ಅಬಕಾರಿ ನೀತಿ ಪ್ರಕರಣದಲ್ಲಿ ತನ್ನ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಒಂದು ದಿನದ ಬಳಿಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲಿದ್ದಾರೆ.
ಎಎಪಿ ನಾಯಕರ ವಕೀಲರು ಬೆಳಿಗ್ಗೆ 10.30 ರ ಸುಮಾರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿ ತುರ್ತು ವಿಚಾರಣೆಯನ್ನು ಕೋರಲಿದ್ದಾರೆ.
ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ಇಡಿ) ಕೇಜ್ರಿವಾಲ್ ಅವನ್ನು ಬಂಧಿಸಿದ್ದು ಈ ಬಂಧನವನ್ನು ಪ್ರಶ್ನಿಸಿ ದೆಹಲಿ ಸಿಎಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿನ್ನೆ ವಜಾಗೊಳಿಸಿದೆ. ಸಾಮಾನ್ಯ ವ್ಯಕ್ತಿ ಮತ್ತು ಮುಖ್ಯಮಂತ್ರಿಯನ್ನು ಪ್ರಶ್ನಿಸಲು ತನಿಖಾ ಸಂಸ್ಥೆಗೆ ಪ್ರತ್ಯೇಕ ಮಾರ್ಗಸೂಚಿ ಇಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಇದನ್ನು ಓದಿದ್ದೀರಾ? ಬಂಧನ ಅಕ್ರಮವಲ್ಲ; ಇಡಿ ವಿರುದ್ಧದ ಕೇಜ್ರಿವಾಲ್ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್
ಇನ್ನು ದೆಹಲಿ ಹೈಕೋರ್ಟ್, “ಅಬಕಾರಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಬಂಧನ ಮಾನ್ಯವಾಗಿದೆ. ಅಕ್ರಮವಲ್ಲ” ಎಂದು ಹೇಳಿದೆ. “ಬಂಧನವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದ್ದು 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 19ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. ಅರ್ಜಿಯು ಜಾಮೀನಿಗಾಗಿ ಸಲ್ಲಿಸಿರುವುದಲ್ಲ. ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಲು ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸುತ್ತದೆ” ಎಂದಿದೆ.
2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಂಧನ ಮಾಡಿರುವುದನ್ನು ಕೇಜ್ರಿವಾಲ್ ಈ ಹಿಂದೆ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ಅರ್ಜಿದಾರರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿದೆ ಮತ್ತು ನ್ಯಾಯಾಲಯವು ಕಾನೂನಿನ ಪ್ರಕಾರ ಅವರ ಚುನಾವಣೆಯ ಸಮಯವನ್ನು ಲೆಕ್ಕಿಸದೆ ನ್ಯಾಯಾಂಗ ಬಂಧನ ವಿಧಿಸಿದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಹಗರಣ| ಕವಿತಾ ನ್ಯಾಯಾಂಗ ಬಂಧನ ಎಪ್ರಿಲ್ 23ರವರೆಗೆ ವಿಸ್ತರಣೆ
ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ಮತ್ತು ದೆಹಲಿ ಸಚಿವ ಸೌರಭ್ ಭಾರದ್ವಾಜ್, “ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಸಿಬಿಐ ತಮ್ಮ ಶೋಧದ ಸಮಯದಲ್ಲಿ ಒಂದು ರೂಪಾಯಿ ಕೂಡ ಸಿಕ್ಕಿಲ್ಲ. ಆದರೆ ಅವರು ಕೋಟಿಗಟ್ಟಲೆ ಹಣದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಇಡಿ ಮತ್ತು ಸಿಬಿಐಗೆ ಒಂದು ರೂಪಾಯಿ ಅಕ್ರಮ ಹಣವೂ ಸಿಕ್ಕಿಲ್ಲ” ಎಂದು ಹೇಳಿದರು.
ಇನ್ನು “ಸಾಕ್ಷಿಗಳ ಹೇಳಿಕೆಗಳನ್ನು ಬದಲಿಸಿ ಇಡಿಗೆ ಏನು ಬೇಕೋ ಅದನ್ನು ಹೇಳುವಂತೆ ಒತ್ತಡ ಹೇರಲಾಗಿದೆ. ಈ ವಿಷಯವು ಮನಿ ಲಾಂಡರಿಂಗ್ ಬಗ್ಗೆ ಅಲ್ಲ. ಇದು ಭಾರತದ ಇತಿಹಾಸದಲ್ಲಿ ಅತಿದೊಡ್ಡ ರಾಜಕೀಯ ಪಿತೂರಿಯಾಗಿದೆ” ಎಂದು ಆರೋಪಿಸಿದರು.
ಈ ಹಿಂದೆ ಕೇಜ್ರಿವಾಲ್ ಅವರು ಬಂಧನಕ್ಕೊಳಗಾದ ಒಂದು ದಿನದ ನಂತರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ನಂತರ ಅರ್ಜಿ ಹಿಂಪಡೆದು ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಇನ್ನು ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನ ಎಪ್ರಿಲ್ 23ರವರೆಗೆ ವಿಸ್ತರಣೆ ಮಾಡಲಾಗಿದೆ.