ಬೆಂಗಳೂರಿನ ರಾಮೇಶ್ವರಂ ಕೆಫೆ ಯಲ್ಲಿ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.
ಮೂಲಗಳ ಪ್ರಕಾರ ಮುಸ್ಸಾವಿರ್ ಹುಸ್ಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಹ ಎಂಬುವವರನ್ನು ಬಂಧಿಸಲಾಗಿದೆ.
ಮಾರ್ಚ್ 1ರಂದು ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಸ್ಫೋಟದಲ್ಲಿ ಹತ್ತು ಮಂದಿ ಗಾಯಗೊಂಡಿದ್ದರು. ಸ್ಫೋಟಕ್ಕೆ ಟೈಮರ್ ಹೊಂದಿದ್ದ ಐಇಡಿ ಬಾಂಬ್ ಬಳಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು
ಘಟನೆಗೆ ಸಂಬಂಧಿಸಿದಂತೆ 1000ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಶಂಕಿತ ಮುಸ್ಸಾವಿರ್ ಹುಸ್ಸೇನ್ ಶಾಜೀಬ್ ಎಂಬಾತನನ್ನು ಬಂಧಿಸಲಾಗಿದೆ. ಈತ ಕರ್ನಾಟಕದ ಶಿವಮೊಗ್ಗದ ತೀರ್ಥಹಳ್ಳಿಯ ನಿವಾಸಿ ಎಂದು ತನಿಖಾದಳ ದೃಢಪಡಿಸಿದೆ.
ಎನ್‌ಐಎ ದೃಢಪಡಿಸಿದಂತೆ ಬಂಧಿತ ಶಾಜೀಬ್ ಬಾಂಬ್ ಸ್ಫೋಟದ ಪ್ರಮುಖ ಶಂಕಿತನಾಗಿದ್ದು, ಚೆನ್ನೈನ ಮಾಲ್ ಒಂದರಲ್ಲಿ ಟೋಪಿಯನ್ನು ಖರೀದಿಸಿದ್ದ. ಈ ವರ್ಷದ ಜನವರಿಯಿಂದಲೇ ಒಂದು ತಿಂಗಳಿಗೂ ಹೆಚ್ಚು ದಿನ ಚೆನ್ನೈನಲ್ಲಿ ವಾಸವಾಗಿದ್ದ ಎಂದು ತನಿಖಾದಳ ತಿಳಿಸಿದೆ.
ಮತ್ತೋರ್ವ ಬಂಧಿತ ಅಬ್ದುಲ್ ಮತೀನ್ ತಹ ಕೂಡ ತೀರ್ಥಹಳ್ಳಿಯವನಾಗಿದ್ದು, ತಮಿಳುನಾಡಿನ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಎಂದು ತನಿಖಾ ದಳ ಮಾಹಿತಿ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ.
