ಸಂಗೀತ ಕಾರ್ಯಕ್ರಮ ರದ್ದು ಮಾಡಿದ್ದಕ್ಕೆ ಹಲ್ಲೆ ನಡೆಸಿದ್ದ ಹನಿಸಿಂಗ್
ಹನಿಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸದ ಮುಂಬೈ ಪೊಲೀಸರು
ಬಾಲಿವುಡ್‌ನ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಹನಿಸಿಂಗ್ ವಿರುದ್ಧ ಅಪಹರಣ ಮತ್ತು ಹಲ್ಲೆ ಆರೋಪದಡಿ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ʼಫೆಸ್ಟಿವಿನಾ ಮ್ಯೂಸಿಕ್ ಫೆಸ್ಟಿವಲ್ʼ ʼಇವೆಂಟ್ ಮ್ಯಾನೇಜ್‌ಮೆಂಟ್ʼ ಕಂಪನಿಯ ಮಾಲೀಕ ವಿವೇಕ್ ರವಿ ರಮಣ್ ಎಂಬುವವರು ಹನಿಸಿಂಗ್ ಮತ್ತು ಅವರ ಸಹಚರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದ ಕಾರಣಕ್ಕೆ ಹನಿಸಿಂಗ್ ಮತ್ತು ಆತನ ಸಹಚರರು ತಮ್ಮನ್ನು ಅಪಹಿರಿಸಿ ಹೋಟೆಲ್‌ವೊಂದಕ್ಕೆ ಕರೆದೊಯ್ದು ಥಳಿಸಿರುವುದಾಗಿ ಆರೋಪಿಸಿದ್ದಾರೆ.
ವಿವೇಕ್, ಹನಿಸಿಂಗ್ ಮತ್ತು ತಂಡದವರೊಂದಿಗೆ ಮುಂಬೈನಲ್ಲಿಯೇ ಏಪ್ರಿಲ್ 15ರಂದು ʼಹನಿಸಿಂಗ್ 3.0ʼ ಹೆಸರಿನ ಸಂಗೀತ ಕಾರ್ಯ್ರಕ್ರಮವನ್ನು ನಡೆಸಿಕೊಡಲು ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದದಂತೆ ನಿಗದಿತ ದಿನದಂದು ಕಾರ್ಯಕ್ರಮ ಕೂಡ ಆಯೋಜನೆಗೊಂಡಿದೆ. ಆ ದಿನ ಕಾರ್ಯಕ್ರಮ ಶುರುವಾಗುವುದಕ್ಕೂ ಮುನ್ನ ವೇದಿಕೆಯ ಬಳಿ ವಿವೇಕ್ ಮತ್ತು ಹನಿಸಿಂಗ್ ಎದುರಾದಾಗ ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದ ನಂತರ ಜಗಳಕ್ಕೆ ತಿರುಗಿದ್ದು, ವಿವೇಕ್ ಕೂಡಲೇ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಇದರಿಂದ ಕೋಪಗೊಂಡ ಹನಿಸಿಂಗ್ ಮತ್ತು ತಂಡದವರು ವಿವೇಕ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವರನ್ನು ತಾವು ತಂಗಿದ್ದ ʼಜೆ.ಡಬ್ಲ್ಯೂ ಮ್ಯಾರಿಯಟ್ʼ ಹೋಟೆಲ್‌ಗೆ ಕೊಂಡೊಯ್ದು, ಆ ಹೋಟೆಲ್‌ನ ರೂಮಿನಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಯಶ್ ಚೋಪ್ರಾ ಪತ್ನಿ, ಗಾಯಕಿ, ನಿರ್ಮಾಪಕಿ ಪಮೇಲಾ ಇನ್ನಿಲ್ಲ
ಸದ್ಯ ವಿವೇಕ್ ಅವರ ದೂರನ್ನು ಸ್ವೀಕರಿಸಿರುವ ಬಾಂದ್ರಾ ಠಾಣೆಯ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ಘಟನೆಯ ಬಗ್ಗೆ ಹನಿಸಿಂಗ್ ಮತ್ತು ತಂಡದವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.