ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ 14 ದಿನಗಳಷ್ಟೇ ಬಾಕಿ ಇವೆ. ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಕಣಕ್ಕಿಳಿದಿವೆ. ಆದರೆ, ಹಲವೆಡೆ, ಸ್ಥಳೀಯ ಬಿಜೆಪಿ-ಜೆಡಿಎಸ್ ನಾಯಕರು, ಕಾರ್ಯಕರ್ತರಲ್ಲಿ ಒಂದಾಣಿಕೆ ಕಾಣಿಸುತ್ತಿಲ್ಲ. ಪರಿಣಾಮ, ಹಲವೆಡೆ ಗಲಾಟೆಗಳು ವರದಿಯಾಗುತ್ತಿವೆ.
ಇತ್ತೀಚೆಗೆ, ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ ಪರ ಪ್ರಚಾರ ಮಾಡಿದ್ದಕ್ಕೆ ಕುಣಿಗಲ್‌ನಲ್ಲಿ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿತ್ತು. ಇದೀಗ, ಹಾಸನದಲ್ಲಿಯೂ ಅಂತದ್ದೇ ಪ್ರಕರಣ ನಡೆದಿದೆ. ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಪ್ರಚಾರಕ್ಕೆ ಹೋಗಿದ್ದಕ್ಕೆ ಬಿಜೆಪಿ ಮುಖಂಡನ ಮೇಲೆ ನಡೆದಿದೆ. ಹಲ್ಲೆ ನಡೆಸಿದವರೂ ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಶುಕ್ರವಾರ, ಹಾಸನ ನಗರದ ಎಂ.ಜಿ ರಸ್ತೆಯಲ್ಲಿರುವ ಬಿಜೆಪಿ ಮುಖಂಡನ ಅಂಗಡಿ ಮೇಲೆ 30ಕ್ಕೂ ಹೆಚ್ಚು ಮಂದಿಯ ಗುಂಪು ದಾಳಿ ನಡೆಸಿದೆ. ಬಿಜೆಪಿ ಮುಖಂಡ ಐನೆಟ್ ವಿಜಯ್ ಕುಮಾರ್ ಹಾಗೂ ಅವರ ಜೊತೆಗಿದ್ದ ಪ್ರಮೋದ್ ಮತ್ತು ಸಂದೇಶ ಎಂಬವರ ಮೇಲೆ ಹಲ್ಲೆ ನಡೆಸಿದೆ. ಮೂವರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಬೆಂಬಲಿಗರು ಎಂದು ಆರೋಪಿಸಲಾಗಿದೆ.
ವಿಜಯ್ ಅವರು ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರೀತಂಗೌಡ ಅವರಿಂದ ದೂರ ಉಳಿದಿದ್ದರು. ಇದೀಗ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಪ್ರಚಾರದಲ್ಲಿ ವಿಜಯ್ ಭಾಗಿಯಾಗಿದ್ದರು. ಹೀಗಾಗಿಯೇ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಆಸ್ಪತ್ರೆಗೆ ಹಾಸನ ಜೆಡಿಎಸ್ ಶಾಸಕ ಸ್ವರೂಪ್ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.