ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಿಜೆಪಿ ಯುವ ಮೋರ್ಚಾದ ಮುಖಂಡನೊಬ್ಬನ ಮನೆಯ ಮೇಲೆ ಎ.8ರಂದು ರಾತ್ರಿ ವೇಳೆ ದಾಳಿ ನಡೆಸಿದ ಉಡುಪಿ ಅಬಕಾರಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಲಕ್ಷಾಂತರ ಮೌಲ್ಯದ ಡಿಫೆನ್ಸ್ (ಮಿಲಿಟರಿ) ಮದ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬ್ರಹ್ಮಾವರದ ಇಂದಿರಾನಗರದಲ್ಲಿರುವ ರಮೇಶ ಪ್ರಭು ಎಂಬವವರ ಮನೆ ಮೇಲೆ ಈ ಅಬಕಾರಿ ದಾಳಿ ನಡೆದಿದೆ. ರಮೇಶ್ ಪ್ರಭು ಅವರ ಪುತ್ರ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾದ ಮುಖಂಡ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಉಡುಪಿ ಜಿಲ್ಲೆ ಇವರ ಮಾರ್ಗದರ್ಶನದಂತೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ದಾಳಿ ನಡೆಸಿದಾಗ, ಒಟ್ಟು 33.500 ಲೀಟರ್ ಡಿಫೆನ್ಸ್ ಮದ್ಯ ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ 1,55,000ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ರಮೇಶ್ ಪ್ರಭುವನ್ನು ಬಂಧಿಸಲಾಗಿದೆ.
ಈ ಬಗ್ಗೆ ಉಡುಪಿ ಉಪ ವಿಭಾಗದ ಅಬಕಾರಿ ಉಪ ನಿರೀಕ್ಷಕಿ ಮಧುರಾ. ಎನ್. ದಾಸ್ ಮೊಕದ್ದಮೆಯನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.