ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ, ಪಶ್ಚಿಮ ಬಂಗಾಳದಲ್ಲಿ ನಂಬರ್ 1 ಪಕ್ಷವಾಗಲಿದೆ ಎಂಬ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಭವಿಷ್ಯವನ್ನು ಕಾಂಗ್ರೆಸ್ “ಹಾಸ್ಯಾಸ್ಪದ ಮತ್ತು ಬಿಜೆಪಿ ಪ್ರಾಯೋಜಿತ” ಎಂದು ಕರೆದಿದೆ.
ಈ ಬಗ್ಗೆ ಎನ್‌ಡಿಟಿವಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ಅಜಯ್ ಕುಮಾರ್, “ಪ್ರಶಾಂತ್ ಕಿಶೋರ್ ಒಬ್ಬ ರಾಜಕೀಯ ವಿಶ್ಲೇಷಕನಂತೆ ಮಾರುವೇಷದಲ್ಲಿರುವ ಆರ್‌ಎಸ್‌ಎಸ್‌ನ ವ್ಯಕ್ತಿ. ನೀವು ಇದನ್ನು ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮ ಎಂದೇ ಕರೆಯಬೇಕಾಗುತ್ತದೆ” ಎಂದು ಹೇಳಿದರು.
ಆದರೆ ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಮಾತ್ರ ಕಾಂಗ್ರೆಸ್‌ನ ಈ ಆರೋಪವನ್ನು ತಳ್ಳಿಹಾಕಿದ್ದು, “ಯಾರು ಸತ್ಯ ಹೇಳುತ್ತಾರೋ ಅವರನ್ನು ಆರ್‌ಎಸ್‌ಎಸ್ ಎಂದು ಕರೆಯಲಾಗುತ್ತದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಪ್ರಶಾಂತ್ ಕಿಶೋರ್ ಚುನಾವಣಾ ಸಮೀಕ್ಷೆ ಸುಳ್ಳಾಗಿಲ್ಲವೇ, ಇದು ಬಿಜೆಪಿಯ ಮೈಂಡ್ ಗೇಮ್ ಅಲ್ಲವೇ?
ಇನ್ನು “ಕಾಂಗ್ರೆಸ್ ಮೈತ್ರಿಕೂಟದಲ್ಲಿದ್ದಾಗ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವನ್ನು ಅಸ್ಥಿರಗೊಳಿಸಲು ಕಿಶೋರ್ ಪ್ರಯತ್ನಿಸಿದ್ದು, ನಿತೀಶ್ ಬಿಜೆಪಿ ಮೈತ್ರಿಕೂಟಕ್ಕೆ ಸೇರಿದ ದಿನದಿಂದಲೇ ತನ್ನ ಬಿಹಾರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ನಿಲ್ಲಿಸಿದರು” ಎಂದು ಕೂಡಾ ಅಜಯ್ ಕುಮಾರ್ ಆರೋಪಿಸಿದರು.
ತಮಿಳುನಾಡು ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಅಜಯ್ ಕುಮಾರ್ “ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಶಕ್ತಿ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿಗೆ ಆಗಾಗ ಭೇಟಿ ನೀಡುತ್ತಿರುವುದು ಆಡಳಿತಾರೂಢ ಡಿಎಂಕೆ ಮೈತ್ರಿಕೂಟದ ನಿರೀಕ್ಷೆಯನ್ನು ಹೆಚ್ಚಿಸಲಿದೆ” ಎಂದು ಹೇಳಿದರು.
“ಚುನಾವಣೆಗೂ ಮುನ್ನ ಪ್ರಧಾನಿ ಮೋದಿಯವರಂತೆ ಯಾವ ಪ್ರಧಾನಿಯೂ ವಿಶ್ವಾಸಾರ್ಹತೆ ಕಳೆದುಕೊಂಡಿಲ್ಲ” ಎಂದು ಟೀಕಿಸಿದ ಅಜಯ್ ಕುಮಾರ್, “ಬಿಜೆಪಿಯು ರಾಜಕೀಯ ಭಾಷಣವನ್ನು ಬೀದಿ ಜಗಳವನ್ನಾಗಿಸಿದೆ. ಬಿಜೆಪಿ ಆಧಾರವಿಲ್ಲದ ವಿಷಯವನ್ನು ಮಾತ್ರ ಮಾತನಾಡುತ್ತದೆ” ಎಂದು ವಾಗ್ದಾಳಿ ನಡೆಸಿದರು.
ಇದನ್ನು ಓದಿದ್ದೀರಾ? ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಗನ್‌ಗೆ ದೊಡ್ಡ ಸೋಲು: ಪ್ರಶಾಂತ್ ಕಿಶೋರ್
ಇನ್ನು ಪ್ರಧಾನಿ ಮೋದಿಯಂತೆ ಕಾಂಗ್ರೆಸ್ ನಾಯಕತ್ವ ತಮಿಳುನಾಡಿನಲ್ಲಿ ಪ್ರಚಾರ ನಡೆಸುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ, ಏಪ್ರಿಲ್ 12 ರಂದು ರಾಹುಲ್ ಗಾಂಧಿ ತಮಿಳುನಾಡಿನ ಕೊಯಮತ್ತೂರು ಮತ್ತು ತಿರುನಲ್ವೇಲಿಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.
ತಮಿಳುನಾಡು, ಪುದುಚೇರಿಯಲ್ಲಿ ಇಂಡಿಯಾ ಒಕ್ಕೂಟಕ್ಕೆ ಎಲ್ಲ ಸ್ಥಾನ
“ತಮಿಳುನಾಡು ಮತ್ತು ಪುದುಚೇರಿಯ ಎಲ್ಲಾ 40 ಸ್ಥಾನಗಳನ್ನು ಇಂಡಿಯಾ ಒಕ್ಕೂಟ ಗೆಲ್ಲಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ ಅಜಯ್ ಕುಮಾರ್ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಗಮನಾರ್ಹವಾಗಿ ಗೆಲುವು ಸಾಧಿಸುವುದಾಗಿ ಹೇಳಿದರು.