ಕೇಂದ್ರ ಸಚಿವ ಹಾಗೂ ಧಾರವಾಡ ಕೇತ್ರದ ಲೋಕಸಭಾ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ತಮ್ಮ ಕಚೇರಿಯಲ್ಲಿದ್ದ ವಾಲ್ಮಿಕಿ ಮಹರ್ಷಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೊಗಳನ್ನು ತೆಗೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಧಾರವಾಡ ಕೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಈಗಾಗಲೇ ಲಿಂಗಾಯತರ ವಿರೋಧ ಕಟ್ಟಿಕೊಂಡಿದ್ದು ಈಗ ಕಚೇರಿಯಿಂದ ಅಂಬೇಡ್ಕರ್ ಮತ್ತು ವಾಲ್ಮಿಕಿ ಫೋಟೊ ತೆಗೆಸುವ ಮೂಲಕ ದಲಿತ ಮತ್ತು ನಾಯಕ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಪ್ರಲ್ಹಾದ ಜೋಶಿ ಅವರು ತಮ್ಮ ಕಚೇರಿಯಿಂದ ಅಂಬೇಡ್ಕರ್ ಮತ್ತು ವಾಲ್ಮಿಕಿ ಫೋಟೊ ತೆಗೆಸುವ ವಿಡಿಯೋ ಒಂದನ್ನು ಸುದ್ದಿ ಸಂಸ್ಥೆಯೊಂದು ಪ್ರಸಾರ ಮಾಡಿದ್ದು ಈ ಸುದ್ದಿಯನ್ನು ಎಕ್ಸ್‌ನಲ್ಲಿ (ಟ್ವಿಟ್ಟರ್) ಕಾಂಗ್ರೆಸ್ ಪೋಸ್ಟ್ ಮಾಡಿದೆ.
ಬಿಜೆಪಿ & ಆರೆಸ್ಸೆಸ್‌ಗೆ
ಅಂಬೇಡ್ಕರ್ ಕಂಡರೆ ಕೋಪ,
ಬಸವಣ್ಣನ ಕಂಡರೆ ದ್ವೇಷ,
ವಾಲ್ಮೀಕಿಯನ್ನು ಕಂಡರೆ ಅಸಹನೆ,ಸಂಘಪರಿವಾರದ ಮುದ್ದಿನ ಕೂಸಾದ @JoshiPralhad ಅವರು ತಮ್ಮೊಳಗಿನ ಲಿಂಗಾಯತ, ದಲಿತ, ಹಿಂದುಳಿದ ವರ್ಗಗಳ ಮೇಲಿನ ದ್ವೇಷವನ್ನು ಮಹನೀಯರ ಫೋಟೋವನ್ನು ಹೊರಹಾಕುವ ಮೂಲಕ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ… pic.twitter.com/oheWeD1vXi
— Karnataka Congress (@INCKarnataka) April 12, 2024
“ಬಿಜೆಪಿ & ಆರೆಸ್ಸೆಸ್‌ಗೆ ಅಂಬೇಡ್ಕರ್ ಕಂಡರೆ ಕೋಪ, ಬಸವಣ್ಣನ ಕಂಡರೆ ದ್ವೇಷ, ವಾಲ್ಮೀಕಿಯನ್ನು ಕಂಡರೆ ಅಸಹನೆ” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ಸಿದ್ದರಾಮಯ್ಯ ಅವರಷ್ಟು ನೀಚತನಕ್ಕೆ ನಾವು ಇಳಿಯುವುದಿಲ್ಲ: ಪ್ರಲ್ಹಾದ ಜೋಶಿ ಕಿಡಿ
“ಸಂಘಪರಿವಾರದ ಮುದ್ದಿನ ಕೂಸಾದ ಪ್ರಲ್ಹಾದ ಜೋಶಿ ಅವರು ತಮ್ಮೊಳಗಿನ ಲಿಂಗಾಯತ, ದಲಿತ, ಹಿಂದುಳಿದ ವರ್ಗಗಳ ಮೇಲಿನ ದ್ವೇಷವನ್ನು ಮಹನೀಯರ ಫೋಟೊವನ್ನು ಹೊರಹಾಕುವ ಮೂಲಕ ವ್ಯಕ್ತಪಡಿಸಿದ್ದಾರೆ” ಎಂದು ಕಾಂಗ್ರೆಸ್ ದೂರಿದೆ.
“ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಅಡಿಯಲ್ಲೇ ಚುನಾವಣೆ ನಿಂತಿದ್ದರೂ ಅಂಬೇಡ್ಕರ್ ಅವರನ್ನು ಆಚೆ ಎಸೆಯುವ ಸಂಘದ ಮನಸ್ಥಿತಿಯನ್ನು ನಾಡಿನ ಜನತೆ ಸಹಿಸುವುದಿಲ್ಲ. ಬಿಜೆಪಿ ಹಾಗೂ ಜೋಷಿಯ ದುರಹಂಕಾರ ಪರಮಾವಧಿಗೆ ತಲುಪಿದೆ, ಜನತೆ ಬಿಜೆಪಿಯನ್ನು ಹೆಸರಿಲ್ಲದಂತೆ ನಿರ್ನಾಮ ಮಾಡಲಿದ್ದಾರೆ” ಎಂದು ಕಾಂಗ್ರೆಸ್ ಹೇಳಿದೆ.
ಈ ಸುದ್ದಿಯ ಕುರಿತು ಬಿಜೆಪಿ ಅಥವಾ ಪ್ರಲ್ಹಾದ ಜೋಶಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.