ಏಪ್ರಿಲ್ 10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಈ ಬೆನ್ನಲ್ಲೇ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಫಲಿತಾಂಶ ನೋಡಲು ಕಾಯುತ್ತಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಡಳಿಯ ಅಧ್ಯಕ್ಷೆ ಮಂಜುಳಾ, “ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಕಾರ್ಯ ಏಪ್ರಿಲ್ 15 ರಿಂದ ಆರಂಭವಾಗಲಿದೆ. ಸುಮಾರು 20 ದಿನಗಳಲ್ಲಿ ಈ ಮೌಲ್ಯಮಾಪನ ಮುಗಿಯಲಿದೆ. ಆದಷ್ಟು ಬೇಗ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಲಾಗುತ್ತದೆ” ಎಂದಿದ್ದಾರೆ.
“ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನು ನಿರೀಕ್ಷಿಸಬಹುದು” ಎಂದು ಹೇಳಿದ್ದಾರೆ.
ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಒಟ್ಟು 3 ಪರೀಕ್ಷೆಗಳನ್ನು ಈ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ನಡೆಸಲಾಗುತ್ತಿದೆ. ಅದರಂತೆ ಈಗಾಗಲೇ ಪರೀಕ್ಷೆ 1 ಏಪ್ರಿಲ್ 6ರಂದು ಅಂತ್ಯಗೊಂಡಿದೆ.
ಕೆಎಸ್‌ಇಎಬಿ ಈ ಬಾರಿ 3 ಪರೀಕ್ಷೆಗಳನ್ನು (ಪೂರಕ ಪರೀಕ್ಷೆ ಅಲ್ಲದ) ನಡೆಸುವ ಹಿನ್ನೆಲೆ, ಬಹುಬೇಗ ಪರೀಕ್ಷೆ 1 ಫಲಿತಾಂಶ ಪ್ರಕಟಿಸಬೇಕಾದ ಅನಿವಾರ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ, ಮಂಡಲಿಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಏಪ್ರಿಲ್ 15 ರಿಂದಲೇ ನಡೆಸಲು ಕ್ರಮಕೈಗೊಂಡಿದೆ.
ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ | ಶೇ. 78 ರಷ್ಟು ಫಲಿತಾಂಶ ಗಳಿಸಿದ ಬಿಬಿಎಂಪಿ ಕಾಲೇಜುಗಳು
ಇನ್ನು ಮೌಲ್ಯಮಾಪನ ಕಾರ್ಯ ನಡೆಸಲಾಗುವ ಕೇಂದ್ರಗಳ ಶಾಲಾ ಕಟ್ಟಡದ 200 ಮೀಟರ್ ಪ್ರದೇಶವನ್ನು ನಿಷೇಧಿತವೆಂದು ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಇತರೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಅದನ್ನು ಪಾಲಿಸಲು ಸೂಚನೆಯನ್ನು ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಬರೆದ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟವಾದ ನಂತರ https://kseab.karnataka.gov.in, karresults.nic.in ನಲ್ಲಿ ತಮ್ಮ ಫಲಿತಾಂಶವನ್ನು ರಿಜಿಸ್ಟರ್ ನಂಬರ್ ಬಳಸಿ ಚೆಕ್ ಮಾಡಿಕೊಳ್ಳಬಹುದು.