ಕಲಾ ಮಾಧ್ಯಮದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿರುವ ಬಿಎಲ್‌ಡಿಇ ಸಂಸ್ಥೆಯ ಎಸ್ ಎಸ್ ಕಾಲೇಜಿನ ವಿದ್ಯಾರ್ಥಿ ವೇದಾಂತ್ ಕಾಂಗ್ರೆಸ್ ಗ್ಯಾರಂಟಿಗಳ ನೆರವಿನಿಂದ ಬಂದ ಧೀಮಂತ ಹುಡುಗ ಎಂದು ವಿಜಯಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರೊ ರಾಜು ಆಲಗೂರ ಹೇಳಿದ್ದಾರೆ.
ಸಾಧನೆ ಮಾಡಿರುವ ವಿದ್ಯಾರ್ಥಿಯನ್ನು ಸತ್ಕರಿಸಿ, ಆತನ ಭವಿಷ್ಯಕ್ಕೆ ಶುಭ ಹರಸಿ ಮಾತನಾಡಿ, “ಬಡ ಕುಟುಂಬದ ಈ ಪ್ರತಿಭಾವಂತನ ತಂದೆ ತೀರಿಕೊಂಡಿದ್ದಾರೆ. ತಾಯಿ ಮತ್ತು ಅಕ್ಕ ಇದ್ದಾರೆ. ಇವರ ಕುಟುಂಬ ನಿರ್ವಹಣೆಗೆ ಬಹಳ ಕಷ್ಟವಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯರ ಸರ್ಕಾರ ನೀಡಿದ ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ ಯೋಜನೆಗಳೇ ಇವರಿಗೆ ಆಧಾರವಾಗಿದ್ದವೆಂದು ಸ್ವತಃ ವೇದಾಂತ್ ಉಪಕಾರ ಸ್ಮರಣೆಯಿಂದ ಹೇಳಿದ್ದಾನೆ. ಇದು ಜನಾನುರಾಗಿ, ಜನಪರ ಸರ್ಕಾರದ ಸಾರ್ಥಕ್ಯವಾಗಿದೆ. ಕಷ್ಟ ಗೊತ್ತಿಲ್ಲದ, ಬಡವರ ಬವಣೆ ಅರಿಯದ ಜನ ಬಿಟ್ಟಿ ಭಾಗ್ಯ, ಪುಕ್ಕಟೆ ಗ್ಯಾರಂಟಿಗಳೆಂದು ಕುಹಕವಾಡಿದ್ದರು. ಅವರಿಗೆಲ್ಲ ಇಂತಹ ಉದಾಹರಣೆಗಳ ಮೂಲಕ ಉತ್ತರ ಸಿಗುತ್ತಲೇ ಇದೆ” ಎಂದು ಆಲಗೂರ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ತೊರವಿ ಭಾಗಕ್ಕೂ ಶೀಘ್ರದಲೇ ನೀರಾವರಿ ಕಲ್ಪಿಸಲಾಗುವುದು: ಎಂ ಬಿ ಪಾಟೀಲ್
“ವೇದಾಂತ್‌ನಂತಹ ಲಕ್ಷಾಂತರ ಕುಟುಂಬಗಳು ರಾಜ್ಯ ಸರ್ಕಾರದ ಯೋಜನೆಗಳಿಂದ ನಿಟ್ಟುಸಿರು ಬಿಡುತ್ತಿವೆ. ಅನೇಕ ಪ್ರತಿಭೆಗಳು ನೆಮ್ಮದಿಯಿಂದ ಶಿಕ್ಷಣ ಪಡೆಯುತ್ತಿವೆ. ಈತ ವಸತಿ ನಿಲಯದಲ್ಲಿದ್ದುಕೊಂಡು ಓದಿದ್ದಾನೆ. ಮುಂದೆಯೂ ಇಂತಹವರ ನೆರವಿಗೆ ಸರ್ಕಾರ ಇರುತ್ತದೆ. ಸಚಿವ ಎಂ ಬಿ ಪಾಟೀಲ್‌ರೂ ಕೂಡ ಇವನ ಮುಂದಿನ ಶಿಕ್ಷಣಕ್ಕೆ ಸಹಾಯ ನೀಡುವುದಾಗಿ ಹೇಳಿದ್ದು, ಹೆಮ್ಮೆಯ ವಿಷಯ” ಎಂದರು.
“ಗ್ಯಾರಂಟಿಗಳನ್ಮು ಟೀಕಿಸುತ್ತಿದ್ದವರೇ ಈಗ ತಾವೇ ಗ್ಯಾರಂಟಿ ಜಪ ಮಾಡುತ್ತಿರುವುದು ವಿಪರ್ಯಾಸ” ಎಂದು ಕುಟುಕಿದ್ದಾರೆ.
