ಬಿಜೆಪಿ ವಿರುದ್ಧ ಬಂಡಾಯ ಎದ್ದಿರುವ ಕೆ.ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಶಿವಮೊಗ್ಗದ ರಾಮಣ್ಣ ಶ್ರೇಷ್ಟಿಪಾರ್ಕ್‌ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಗಾಂಧಿ ಬಜಾರ್, ನೆಹರು ರಸ್ತೆ ಇಂದ ಸಾಗಿ ಬಂದ ಮೆರವಣಿಗೆ ಮಹಾವೀರ ವೃತ್ತದಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಶಿವಮೊಗ್ಗ ಲೋಕಸಭಾ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದೇನೆ. ನಾಮ ಪತ್ರ ಸಲ್ಲಿಸುವುದಕ್ಕಿಂತ ಮುಂಚೆ ಶಿವಮೊಗ್ಗ ಜಿಲ್ಲೆಯ ಎಲ್ಲಾ 8 ತಾಲೂಕಿನಿಂದ ನನ್ನ ಬೆಂಬಲಿಗರು 25ರಿಂದ 30ಸಾವಿರ ಜನ ಮೆರವಣಿಗೆಯಲ್ಲಿ ಬಂದು ನಮಗೆ ಆಶೀರ್ವಾದ ಮಾಡಿದ್ದಾರೆ. ಗೆದ್ದು ಬನ್ನಿ ಅಂತ ಶುಭವನ್ನು ಕೋರಿದ್ದಾರೆ ಅವರಿಗೆಲ್ಲ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದರು.
“ಇವತ್ತಿನಿಂದ ಚುನಾವಣೆ ಕೊನೆಯ ದಿನದ ತನಕ ನಮ್ಮ ಕಾರ್ಯಕರ್ತರು ಮನೆ ಮನೆಗೂ ಹೋಗಿ ಈಶ್ವರಪ್ಪ ಯಾಕೆ ಚುನಾವಣೆಗೆ ನಿಂತಿದ್ದಾರೆ. ಭಾರತೀಯ ಜನತಾ ಪಕ್ಷದ ಒಬ್ಬ ನಿಷ್ಠಾವಂತನಿಗೆ ಏನು ನೋವಾಗಿದೆ, ಏನು ಅನ್ಯಾಯ ಆಗಿದೆ, ಹಾಗೇ ಹಿಂದುತ್ವಕ್ಕೆ ಏನು ಅನ್ಯಾಯ ಆಗಿದೆ, ಒಂದೇ ಕುಟುಂಬ ಕೈಯಲ್ಲಿ ಅಪ್ಪ-ಮಕ್ಕಳ ಕೈಯಲ್ಲಿ ಪಕ್ಷ ಯಾಕೆ ಇದೆ ಈ ಎಲ್ಲಾ ಅಂಶವನ್ನು ಕೂಡ ಪ್ರತೀ ಮನೆಗೂ ತೆರಳಿ ನಮ್ಮ ಕಾರ್ಯಕರ್ತರು ಹೇಳಿ ಬರುತ್ತಾರೆ ಎಂದು ನನಗೆ ಪೂರ್ಣ ವಿಶ್ವಾಸ ಇದೆ” ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನ ನನಗೆ ಪೂರ್ಣ ಬೆಂಬಲ ನೀಡುತ್ತಾರೆ, ಗೆಲ್ಲಿಸುತ್ತಾರೆ. ಚುನಾವಣೆ ಮುಗಿದ ನಂತರ ಭಾರತೀಯ ಜನತಾ ಪಾರ್ಟಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಹಾಗೂ ಪಕ್ಷ ಶುದ್ಧೀಕರಣ ಆಗುತ್ತೆ ಅನ್ನೋ ವಿಶ್ವಾಸ ನನಗಿದೆ ಎಂದು ಹೇಳಿದರು.
