ಯೂಟ್ಯೂಬ್ ಡಿಜಿಟಲ್ ನ್ಯೂಸ್ ಪ್ಲಾಟ್‌ಫಾರ್ಮ್ ‘ನ್ಯಾಷನಲ್ ದಸ್ತಕ್’ಅನ್ನು ನಿರ್ಬಂಧಿಸಲು ಕೇಂದ್ರ ಸರ್ಕರವು ಯೂಟ್ಯೂಬ್‌ಗೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಚಾನೆಲ್‌ಗೆ ಯೂಟ್ಯೂಬ್ ನೋಟಿಸ್ ಕಳುಹಿಸಿದೆ. ಅಲ್ಲದೆ, ಮತ್ತೊಂದು ಚಾನೆಲ್ ‘ಆರ್ಟಿಕಲ್ 19 ಇಂಡಿಯಾ’ಗೂ ಕೂಡ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ.
ಇತ್ತೀಚೆಗಷ್ಟೇ, ಸುಮಾರು 3 ಲಕ್ಷ ಚಂದಾದಾರರನ್ನು ಹೊಂದಿದ್ದ ‘ಬೋಲ್ಟಾ ಹಿಂದೂಸ್ತಾನ್’ ಸುದ್ದಿ ಚಾನೆಲ್‌ಅನ್ನು ಸರ್ಕಾರದ ನಿರ್ದೇಶನದಂತೆ ನಿರ್ಬಂಧಿಸಲಾಗಿತ್ತು. ಇದೀಗ, ಈ ಎರಡೂ ಹಿಂದಿ ಚಾನೆಲ್‌ಗಳನ್ನು ನಿರ್ಬಂಧಿಸಲು ಸೂಚನೆ ನೀಡಲಾಗಿದೆ. ಸದ್ಯ, ಇನ್ನೂ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿಲ್ಲ.
‘ನ್ಯಾಷನಲ್ ದಸ್ತಕ್’ ಚಾನೆಲ್ 9.41 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, ಸಂಪಾದಕ ಶಂಭು ಕುಮಾರ್ ಸಿಂಗ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. 2015ರಿಂದ ಸಕ್ರಿಯವಾಗಿರುವ ಚಾನೆಲ್, “ದಲಿತ ಮತ್ತು ಬುಡಕಟ್ಟು, ಹಿಂದುಳಿದ ವರ್ಗಗಳು, ಮಹಿಳೆಯರು, ರೈತರು, ಅಲ್ಪಸಂಖ್ಯಾತರು ಹಾಗೂ ಶೋಷಿತರ ಬಲವಾದ ಧ್ವನಿಯಾಗಿದೆ” ಎಂದು ಹೇಳಿಕೊಂಡಿದೆ.
ಯೂಟ್ಯೂಬ್ ನೀಡಿರುವ ನೋಟಿಸ್‌ಅನ್ನು ಚಾನೆಲ್ ತನ್ನ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದೆ. “ಸರ್ಕಾರವು ‘ನ್ಯಾಷನಲ್ ದಸ್ತಕ್’ ಅನ್ನು ಮುಚ್ಚಲು ಬಯಸಿದೆ. ಯೂಟ್ಯೂಬ್ ಏಪ್ರಿಲ್ 3ರಂದು ನೋಟಿಸ್ ಕಳುಹಿಸಿದೆ. ದೇಶದಲ್ಲಿ ಚುನಾವಣಾ ‘ಮಾದರಿ ನೀತಿ ಸಂಹಿತೆ’ ಜಾರಿಯಲ್ಲಿರುವಾಗ ಇಂತಹ ಕ್ರಮಗಳು ನಡೆಯುತ್ತಿವೆ” ಎಂದು ಹೇಳಿದೆ.
“ಲಕ್ಷಗಟ್ಟಲೆ ಪತ್ರಿಕೆಗಳು ಮತ್ತು ಟಿವಿ ಸುದ್ದಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಬಹುಜನರ ನ್ಯಾಷನಲ್ ದಸ್ತಕ್ ಬಗ್ಗೆ ಸರ್ಕಾರಕ್ಕೆ ತುಂಬಾ ಭಯವಿದೆಯೇ?” ಎಂದು ಚಾಲನೆ ಹೇಳಿದೆ.
नेशनल दस्तक को बंद करवाना चाहती है सरकार।। 3 अप्रैल को यूट्यूब ने नोटिस भेजा था।। आर्टिकल 19 को भी नोटिस है। ।।आचार संहिता में ये सब हो रहा है।। लाखों अखबार टीवी न्यूज चैनल चल रहे। बहुजनों के नेशनल दस्तक से इतना डर। pic.twitter.com/HdSP4X0ejb
— National Dastak (@NationalDastak) April 8, 2024
ಇನ್ನು, ಪತ್ರಕರ್ತ ನವೀನ್ ಕುಮಾರ್ ನಡೆಸುತ್ತಿರುವ ಡಿಜಿಟಲ್ ಸುದ್ದಿ ಮಾಧ್ಯಮ ‘ಆರ್ಟಿಕಲ್ 19 ಇಂಡಿಯಾ’ ಸಹ ಇದೇ ರೀತಿಯ ನೋಟಿಸ್‌ಅನ್ನು ಪಡೆದಿದೆ. ಈ ಚಾನಲ್ 28 ಲಕ್ಷ ಚಂದಾದಾರರನ್ನು ಹೊಂದಿದೆ.
ವಿವಾದಾತ್ಮಕ ‘ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು-2021’ಅನ್ನು ಉಲ್ಲೇಖಿಸಿರುವ ಯೂಟ್ಯೂಬ್, ನೋಟಿಸ್ ನೀಡಿದೆ. ಅಂದಹಾಗೆ, ಈ ನಿಯಮಗಳನ್ನು ಹಲವಾರು ಡಿಜಿಟಲ್ ಸುದ್ದಿ ಮಾಧ್ಯಮಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಈ ನಿಯಮಗಳಿಗೆ 2021ರ ಆಗಸ್ಟ್‌ನಲ್ಲಿ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠವು ತಡೆಯಜ್ಞೆ ನೀಡಿದೆ.
ಯೂಟ್ಯೂಬ್ ನೋಟಿಸ್ ಹೀಗಿದೆ:
ಮಾಹಿತಿ ತಂತ್ರಜ್ಞಾನದ ನಿಯಮಗಳು-2021ರ ನಿಯಮ 15(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ-2000 ಸೆಕ್ಷನ್ 69ಎ ಅಡಿಯಲ್ಲಿ ನಿಮ್ಮ ಚಾನಲ್ಅನ್ನು ನಿರ್ಬಂಧಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನಾವು ಸೂಚನೆ ಪಡೆದಿದ್ದೇವೆ.
ಸರ್ಕಾರದ ಸೂಚನೆಯು ಗೌಪ್ಯವಾಗಿರುವ ಕಾರಣ, ಅದನ್ನು ನಿಮ್ಮೊಂದಿಗೆ (ಚಾನೆಲ್) ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೇಲಿನ ಯುಆರ್‌ಎಲ್‌ಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶೀಘ್ರದಲ್ಲೇ ಅಂತಿಮ ಆದೇಶವನ್ನು ರವಾನಿಸುವ ಸಾಧ್ಯತೆಯಿದೆ. ಸ್ಥಳೀಯ ಕಾನೂನುಗಳನ್ನು ನಾವು ಅನುಸರಿಸಬೇಕಿದ್ದು, ಮುಂದಿನ ಸೂಚನೆಯ ನಂತರ ನಾವು ಸರ್ಕಾರದ ಆದೇಶವನ್ನು ಅನುಸರಿಸಬೇಕಾಗಬಹುದು.