- ಮಮತಾ ಬ್ಯಾನರ್ಜಿ ಅವರಿಗೂ ಮುನ್ನ ಸ್ಟಾಲಿನ್ ಜೊತೆ ಕೇಜ್ರಿವಾಲ್, ಪಿಣರಾಯಿ ಚರ್ಚೆ
- ರಾಜ್ಯಪಾಲರ ಅಂಗೀಕಾರಕ್ಕೆ ಕಾಲಮಿತಿ ನಿಗದಿಪಡಿಸಿ ತಮಿಳುನಾಡು ವಿಧಾನಸಭೆ ನಿರ್ಣಯ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಬುಧವಾರ (ಏಪ್ರಿಲ್ 19) ಕರೆ ಮಾಡಿ ಬಿಜೆಪಿಯೇತರ ರಾಜ್ಯಗಳಲ್ಲಿ ಬಿಜೆಪಿಯ ರಾಜ್ಯಪಾಲರ ವಿರುದ್ಧ ಏಕತೆ ಪ್ರದರ್ಶಿಸುವಂತೆ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ರಾಜ್ಯಪಾಲರ ಪ್ರಜಾಪ್ರಭುತ್ವ ವಿರೋಧಿ ಕಾರ್ಯಾಚರಣೆಗೆ ಕಾರ್ಯತಂತ್ರ ರೂಪಿಸಲು ತಾವು ಸಹಕರಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಟಾಲಿನ್ ಅವರಿಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ಕಾರ್ಯತಂತ್ರ ರೂಪಿಸಲು ಎಲ್ಲ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲು ಮಮತಾ ಅವರು ಸ್ಟಾಲಿನ್ ಅವರಿಗೆ ಸೂಚಿಸಿದ್ದು, ಸ್ಟಾಲಿನ್ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
“ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಬ್ಯಾನರ್ಜಿ ಅವರು ದೂರವಾಣಿ ಮೂಲಕ ಪ್ರತಿಪಕ್ಷಗಳ ಏಕತೆ ಕುರಿತು ಮಾತನಾಡಿದರು. ಬಿಜೆಪಿಯೇತರ ರಾಜ್ಯಗಳಲ್ಲಿ ಬಿಜೆಪಿ ರಾಜ್ಯಪಾಲರ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಅಗತ್ಯ ಕಾರ್ಯತಂತ್ರ ರೂಪಿಸಲು ಸೂಚಿಸಿದರು. ಈ ಬಗ್ಗೆ ತೀರ್ಮಾನಿಸಲು ಪ್ರತಿಪಕ್ಷಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲು ಸಲಹೆ ನೀಡಿದ್ದಾರೆ” ಎಂದು ಸ್ಟಾಲಿನ್ ಟ್ವೀಟ್‌ನಲ್ಲಿ ಹೇಳಿದ್ದಾರೆ.
ರಾಜ್ಯದ ವಿಧೇಯಕಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಲು ಕಾಲಮಿತಿ ನಿಗದಿಪಡಿಸಿ ತಮಿಳುನಾಡು ವಿಧಾನಸಭೆ ಇತ್ತೀಚೆಗೆ ನಿರ್ಣಯವೊಂದನ್ನು ಅಂಗೀಕರಿಸಿತ್ತು. ಅಲ್ಲದೆ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳೂ ಈ ನಿರ್ಣಯವನ್ನು ಅಂಗೀಕರಿಸುವಂತೆ ಸ್ಟಾಲಿನ್ ಪತ್ರ ಬರೆದಿದ್ದರು.
ಈ ಸುದ್ದಿ ಓದಿದ್ದೀರಾ? ಮಾನ ಹಾನಿ ಪ್ರಕರಣ | ಶಿಕ್ಷೆಗೆ ತಡೆ ಕೋರಿದ್ದ ರಾಹುಲ್ ಗಾಂಧಿ ಅರ್ಜಿ ತಿರಸ್ಕರಿಸಿದ ಸೂರತ್ ನ್ಯಾಯಾಲಯ
“ಭಾರತದ ಪ್ರಜಾಪ್ರಭುತ್ವ ಇಂದು ಕವಲು ದಾರಿಯಲ್ಲಿ ನಿಂತಿದೆ. ನಾವು ಇಲ್ಲಿನ ಸಹಕಾರಿಯುತ ಸಂಯುಕ್ತ ವ್ಯವಸ್ಥೆ ಮರೆಯಾಗುತ್ತಿರುವುದಕ್ಕೆ ಸಾಕ್ಷಿಯಾಗುತ್ತಿದ್ದೇವೆ” ಎಂದು ಸ್ಟಾಲಿನ್ ಪತ್ರದಲ್ಲಿ ತಿಳಿಸಿದ್ದರು.
ಮಮತಾ ಬ್ಯಾನರ್ಜಿ ಅವರಿಗೂ ಮುನ್ನ ಸ್ಟಾಲಿನ್ ಅವರ ಜೊತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದೇ ವಿಷಯದ ಕುರಿತು ಚರ್ಚಿಸಿದ್ದರು.
ಮುಂದಿನ ವಿಧಾನಸಭೆಗಳಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೇಜ್ರಿವಾಲ್ ಮತ್ತು ಪಿಣರಾಯಿ ತಿಳಿಸಿದ್ದಾರೆ ಎನ್ನಲಾಗಿದೆ.