ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಇಬ್ಬರು ಪ್ರಮುಖ ಆರೋಪಿಗಳನ್ನು ಶುಕ್ರವಾರ (ಏ.12) ಪಶ್ಚಿಮ ಬಂಗಾಳದ ಮಿಡ್ನಾಪುರ್‌ದಲ್ಲಿ ಬಂಧಿಸಿದೆ. ಸದ್ಯ ವಶಕ್ಕೆ ಪಡೆದಿರುವ ಇಬ್ಬರು ಶಂಕಿತರನ್ನು ಎನ್ಐಎ ಪಶ್ಚಿಮ ಬಂಗಾಳದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಶಂಕಿತರನ್ನು ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಅಧಿಕಾರಿಗಳು ವಿಚಾರಣೆಗೆ ವಶಕ್ಕೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಲಿದೆ.
ಪ್ರಮುಖ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜೀಬ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಗಳಾದ ಶಾಜೀಬ್ ಮತ್ತು ತಾಹಾ ಅವರನ್ನು ಕಳೆದ ವಾರ ಪ್ರಮುಖ ಆರೋಪಿಗಳೆಂದು ಎನ್‌ಐಎ ಗುರುತು ಮಾಡಿತ್ತು. ಅವರನ್ನು ಬಂಧಿಸಲು ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿತ್ತು. ಅಲ್ಲದೇ, 1000ಕ್ಕೂ ಹೆಚ್ಚು ಸಿಸಿಟಿವಿಗಳ ಪರಿಶೀಲನೆ ನಡೆಸಿದೆ.
ಈ ಸುದ್ದಿ ಓದಿದ್ದೀರಾ? ಸೈಬರ್ ವಂಚನೆ | ₹2.24 ಕೋಟಿ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ!
ಖಚಿತ ಮಾಹಿತಿ ಮತ್ತು ಗುಪ್ತಚರ ಇಲಾಖೆಗೆ ದೊರೆತ ಸುಳಿವಿನ ಆಧಾರದಲ್ಲಿ ಎನ್ಐಎ ತಂಡ ತಿಂಗಳಿಂದ ತಲೆಮರೆಸಿಕೊಂಡಿದ್ದ ಶಂಕಿತರನ್ನು ಪಶ್ಚಿಮ ಬಂಗಾಳದಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
NIA arrested Adbul Matheen Taha and Mussavir Hussain Shazeb, prime suspects in #RameshwaramCafeBlast case.pic.twitter.com/HVxzJQHOG3
— Lokesh. L (@loki_rocki) April 12, 2024
ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಟೋಟ ನಡೆದಿತ್ತು. ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬಾಂಬ್ ಇಟ್ಟಿದ್ದ ವ್ಯಕ್ತಿಯ ಪತ್ತೆಗೆ ನಿರಂತರ ಶೋಧ ಕಾರ್ಯ ನಡೆಸಲಾಗಿತ್ತು. ಬಳಿಕ ತನಿಖೆಯ ಹೊಣೆಯನ್ನು ಎನ್ಐಎಗೆ ವಹಿಸಲಾಗಿತ್ತು.