ಲೋಕಸಭಾ ಚುನವಣೆ 2024ರ ಹೊಸ್ತಿಲಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸಂಗೀತದಿಂದ ಫ್ಯಾಶನ್‌ವರೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಯೂಟ್ಯೂಬರ್‌ಗಳನ್ನು ಸೆಳೆಯುತ್ತಿದೆ. ಅವರ ಮೂಲಕ ಯುವ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಯತ್ನಿಸುತ್ತಿದೆ. ಅವರ ಚಾನೆಲ್‌ಗಳ ಮೂಲಕ ತನ್ನ ಸಂದೇಶಗಳನ್ನು ಯುವಜನರಿಗೆ ತಲುಪಿಸಲು ಹವಣಿಸುತ್ತಿದೆ.
ಯುವ ಯೂಟ್ಯೂಬರ್‌ಗಳನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ತಿಂಗಳು ‘ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್’ ಆಯೋಜಿಸಿತ್ತು. ಅದರಲ್ಲಿ 24 ಮಂದಿಗೆ ನಾನಾ ಪ್ರಶಸ್ತಿ ನೀಡಿದೆ. ಆ ಪ್ರಶಸ್ತಿಗಳನ್ನು ಪಡೆದವರಲ್ಲಿ ಜನಪದ ಗಾಯಕಿ ಮೈಥಿಲಿ ಠಾಕೂರ್ ಕೂಡ ಒಬ್ಬರು.
ಮೈಥಿಲಿ ಠಾಕೂರ್ ಅವರು ಹಿಂದು ಭಕ್ತಿಗೀತೆಗಳನ್ನು ಹಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ‘ಫಾಲೋವರ್’ಗಳನ್ನು ಹೊಂದಿದ್ದಾರೆ. ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಮೈಥಿಲಿ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಆಡಳಿತಾರೂಢ ಬಿಜೆಪಿ ಪರವಾದ ಒಲವು ಹೊಂದಿರುವ ಮೈಥಿಲಿ ಅವರು ಫೇಸ್‌ಬುಕ್‌ನಲ್ಲಿ 1.4 ಕೋಟಿ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ತಲಾ 45 ಲಕ್ಷಕ್ಕೂ ಹೆಚ್ಚು ‘ಫಾಲೋವರ್’ಗಳನ್ನು ಹೊಂದಿದ್ದಾರೆ. ಅಂದಹಾಗೆ, ಮೈಥಿಲಿ ಅವರನ್ನು ಚುನಾವಣಾ ಆಯೋಗದ ರಾಯಭಾರಿಯಾಗಿ ನೇಮಿಸಲಾಗಿದೆ.
ಮೈಥಿಲಿ ಅವರು ಜನವರಿಯಲ್ಲಿ ನಡೆದ ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಸಂದರ್ಭದಲ್ಲಿ ಸಾಮಾಜಿಕ ವೇದಿಕೆ ‘ಎಕ್ಸ್’ನಲ್ಲಿ ಭಕ್ತಿಗೀತೆ ಹಾಕಿ, ಹಂಚಿಕೊಂಡು ಗಮನ ಸೆಳೆದಿದ್ದರು. ಸರ್ಕಾರವು ‘ಕ್ರಿಯೇಟರ್ಸ್ ಅವಾರ್ಡ್ಸ್’ ನೀಡುವಾಗ ಅವರನ್ನು ವರ್ಷದ ‘ಸಾಂಸ್ಕೃತಿಕ ರಾಯಭಾರಿ’ ಎಂದು ಬಣ್ಣಿಸಿತ್ತು. ಅಲ್ಲಿ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾದ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ಮೈಥಿಲಿ ಅಂತಹ ಸಾಮಾಜಿಕ ಜಾಲತಾಣದ ಪ್ರತಿಭೆಗಳು ಬಿಜೆಪಿಗೆ ಸಹಕಾರ ನೀಡುವ ಮೂಲಕ ತಮ್ಮ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಪೋಸ್ಟ್‌ಗಳಿಂದ ಹೆಚ್ಚು ಆದಾಯವನ್ನು ಗಳಿಸಬಹುದೆಂದು ಭಾವಿಸಿದ್ದಾರೆ. ಅವರು ಬಿಜೆಪಿ ಪರವಾದ ಪೋಸ್ಟ್‌ಗಳನ್ನು ಹಾಕಲು ಮುಂದಾಗುತ್ತಾರೆ. ಈ ಮೂಲಕ ಬಿಜೆಪಿ ಯುವಜನರನ್ನು ತಲುಪಬಹುದು ಮತ್ತು ಗೆಲ್ಲಬಹುದು ಎಂದು ಭಾವಿಸಿದೆ” ಎಂದು ವಿಮರ್ಶಕರು ಹೇಳುತ್ತಾರೆ.
ಸರ್ಕಾರ ಮತ್ತು ಪ್ರಮುಖ ಸಾಮಾಜಿಕ ಮಾಧ್ಯಮ ಸ್ಟಾರ್‌ಗಳ ನಡುವಿನ ನಿಕಟ ಸಂಬಂಧದ ಬಗ್ಗೆ ಡಿಜಿಟಲ್ ಹಕ್ಕುಗಳ ಸಂಸ್ಥೆ ‘ಇಂಟರ್ನೆಟ್ ಫ್ರೀಡಂ ಫೌಂಡೇಶನ್’ನ ಪ್ರತೀಕ್ ವಾಘ್ರೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ಈ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವವರು ತಮ್ಮ ಪೋಸ್ಟ್‌ಗಳಿಂದ ಹಣವನ್ನು ಗಳಿಸಲು ಮತ್ತು ಹೊಸ ‘ಫಾಲೋವರ್’ಗಳನ್ನು ಪಡೆಯಲು ಮಾತ್ರವೇ ಬಯಸುತ್ತಾರೆ. ಅವರು ಬೇರೆ ವಿಚಾರಗಳ ಬಗ್ಗೆ ಹೆಚ್ಚು ಕಾಳಜಿ ತೋರುವುದಿಲ್ಲ. ಅವರು ಯಾವುದೇ ವಿಮರ್ಶೆಯನ್ನೂ ಮಾಡದೇ ಸರ್ಕಾರದ ಪರವಾಗಿ ಪೋಸ್ಟ್‌ಗಳನ್ನು ಹಾಕಲು ಮುಂದಾಗುತ್ತಾರೆ. ಇದು ಬಿಜೆಪಿಯ ಅತ್ಯಾಧುನಿಕ ‘ಸಾಫ್ಟ್-ಪವರ್’ ಪ್ರಚಾರ ನೀತಿಯ ಭಾಗವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಹಣ ಅಥವಾ ಫಾಲೋವರ್‌ಗಳ ಹೆಚ್ಚಳಕ್ಕಾಗಿ ತಮ್ಮ ಸ್ವಂತ ರಾಜಕೀಯ ನಿಲುವುಗಳನ್ನು ಲೆಕ್ಕಿಸದೆ, ಪಕ್ಷವನ್ನು ಬೆಂಬಲಿಸಲು ಮುಂದಾಗಬಹುದು” ಎಂದೂ ಅವರು ಹೇಳಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದ 140 ಕೋಟಿ ಜನರಲ್ಲಿ ಅರ್ಧದಷ್ಟು ಜನರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಅವರೆಲ್ಲರೂ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅವರನ್ನು ತಲುಪಲು ಬಿಜೆಪಿಯು ತಂತ್ರ ಹೆಣೆಯುತ್ತಿದೆ.
ಮಾಜಿ ಕುಸ್ತಿಪಟು ಅಂಕಿತ್ ಬೈಯಾನ್‌ಪುರಿಯವರು ಇನ್‌ಸ್ಟಾಗ್ರಾಮ್‌ನಲ್ಲಿ 80 ಲಕ್ಷ ‘ಫಾಲೋವರ್’ಗಳನ್ನು ಹೊಂದಿದ್ದಾರೆ. ಅವರಿಗೆ ಸರ್ಕಾರವು ‘ನ್ಯಾಷನಲ್ ಫಿಟ್‌ನೆಸ್ ಕ್ರಿಯೇಟರ್’ ಪ್ರಶಸ್ತಿ ನೀಡಿದೆ. ಅವರು ತಮ್ಮ ಪಾಲೋವರ್‌ಗಳಿಗೆ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ.
ಮತ್ತೊಬ್ಬ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ಚಾನೆಲ್‌ನಲ್ಲಿ ಸಚಿವ ಪಿಯೂಷ್ ಗೋಯಲ್ ಮತ್ತು ಸಚಿವ ಎಸ್ ಜೈಶಂಕರ್ ಸೇರಿದಂತೆ ಹಲವು ಬಿಜೆಪಿ ದಿಗ್ಗಜರು ಕಾಣಿಸಿಕೊಂಡಿದ್ದಾರೆ. ಅವರ ಚಾನೆಲ್ ಪ್ರಸಾರ ಮಾಡಲಾಗಿರುವ ಬಿಜೆಪಿಗರ ವಿಡಿಯೋಗಳಲ್ಲಿ ‘@MyGov ಜೊತೆ ಸಹಯೋಗ’ ಎಂದು ಟ್ಯಾಗ್ ಮಾಡಲಾಗಿದೆ.
ಹಿಂದು ಸಾಂಪ್ರದಾಯಿಕ ಉಡುಗೆಗಳ ಪ್ರದರ್ಶನ ಮತ್ತು ಧರ್ಮಗ್ರಂಥಗಳನ್ನು ವಿವರಿಸುವ ಜಾನ್ವಿ ಸಿಂಗ್ ಅವರಿಗೆ ಸರ್ಕಾರವು ‘ಹೆರಿಟೇಜ್ ಫ್ಯಾಷನ್ ಐಕಾನ್’ ಪ್ರಶಸ್ತಿ ನೀಡಿದೆ. ಅವರು ಸರ್ಕಾರದೊಂದಿಗಿನ ತನ್ನ ಸಹಯೋಗವನ್ನು ‘ಅತ್ಯುತ್ತಮ ಅವಕಾಶ’ ಎಂದಿದ್ದಾರೆ. ಅವರು ನೇರವಾಗಿ ಯಾರಿಗೆ ಮತ ಚಲಾಯಿಸಬೇಕೆಂದು ಹೇಳದಿದ್ದರೂ, ಬಿಜೆಪಿ ಮತ್ತು ಮೋದಿ ಪರವಾದ ನಿಲುವನ್ನು ತಮ್ಮ ವಿಡಿಯೋಗಳನ್ನು ಪ್ರಕಟಿಸುತ್ತಿದ್ದಾರೆ.
“ದೇಶಕ್ಕೆ ಒಳ್ಳೆಯದನ್ನು ಮಾಡುವ ನಾಯಕ ಮೋದಿಯಲ್ಲದೆ ಮತ್ತೊಬ್ಬರಿಲ್ಲವೆಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿಕೊಂಡಿದ್ದಾರೆ.