶಿಕ ಸಂಘರ್ಷದ ಭೀತಿ ಹೆಚ್ಚಿಸಿದೆ.
ಇದನ್ನು ಓದಿದ್ದೀರಾ? ಗಾಜಾದಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸಿ: ಇಸ್ರೇಲ್ ಪ್ರಧಾನಿಗೆ ಅಮೆರಿಕ ಅಧ್ಯಕ್ಷರ ಕರೆ
ಆರು ತಿಂಗಳಲ್ಲಿ ಇಸ್ರೇಲ್ ದಾಳಿಗೆ ಸುಮಾರು 270 ಹೆಜ್ಬೊಲ್ಲಾ ಹೋರಾಟಗಾರರು ಬಲಿಯಾಗಿದ್ದಾರೆ. ಮಕ್ಕಳು, ವೈದ್ಯರು ಮತ್ತು ಪತ್ರಕರ್ತರು ಸೇರಿದಂತೆ ಸುಮಾರು 50 ನಾಗರಿಕರನ್ನು ಕೊಲೆ ಮಾಡಲಾಗಿದೆ.
ಇನ್ನು ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಗೆ 12 ಮಂದಿ ಇಸ್ರೇಲ್ ಸೈನಿಕರು ಮತ್ತು 6 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ದಾಳಿಗಳಿಂದಾಗಿ ಗಡಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರ ಮಾಡುವಂತಾಗಿದೆ. ಹಾಗೆಯೇ ದಕ್ಷಿಣ ಲೆಬನಾನ್‌ನಲ್ಲಿ ಕೃಷಿ ಆರ್ಥಿಕತೆಯ ಮೇಲೆ ಹೆಚ್ಚಿನ ಪ್ರಭಾವ ಉಂಟಾಗಿದೆ.
ಈ ನಡುವೆ ಇಬ್ಬರು ಉನ್ನತ ಕಮಾಂಡರ್‌ಗಳ ಹತ್ಯೆಯಿಂದ ಆಕ್ರೋಶಗೊಂಡಿರುವ ಇರಾನ್, ಇಸ್ರೇಲ್‍ನ ಯಾವುದೇ ರಾಯಭಾರಿ ಕಚೇರಿಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ ಎಂದು ಹೇಳಿದೆ. ಇಸ್ರೇಲ್ ಯಾವುದೇ ಪ್ರತಿಕ್ರಿಯೆಗೆ ಸಿದ್ಧವಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ.
ಇನ್ನು 6 ತಿಂಗಳಿನಿಂದ ಗಾಝಾದಲ್ಲಿ ಹತ್ಯಾಕಾಂಡ ಮಾಡುತ್ತಿರುವ ಇಸ್ರೇಲ್ 33,000ಕ್ಕೂ ಅಧಿಕ ಮಂದಿಯನ್ನು ಹತ್ಯೆ ಮಾಡಿದೆ. ಈಗ ಇರಾನ್, ಲೆಬನಾನ್ ಮೇಲೆ ದಾಳಿಯನ್ನು ನಡೆಸುತ್ತಿದೆ.