ದೆಹಲಿ ಸರ್ಕಾರವನ್ನು ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಬಿಜೆಪಿ ಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದೆ. ದೆಹಲಿ ಸಚಿವೆ ಅತಿಶಿ ಈ ಬಗ್ಗೆ ಹೇಳಿಕೆ ನೀಡಿದ್ದು, ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜಕೀಯ ಪಿತೂರಿ ನಡೆಯುತ್ತಿರುವ ಬಗ್ಗೆ ನಂಬಲಾರ್ಹ ಮೂಲಗಳಿಂದ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ.
ದೆಹಲಿ ಸರ್ಕಾರದ ಹಲವು ಇಲಾಖೆಗಳಲ್ಲಿ ಹಲವಾರು ಹುದ್ದೆಗಳು ಖಾಲಿಯಿದ್ದರೂ ಹಿರಿಯ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿಲ್ಲ ಎಂದು ಅತಿಶಿ ತಿಳಿಸಿದ್ದಾರೆ.
“ಯಾವುದೇ ಪುರಾವೆಗಳಿಲ್ಲದಿದ್ದರೂ ಸುಳ್ಳು ಪ್ರಕರಣದ ಮೇಲೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದ್ದು, ದೆಹಲಿಯ ಚುನಾಯಿತ ಸರ್ಕಾರವನ್ನು ಉರುಳಿಸುವ ಪ್ರಯತ್ನ ನಡೆಯುತ್ತಿದೆ. ಹಿಂದಿನ ಕೆಲವು ಘಟನೆಗಳನ್ನು ನೋಡಿದಾಗ ಪಿತೂರಿಯನ್ನು ಚೆನ್ನಾಗಿಯೇ ನಡೆಸಲಾಗುತ್ತಿದೆ ಎಂಬುದು ಕಂಡುಬರುತ್ತಿದೆ” ಎಂದು ಅತಿಶಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು
“ದೆಹಲಿಗೆ ಯಾವುದೇ ಅಧಿಕಾರಿಗಳನ್ನು ನಿಯೋಜಿಸಿಲ್ಲ, ಯಾವುದೇ ವರ್ಗಾವಣೆಯನ್ನು ಕೂಡ ಮಾಡಿಲ್ಲ. ಚುನಾವಣೆ ಪ್ರಕಟವಾದ ದಿನದಿಂದ ಇಲ್ಲಿನ ಅಧಿಕಾರಿಗಳು ಸಭೆಗಳಿಗೆ ಹಾಜರಾಗುತ್ತಿಲ್ಲ”ಎಂದು ಅತಿಶಿ ತಿಳಿಸಿದ್ದಾರೆ.
ದೆಹಲಿಯ ಆಪ್ತ ಸಹಾಯಕನನ್ನು ಪದಚ್ಯುತಗೊಳಿಸಿದ್ದು ಕೂಡ ಪಿತೂರಿಯಾಗಿದೆ ಎಂದು ಅತಿಶಿ ಆರೋಪಿಸಿದ್ದಾರೆ.
ಅತಿಶಿ ನೀಡಿರುವ ಎಲ್ಲ ಹೇಳಿಕೆಗಳನ್ನು ಬಿಜೆಪಿ ನಿರಾಕರಿಸಿದ್ದು, ನಿತ್ಯವೂ ಒಂದೊಂದು ಹೊಸ ಕತೆಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ತಿಳಿಸಿದೆ.
