ರಾಜ್ಯದ ದಲಿತ ಚಳುವಳಿಯ ನಾಯಕ, ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಆಘಾತಕಾರಿ ಘಟನೆ ಕೋಲಾರದ ಅಂತರಗಂಗೆ ಬಳಿ ನಡೆದಿದೆ.
ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಜೋರು ಧ್ವನಿಯಲ್ಲಿ ಮೈಕ್ ಹಾಕಲಾಗಿತ್ತು. ಮೈಕ್ ಶಬ್ದವನ್ನು ಕಡಿಮೆ ಮಾಡುವಂತೆ ರಾಮಯ್ಯ ಹೇಳಿದ್ದಾರೆ. ಅಷ್ಟಕ್ಕೆ ವಿಚಲಿತಕೊಂಡು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಆರೋಪಿಗಳನ್ನು ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ ಮತ್ತು ತೇರಹಳ್ಳಿಯ ಮುನಿಯಪ್ಪ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ರಾಮಯ್ಯ ಅವರ ಕಣ್ಣಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಂಜುನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಮಯ್ಯ ಮೇಲೆ ಹಲ್ಲೆ ನಡೆಸಿರುವ ಘಟನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಾಮಯ್ಯ ಅವರ ಬೆಂಬಲಿಗರು, ಅನುಯಾಯಿಗಳು ಕೋಲಾರದತ್ತ ಹೊರಟಿದ್ದಾರೆ.