ಮಣ್ಣಿನ ರಾಶಿ ಕುಸಿದು ಮೂವರು ಬುಡಕಟ್ಟು ಮಹಿಳೆಯರು ಜೀವಂತ ಸಮಾಧಿಯಾಗಿದ್ದು, ಐವರು ಗಾಯಗೊಂಡಿರುವ ದುರ್ಘಟನೆ ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಹರಗೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಮಟಿಯಾನ ಗ್ರಾಮದ ಮಹಿಳೆಯರು ತಮ್ಮ ಮನೆಗಳಿಗೆ ‘ಪ್ಲಾಸ್ಟಿಂಗ್’ ಮಾಡಲು ಮಣ್ಣು ಅಗೆಯಲು ಹೋಗಿದ್ದರು. ಈ ವೇಳೆ, ಮಣ್ಣು ಕುಸಿದು ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವೃತ್ತ ನಿರೀಕ್ಷಕ ಅನಿಲ್ ಕುಮಾರ್ ನಾಯಕ್ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಇತರ ಐವರನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಜೆಮ್‌ಶೆಡ್‌ಪುರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸ್ಥಳೀಯ ಜೆಎಂಎಂ ಶಾಸಕ ಸಮೀರ್ ಮೊಹಂತಿ ಹೇಳಿದ್ದಾರೆ.
ಘಟನೆ ಬಗ್ಗೆ ರಾಜ್ಯದ ಆರೋಗ್ಯ ಮತ್ತು ವಿಪತ್ತು ನಿರ್ವಹಣಾ ಸಚಿವ ಬನ್ನಾ ಗುಪ್ತಾ ಅವರಿಗೆ ತಿಳಿಸಿದ್ದೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದ್ದೇನೆ ಎಂದು ಅವರು ಹೇಳಿದ್ದಾರೆ.