ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಿಐಡಿ ಎದುರು ಹಾಜರಾಗಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರ ಧ್ವನಿ ಮಾದರಿ (ವಾಯ್ಸ್ ಸ್ಯಾಂಪಲ್) ಸಂಗ್ರಹಿಸಿದ್ದಾರೆ.
ನ್ಯಾಯ ದೊರಕಿಸಿಕೊಡುವಂತೆ ಸಹಾಯ ಕೋರಿ ಯಡಿಯೂರಪ್ಪ ಮನೆಗೆ ಫೆಬ್ರವರಿ 2ರಂದು ತೆರಳಿದ್ದಾಗ ಬಾಲಕಿಗೆ ಯಡಿಯೂರಪ್ಪ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆಯ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354(ಎ) ಅಡಿಯಲ್ಲಿ ಸದಾಶಿವನಗರ ಠಾಣೆಯಲ್ಲಿ ಮಾರ್ಚ್ 14ರಂದು ಎಫ್‌ಐಆರ್ ದಾಖಲಾಗಿತ್ತು.
ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ಆದೇಶಿಸಿತ್ತು. ಇತ್ತೀಚೆಗೆ, ಸಿಐಡಿ ಅಧಿಕಾರಿಗಳು ಬಾಲಕಿಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಧ್ವನಿ ಮಾದರಿ ಸಂಗ್ರಹಿಸಿಕೊಳ್ಳಲು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿದ್ದರು. ಇದೀಗ, ಯಡಿಯೂರಪ್ಪ ಸಿಐಡಿ ಎದುರು ಹಾಜರಾಗಿದ್ದು, ಅವರ ಧ್ವನಿ ಮಾದರಿಯನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ಯಡಿಯೂರಪ್ಪ ಮತ್ತು ಸಂತ್ರಸ್ತೆಯ ತಾಯಿ ಮಾತನಾಡುವ ವಿಡಿಯೋವನ್ನು ಸಂತ್ರಸ್ತೆಯ ತಾಯಿ ಪೊಲೀಸರಿಗೆ ಸಾಕ್ಷ್ಯವಾಗಿ ಒದಗಿಸಿದ್ದರು. ಬಳಿಕ, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ವಿಡಿಯೋ ಯಡಿಯೂರಪ್ಪ ಅವರದ್ದೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಅಧಿಕಾರಿಗಳು ಧ್ವನಿ ಮಾದರಿ ಸಂಗ್ರಹಿಸಿದ್ದಾರೆ.