ಲೋಕಸಭಾ ಚುನಾವಣೆಗೆ ದಾವಣಗೆರೆಯಲ್ಲಿ ಹಾಲಿ ಸಂಸದ ಸಿದ್ಧೇಶ್ವರ್ ಅವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಿರುವುದರಿಂದ ಬಂಡಾಯದ ಕಾವು ಏರಿದೆ. ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಸಿದ್ದೇಶ್ವರ್ ವಿರುದ್ಧ ಬಂಡಾಯ ಎದಿದ್ದರು ಸಮಯದಲ್ಲೇ, ಜಿಲ್ಲೆಯ ಮಾಜಿ ಶಾಸಕ, ಆರ್ಎಸ್ಎಸ್ ಮುಖಂಡ ಟಿ ಗುರುಸಿದ್ದನಗೌಡ ಬಿಜೆಪಿಗೆ ‘ಗುಡ್ಬೈ’ ಹೇಳಿದ್ದು, ಕಾಂಗ್ರೆಸ್ ಸೇರಿದ್ದಾರೆ.
ಗುರುಸಿದ್ದನಗೌಡ ಅವರು ಈ ಹಿಂದೆ, ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಡಾ. ರವಿಕುಮಾರ್ಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ಎದುರು ಬೇಡಿಕೆ ಇಟ್ಟಿದ್ದರು. ಆದರೆ, ಬಿಜೆಪಿ ಟಿಕೆಟ್ ದೊರೆಯದ ಕಾರಣ, ಅಸಮಾಧಾನಗೊಂಡಿದ್ದರು. ಇದೀಗ, ಗುರುಸಿದ್ದನಗೌಡ ಮತ್ತು ಅವರ ಪುತ್ರ ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಭೇಟಿ ಮಾಡಿ, ಕಾಂಗ್ರೆಸ್ಗೆ ಕರೆತಂದಿದ್ದಾರೆ.
“ಸಂಸದ ಸಿದ್ದೇಶ್ವರ ಅವರು ಸರ್ವಾಧಿಕಾರಯಂತೆ ವರ್ತಿಸುತ್ತಿದ್ದಾರೆ. ಯಡಿಯೂರಪ್ಪ ಕೆಜೆಪಿ ಮೂಡ್ನಿಂದ ಹೊರಬಂದಿಲ್ಲ. ಅವರ ವರ್ತನೆಯಿಂದ ನನಗೆ ಬೇಸರ ಆಗಿದೆ. ಹೀಗಾಗಿ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ” ಎಂದು ಗುರುಸಿದ್ದನಗೌಡ ಹೇಳಿದ್ದಾರೆ.
“ದಾವಣಗೆರೆ ಬಿಜೆಪಿಯಲ್ಲಿ ಉಸಿರು ಗಟ್ಟುವ ವಾತಾವರಣ ಇದೆ. ಹೀಗಾಗಿ, ಆರ್ಎಸ್ಎಸ್ನ ಕಟ್ಟಾಳು ಆಗಿದ್ದ ಗುರುಸಿದ್ದನಗೌಡ ಕಾಂಗ್ರೆಸ್ ಸೇರಿದ್ದಾರೆ. ಅವರ ಕಾಂಗ್ರೆಸ್ ಸೇರ್ಪಡೆಯಿಂದ ನಮ್ಮ ಬಲ ಹೆಚ್ಚಾಗಿದೆ” ಎಂದು ಸಚಿವ ಮಲ್ಲಿಕಾರ್ಜುನ ಹೇಳಿದ್ದಾರೆ.