ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ಕ್ರೈಂ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಆನ್‌ಲೈನ್ ವಂಚನೆಗೆ ಒಳಗಾಗಿ ಜನರು ಲಕ್ಷಾಂತರ, ಕೊಟ್ಯಾಂತರ ರೂಪಾಯಿ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಒಂದಾಂದ ಮೇಲೊಂದರಂತೆ ವರದಿಯಾಗುತ್ತಲೇ ಇವೆ. ಇತ್ತೀಚೆಗೆ, ಮಹಿಳಾ ವಕೀಲೆಯೊಬ್ಬರು ₹14 ಲಕ್ಷ ಕಳೆದುಕೊಂಡ ಬೆನ್ನಲ್ಲೇ, 52 ವರ್ಷದ ಎಂಜಿನಿಯರೊಬ್ಬರು ಬರೋಬ್ಬರಿ ₹2.24 ಕೋಟಿ ಕಳೆದುಕೊಂಡ ಘಟನೆ ನಡೆದಿದೆ.
ದೆಹಲಿಯ ಕಸ್ಟಮ್ಸ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಎಂದು ಹೇಳಿ ವಂಚಕರು ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬರಿಗೆ ₹2.24 ಕೋಟಿ ವಂಚಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ನಗರದ ಅಮೃತಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿರುವ ಕುಮಾರಸ್ವಾಮಿ ಶಿವಕುಮಾರ್ ಈ ರೀತಿ ಹಣ ಕಳೆದುಕೊಂಡವರು. ಬೆಂಗಳೂರಿನ 29 ವರ್ಷದ ಮಹಿಳಾ ವಕೀಲರೊಬ್ಬರಿಗೆ ₹14.57 ಲಕ್ಷ ವಂಚಿಸಿದ ರೀತಿಯಲ್ಲೇ ಶಿವಕುಮಾರ್ ಅವರನ್ನು ವಂಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಫ್ಟ್‌ವೇರ್ ಎಂಜಿನಿಯರ್‌ಗೆ ಮಾರ್ಚ್ 18 ರಿಂದ ಮಾರ್ಚ್ 27ರ ನಡುವೆ ವಂಚಕರು ಕರೆ ಮಾಡಿದ್ದಾರೆ. ವಂಚಕರು ತಮ್ಮನ್ನು ತಾವು ದೆಹಲಿಯ ಕಸ್ಟಮ್ಸ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. ಈ ವೇಳೆ, “ನಿಮ್ಮ ಏರ್ ಪಾರ್ಸಲ್ ದೆಹಲಿಯ ಕಸ್ಟಮ್ಸ್ನಲ್ಲಿ ಸೀಜ್ ಮಾಡಲಾಗಿದೆ. ಅದರಲ್ಲಿ ನಿಮ್ಮ ಹೆಸರಿನ ನಕಲಿ ಪಾಸ್ ಪೋರ್ಟ್, ಬ್ಯಾಂಕ್ ಎಟಿಎಂ ಕಾರ್ಡ್ಗಳು, ಎಂಡಿಎಂಎ ಡ್ರಗ್ಸ್ ಇದೆ” ಎಂದು ಸುಳ್ಳು ಹೇಳಿದ್ದಾರೆ.
“ನಿಮ್ಮ ಹೆಸರಿನಲ್ಲಿ ದೆಹಲಿಯಿಂದ ಮಲೇಷ್ಯಾಕ್ಕೆ ಏರ್ ಪಾರ್ಸೆಲ್ 16 ಪಾಸ್‌ಪೋರ್ಟ್, 58 ಬ್ಯಾಂಕ್ ಎಟಿಎಂ ಕಾರ್ಡ್‌ಗಳನ್ನು ಹೊಂದಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ. ಅಲ್ಲದೇ, 140 ಗ್ರಾಂ ಡ್ರಗ್ (ಎಂಡಿಎಂಎ) ಮಾತ್ರೆಗಳಿವೆ ಎಂದು ಬೆದರಿಕೆ ಹಾಕಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
”ಪಾರ್ಸೆಲ್‌ನಲ್ಲಿ ಮಾದಕ ವಸ್ತು ಇರುವುದು ಆ್ಯಂಟಿ ನಾರ್ಕೊಟಿಕ್ ಬ್ಯೂರೊಗೆ ಗೊತ್ತಾಗಿದೆ. ಆ ಪಾರ್ಸೆಲ್ ನಿಮಗೆ ಸೇರಿರದಿದ್ದರೆ ದೂರು ಕೊಡಬಹುದು. ದೂರು ದಾಖಲಿಸಲು ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಆ ವಂಚಕ ಸೂಚಿಸಿದ್ದಾನೆ” ಎಂದು ಹೇಳಿದ್ದಾರೆ. ಇದನ್ನು ನಿಜವೆಂದು ನಂಬಿದ ಟೆಕ್ಕಿಯು ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು.
ಬಳಿಕ ಸ್ಕೈಪ್ ಆ್ಯಪ್‌ನ ವಿಡಿಯೋ ಕರೆಯಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿಯೂ ಪೊಲೀಸ್ ಸಮವಸ್ತ್ರದಂತೆಯೇ ಕಾಣುವ ಬಟ್ಟೆ ಧರಿಸಿದ್ದನು. ನಿಮ್ಮ ಮೇಲೆ ಮನಿ ಲಾಂಡರಿಂಗ್ ಪ್ರಕರಣ ಕೂಡ ಇದೆ. ಸಿಬಿಐ ವಿಚಾರಣೆ ನಡೆಸುತ್ತದೆ ಎಂದು ಭಯಪಡಿಸಿದ್ದಾನೆ.
ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಹಣ ಕೊಡಬೇಕೆಂದು ಬೆದರಿಸಿದ್ದಾನೆ. ಇದರಿಂದ ಕಂಗಾಲಾದ ಸಾಫ್ಟ್‌ವೇರ್ ಎಂಜಿನಿಯರ್, ಹಂತ- ಹಂತವಾಗಿ ವಂಚಕರ 8 ಬ್ಯಾಂಕ್ ಖಾತೆಗಳಿಗೆ ₹2.42 ಕೋಟಿ ವರ್ಗಾವಣೆ ಮಾಡಿದ್ದಾರೆ.
ತಾನು ವಂಚನೆಗೆ ಒಳಗಾಗಿರುವುದನ್ನು ಅರಿತುಕೊಂಡ ಶಿವಕುಮಾರ್ ಏಪ್ರಿಲ್ 5 ರಂದು ಬೆಂಗಳೂರು ಈಶಾನ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಅಪರಿಚಿತ ವಂಚಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ತಿಂಗಳ ಆರಂಭದಿಂದ ಈಶಾನ್ಯ ಸೈಬರ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 25 ಜನರು ಈ ರೀತಿಯ ವಂಚನೆಗೆ ಒಳಗಾಗಿ ಬರೋಬ್ಬರಿ ₹4 ಕೋಟಿ ಕಳೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಸಿದವರಿಗೆ ಆಹಾರ ನೀಡಲು ಈ ಹೋಟೇಲ್‌ಗಳಲ್ಲಿ ಟೋಕನ್ ಖರೀದಿಸಿ!
ವಕೀಲೆ ಪ್ರಕರಣ
ಕಳೆದ ಕೆಲ ದಿನಗಳ ಹಿಂದೆ ಸೈಬರ್ ವಂಚಕರು ನಗರದ ವಕೀಲೆಯೊಬ್ಬರಿಗೆ ಇದೇ ರೀತಿ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕರೆ ಮಾಡಿ ₹14.57 ಲಕ್ಷ ಲೂಟಿ ಮಾಡಿದ್ದರು.
ನಂತರ ಕರೆ ಮಧ್ಯೆಯೇ ನಾರ್ಕೋಟಿಕ್ ಪರೀಕ್ಷೆಯ ನೆಪದಲ್ಲಿ ವಕೀಲೆಯ ಬಟ್ಟೆ ಬಿಚ್ಚಿಸಿ, ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ಬಳಿಕ ವಕೀಲೆಯ ನಗ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಅವರಿಂದ ಒಟ್ಟು 14.57 ಲಕ್ಷ ಲೂಟಿ ಮಾಡಿದ್ದರು. ಇದರ ನಂತರ ವಕೀಲೆ ಪೊಲೀಸರಿಗೆ ದೂರು ನೀಡಿದ್ದರು.