ಮೈಸೂರಿನ ಹಿರಿಯ ಪತ್ರಕರ್ತ, ಪ್ರಗತಿಪರ ಚಿಂತಕ ಕೆ ದೀಪಕ್ ಅವರಿಗೆ ಮೈಸೂರು ಪೊಲೀಸರು ಸಮನ್ಸ್ ನೀಡಿದ್ದಾರೆ. ಮುಚ್ಚಳಿಕೆ ಪತ್ರ ಬರೆದುಕೊಡುವಂತೆ ತಾಕೀತು ಮಾಡಿದ್ದಾರೆ. ಪೊಲೀಸರ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
2019ರ ಪ್ರಕರಣದಲ್ಲಿ ದೀಪಕ್ ಅವರಿಗೆ ಸಮನ್ಸ್ ನೀಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ, ಸಮನ್ಸ್ ನೀಡಿರುವುದು ಪತ್ರಕರ್ತರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಮೈಸೂರಿನಲ್ಲಿ ಪ್ರಜಾಭಾರತ ಸಾಮಾಜಿಕ ಮಾಧ್ಯಮ ಸಂಸ್ಥೆ ನಡೆಸುತ್ತಿರುವ ದೀಪಕ್ ಅವರು, 2019ರಲ್ಲಿ ತಮ್ಮ ಪತ್ರಿಕೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಕುರಿತು ‘ಪ್ರತಾಪಸಿಂಹನ ಬೆತ್ತಲೆ ಜಗತ್ತು’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ್ದರು. ವರದಿ ಕಾರಣಕ್ಕಾಗಿ ದೀಪಕ್ ವಿರುದ್ದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯೂ ನಡೆಯುತ್ತಿದೆ.
ವಿಚಾರಣೆಯ ಹಂತದಲ್ಲಿರುವ ಪ್ರಕರಣದಲ್ಲಿ ಮೈಸೂರು ಪೊಲೀಸ್ ಡಿಸಿಪಿ ಮುತ್ತುರಾಜ್ ಅವರು ದೀಪಕ್ ಅವರಿಗೆ ಬುಧವಾರ ಸಂಜೆ ಸಮನ್ಸ್ ಜಾರಿಗೊಳಿಸಿದ್ದಾರೆ.
ಸಮನ್ಸ್‌ನಲ್ಲಿ, “2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಾಪ ಸಿಂಹ ಅವರ ವೈಯುಕ್ತಿಕ ಚಾರಿತ್ಯ ಕುರಿತಾಗಿ ಸುಳ್ಳಾಗಿರುವ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರಿಂದ ಶಾಂತಿಭಂಗ ಉಂಟು ಮಾಡುವ ಅಥವಾ ಸಾರ್ವಜನಿಕ ನೆಮ್ಮದಿಗೆ ತೊಂದರೆಯುಂಟು ಮಾಡುವ ಸಂಭವವಿತ್ತು. ನಿಮ್ಮ ವಿರುದ್ದ ಮುಂದಿನ ಕ್ರಮಕ್ಕೆ ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಿಸಿಲಾಗಿದ್ದು, ಈ ರೀತಿಯ ದುರ್ವರ್ತನೆಯನ್ನು ತೋರದಂತೆ ನಿಮ್ಮ ವಿರುದ್ದ ವಿಚಾರಣೆ ಕೈಗೊಂಡು ನಿಗದಿತ ಅವಧಿಯವರೆಗೆ ವೈಯುಕ್ತಿಕ ಮುಚ್ಚಳಿಕೆ ಮತ್ತು ಅಷ್ಟೇ ಮೊತ್ತದ ಸೂಕ್ತ ಗಣ್ಯ ವ್ಯಕ್ತಿಯ ಜಾಮೀನುದಾರತೆಯನ್ನು ಏಕೆ ಪಡೆಯಬಾರದು” ಎಂದು ಕೇಳಲಾಗಿದೆ. ಅಲ್ಲದೆ, ಏಪ್ರಿಲ್ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಪೊಲೀಸ್ ಸಮನ್ಸ್‌ಗೆ ಮೈಸೂರಿನ ಹಲವಾರು ಪ್ರಗತಿಪರ ಚಿಂತಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 25 ವರ್ಷಗಳಿಂದ ಮೈಸೂರಿನಲ್ಲಿ ನಾನಾ ಸುದ್ದಿಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿರುವ ದೀಪಕ್ ಅವರು ಮೈಸೂರು ಪತ್ರಕರ್ತರ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿದ್ದಾರೆ. ಜನಪರ ಪತ್ರಿಕೋದ್ಯಮದ ಜೊತೆಗೆ ದಲಿತ ಚಳವಳಿ, ಪ್ರಗತಿಪರ ಚಳವಳಿಗಳಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಚುನಾವಣೆಯ ಸಮಯದಲ್ಲಿ ಸಮನ್ಸ್ ನೀಡಿರುವ ಪತ್ರಿಕಾ ಸ್ವಾತಂತ್ರ್ಯದ ಹರಣವೆಂದು ಖಂಡಿಸಿದ್ದಾರೆ.
ಚುನಾವಣೆ ನೆಪದಲ್ಲಿ ಪತ್ರಕರ್ತರ ಮೇಲಿನ ಹಳೆ ಪ್ರಕರಣಗಳನ್ನು ಕೆದಕಿ, (ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದರೂ) ಪೊಲೀಸ್ ಸಮನ್ಸ್ ಜಾರಿ ಮಾಡಿರುವ ಪೊಲೀಸ್ ಇಲಾಖೆ ಕ್ರಮ ಖಂಡನೀಯ. ಈ ನಡೆ ಪತ್ರಕರ್ತರ ಸ್ವಾತಂತ್ರ್ಯ ಹತ್ತಿಕ್ಕುವ ದಮನಕಾರಿ ಕ್ರಮವಾಗಿದೆ. ಮೈಸೂರಿನಲ್ಲಿ 2019ರಲ್ಲಿ ಪತ್ರಕರ್ತ ಕೆ.ದೀಪಕ್ ಮೇಲೆ ದಾಖಲಾಗಿದ್ದ ಪ್ರಕರಣ 1/2 pic.twitter.com/ELB1dSDjsn
— Karnataka Union of Working Journalists (R) (@KUWJ_R) April 11, 2024
“2019ರ ಚುನಾವಣೆಯ ಸಮಯದಲ್ಲಿಯೂ ‘ಪ್ರಜಾಭಾರತ’ ಮಾಧ್ಯಮದ ಮೂಲಕ ಸರಣಿ ವರದಿ ಪ್ರಕಟಿಸಿ, ಮತದಾರರನ್ನು ಜಾಗೃತಗೊಳಿಸುವ ಕೆಲಸವನನ್ನು ದೀಪಕ್ ಮಾಡಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಸಂಸದ ಪ್ರತಾಪಸಿಂಹ ಕುರಿತಾದ ವರದಿ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ನಂತರ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಪ್ರಕರಣದಲ್ಲಿ ದೀಪಕ್ ವಿರುದ್ದ ಆರೋಪಪಟ್ಟಿ ಸಲ್ಲಿಸುವ ಮೂಲಕ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿತ್ತು” ಎಂದು ಆಕ್ರೋಶ ವ್ಯಕ್ತವಾಗಿದೆ.
ಪ್ರಸ್ತುತ ಪ್ರಗತಿಪರ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತೇವೆ ಎನ್ನುವ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿಯೇ ಪತ್ರಕರ್ತರಿಗೆ ಸಮನ್ಸ್ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.