ಶಿವಮೊಗ್ಗ ಜಿಲ್ಲೆಯ ಅರಣ್ಯ ಭೂಮಿಯಲ್ಲಿ ಸಾಗುವಳಿ ನಡೆಸುತ್ತಿರುವ ರೈತರಿಗೆ ಹಕ್ಕು ಪತ್ರ ಸಿಗಬೇಕಿದ್ದರೆ, ಇಲ್ಲಿನ ಸಂಸದರು ಬದಲಾಗಬೇಕಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಿಗ್ಗಾ ಗ್ರಾಮದಲ್ಲಿ ಬುಧವಾರ (ಏ.10) ಆಯೋಜಿಸಿದ್ದ ಸಾರ್ವಜನಿಕ ಬಹಿರಂಗ ಸಭೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯ ಬಿಜೆಪಿ ಸಂಸದರು ಆಯ್ಕೆಗೊಂಡು 10 ವರ್ಷ ಕಳೆದಿದೆ. ಆದರೆ, ಮುಳುಗಡೆ ಸಂತ್ರಸ್ತರು ಹಾಗೂ ಬಗರ್ ಹುಕುಂ ಸಾಗುವಳಿ ರೈತರಿಗೆ ಹಕ್ಕು ಪತ್ರ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರದ ಹಂತದಲ್ಲಿ ಬಗೆಹರಿಸಬೇಕಿದ್ದ ಸಮಸ್ಯೆಗಳು ಜಿಲ್ಲೆಗೆ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿವೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಳ್ಳು ಭಾಷಣ ಮಾಡಿಕೊಂಡು ಜನ ಸಾಮಾನ್ಯರಿಗೆ ನಾಮ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಬಡವರು ಉಸಿರಾಡುತ್ತಿದ್ದಾರೆ. ಇದಕ್ಕೆ ಮಸಿ ಬಳಿಯಲು ಬಿಜೆಪಿಯವರು ಸಂಚು ಹೂಡುತ್ತಿದ್ದಾರೆ. ಇದಕ್ಕೆ ಜನರು ಆಸ್ಪದ ಕೊಡಕೂಡದು ಎಂದರು.
ಕೇಂದ್ರದ ಹಂತದಲ್ಲಿ ರೈತರ ಸಮಸ್ಯೆಗಳಿಗೆ ಗೀತಕ್ಕ ನ್ಯಾಯ ಒದಗಿಸಿದರೆ, ರಾಜ್ಯದಲ್ಲಿ ರೈತರ ಪರ ನಾನು ಹೋರಾಡುತ್ತೇನೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಟ್ಟಾಗಿ ಶ್ರಮಿಸುತ್ತೇವೆ. ಆದ್ದರಿಂದ, ಮತದಾರರು ಗೀತಕ್ಕಗೆ ಮತ ನೀಡಿ ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ನೆರಳಾಗಿ ನಿಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಯೋಜನೆಗಳಿಗೆ ಶಕ್ತಿ ತುಂಬಿದ್ದಾರೆ ಎಂದರು.
ಸೊರಬ ತಾಲೂಕು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ದೇವರ ರೀತಿ, ಕಾಣುತ್ತಿದ್ದ ನೆಲ. ಅದೇ ಬಂಗಾರಪ್ಪ ಅವರ ಮಗಳು ನಾನು. ಅವರ ಹಾದಿಯಲ್ಲಿ ಸಾಗಲು ನನಗೂ ಒಂದು ಅವಕಾಶ ಕಲ್ಪಿಸಿಕೊಡಿ ಎಂದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಅಯೋಧ್ಯೆಯ ರಾಮ ಮಂದಿರವನ್ನು ಚುನಾವಣೆಯ ದುರುದ್ದೇಶದಿಂದ ಉದ್ಘಾಟಿಸಲಾಗಿದೆ. ಇದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು, ದೇವರು- ಧರ್ಮವೆಂದು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ, ಇದೇ ನೆಲದಲ್ಲಿ ಜನಿಸಿದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಆರಾಧನ ಯೋಜನೆಯಿಂದ 21 ಸಾವಿರ ಮಂದಿರಗಳನ್ನು ಕಟ್ಟಿಸಿದ್ದರು. ಆದರೆ, ಇವರನ್ನು ಮರೆತಿದ್ದೇವೆ ಎಂದರು.
ಬಜೆಪಿ ಆಡಳಿತದಿಂದ ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಇಲ್ಲಿಯವರೆಗೆ ಬಡವರಿಗಾಗಿ ಒಂದು ಗುಡಿಸಲನ್ನೂ ಕೂಡ ನಿರ್ಮಾಣ ಮಾಡಿಲ್ಲ ಎಂದು ದೂರಿದ ಅವರು, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ದ್ವೇಶಿಸುತ್ತಲೇ ಬಿಜೆಪಿ ಬರುತ್ತಿದೆ ಎಂದರು.
ನಟ ಶಿವರಾಜಕುಮಾರ್, ಕಾಂಗ್ರೆಸ್ ಮುಖಂಡರಾದ ವೈ.ಎಚ್.ನಾಗರಾಜ್, ಎಚ್. ಗಣಪತಿ, ಕೆಪಿಸಿಸಿ ಸದಸ್ಯ ರುದ್ರೇಗೌಡ್ರು, ಕೆ.ಇ.ಗೌಡ್ರು, ಪ್ರಭಾಕರ್, ಪ್ರವೀಣ್ ಶಾಂತಕೇರಿ, ಸುರೇಶ್ ಬಿಳವಾಣಿ, ನಾಗರಾಜ್, ಎಂ.ಡಿ.ಶೇಖರ್, ಜಯಶೀಲಪ್ಪ, ಜೆ.ಪ್ರಕಾಶ್, ಸುಜಾತ, ಜ್ಯೋತಿ ನಾರಾಯಣಪ್ಪ, ಜಗದೀಶ್ ಕುಗ್ವೆ, ಚಂದ್ರ ಶೇಖರ್ ಇಂಡುವಳ್ಳಿ, ಫೈಯಾಜ್, ವೇದ ಮೂರ್ತಿ, ಶಿವಕುಮಾರ್ ಸೇರಿ ಕಾರ್ಯಕರ್ತರು ಇದ್ದರು.
