2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಭಿಮಾತೀರದ ಗ್ರಾಮೀಣ ವಲಯದ ಬಾಲಕಿಯರು ಜಿಲ್ಲಾಮಟ್ಟದಲ್ಲಿ ಸಾಧನೆಗೈದಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಚಿಕ್ಕ ಗ್ರಾಮ ಚವಡಿಹಾಳ ಗ್ರಾಮದಲ್ಲಿರುವ ಭಾಗ್ಯವಂತಿ ವಿದ್ಯಾವರ್ಧಕ ಸಂಘದ ಭಾಗ್ಯವಂತಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಬಡವ ಮತ್ತು ರೈತರ ಮಕ್ಕಳು ಶೇ.99, ಶೇ.98 ಮತ್ತು ಶೇ.96ರಷ್ಟು ಅಂಕಗಳನ್ನು ಪಡೆದು ತಾಲೂಕು ಮಟ್ಟದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿ ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ಗರಿ ಮೂಡಿಸಿದ್ದಾರೆ.
ಇಂಡಿ ತಾಲೂಕಿನ ಗಡಿಭಾಗದ ಹಳ್ಳಿ ಚವಡಿಹಾಳ ಒಂದ ಚಿಕ್ಕ ಗ್ರಾಮ. ರೈತರು, ಬಡವರು ಹಾಗೂ ಮಧ್ಯಮ ವರ್ಗದ ಮತ್ತು ಹಿಂದುಳಿದ ಶ್ರಮಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಜನಸಮೂದಾಯದ ಈ ಹಳ್ಳಿಯಲ್ಲಿ ಹಿಂದುಳಿದ ವರ್ಗದ ಆಡಳಿತದಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆ ಭಾಗ್ಯವಂತಿ ವಿದ್ಯಾವರ್ಧಕ ಸಂಘ, ಅಪ್ಪಟ ಗ್ರಾಮೀಣ ಪ್ರದೇಶವಾಗಿದ್ದು, ಭಿಮಾತೀರದ ಗ್ರಾಮದ ಶಾಂತಪ್ಪ, ಪಂಚಪ್ಪ ದಶವಂತ ಎಂಬುವವರು ಈ ಭಾಗದ ಬಡಮಕ್ಕಳಿಗೆ ಶಿಕ್ಷಣ ದೊರೆತರೆ, ಬಡವರ ಬದುಕು ಹಸನಾಗುವುದೆಂಬ ಯೋಚನೆಯಿಂದ 1991ರಲ್ಲಿ ಪ್ರಾಥಮಿಕ ಶಾಲೆಯಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ 2021ರಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪ್ರಾರಂಭಿಸಿದ ಮೊದಲ ಹಂತದಲ್ಲಿಯೇ ಈ ಕಾಲೇಜಿನ ವಿದ್ಯಾರ್ಥಿನಿಯರು ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಮಾಡಿದ ಸಾಧನೆ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ಗ್ರಾಮೀಣ ಭಾಗದ ದೊಡ್ಡ ಸಾಧನೆಯ ಕೊಡುಗೆಯಾಗಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ತೊರವಿ ಭಾಗಕ್ಕೂ ಶೀಘ್ರದಲೇ ನೀರಾವರಿ ಕಲ್ಪಿಸಲಾಗುವುದು: ಎಂ ಬಿ ಪಾಟೀಲ
ಕಾಲೇಜು ಪ್ರಾರಂಭವಾದ ಮೊದಲ ವರ್ಷದಲ್ಲಿಯೇ ಕಲಾ ವಿಭಾಗದ ವಿದ್ಯಾರ್ಥಿನಿ ಗೌರಮ್ಮ ಕುಂಬಾರ ಶೇ.99(587) ಅಂಕಗಳನ್ನು, ವಿಜ್ಞಾನ ವಿಭಾಗದಲ್ಲಿ ಕುಮಾರಿ ವಿದ್ಯಾಶ್ರೀ ಗಣಾಚಾರಿ ಶೇ.98(587) ಅಂಕಗಳನ್ನು ಮತ್ತು ವಾಣಿಜ್ಯ ವಿಭಾಗದಲ್ಲಿ ಕುಮಾರಿ ವಿದ್ಯಾವತಿ ಬಿರಾದಾರ ಶೇ.96(574) ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆಯುವುದರೊಂದಿಗೆ ವಿಜ್ಞಾನ ವಿಭಾಗದಲ್ಲಿ 58 ಮಂದಿ ಡಿಸ್ಟಿಂಕ್ಷನ್, 04 ಮಂದಿ ಪ್ರಥಮ ಶ್ರೇಣಿ, ಕಲಾ ವಿಭಾಗದಲ್ಲಿ 16 ಮಂದಿ ಡಿಸ್ಟಿಂಕ್ಷನ್ ಮತ್ತು 5 ಮಂದಿ ಪ್ರಥಮ ಶ್ರೇಣಿ ಮತ್ತು ವಾಣಿಜ್ಯ ವಿಭಾಗದಲ್ಲಿ 8 ಮಂದಿ ಡಿಸ್ಟಿಂಕ್ಷನ್ ಮತ್ತು 04 ಮಂದಿ ಪ್ರಥಮ ಶ್ರೇಣಿಯ ಫಲಿತಾಂಶವನ್ನು ನೀಡಿ ಕಾಲೇಜಿನ ಒಟ್ಟು ಫಲಿತಾಂಶವನ್ನು 100ಕ್ಕೆ 100ರಷ್ಟು ದಾಖಲಿಸಿದ್ದು, ಇದು ವಿಜಯಪುರ ಗ್ರಾಮಿಣ ಮಟ್ಟದ ಶ್ರೇಷ್ಠ ಸಾಧನೆಯಾಗಿದೆ. ವಿದ್ಯಾರ್ಥಿನಿಯರ ಈ ಸಾಧನೆಗೆ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಯ ಮುಖ್ಯಸ್ತರು, ಶಿಕ್ಷಕರು ಹಾಗೂ ಗ್ರಾಮದ ಗುರು-ಹಿರಿಯರು ಈ ಮಕ್ಕಳ ಸಾಧನೆಗೆ ಅವರನ್ನು ಸತ್ಕರಿಸಿ ಅಭಿನಂದಿಸಿದ್ದಾರೆ.
