ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕುಡಿಯಲು ಕೂಡ ನೀರಿಲ್ಲದೇ, ಜನರು ಪರಿತಪಿಸುವಂತಾಗಿದೆ. ಇದೀಗ, ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಲು ಜಲಮಂಡಳಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ನಗರದಲ್ಲಿ ನೀರಿನ ಸದ್ಬಳಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಗರದಲ್ಲಿ ಉತ್ಪತ್ತಿಯಾಗುತ್ತಿರುವ 1200 ಎಂಎಲ್‌ಡಿಯಷ್ಟು ಸಂಸ್ಕರಿಸಿದ ನೀರನ್ನು ಬಳಸುವ ಗ್ರಾಹಕರಿಗೆ ರಿಯಾಯಿತಿಯಲ್ಲಿ ನೀಡುವ ಬಗ್ಗೆ ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ಸಂಸ್ಕರಿಸಿದ ನೀರಿನ ಸದ್ಬಳಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಜತೆಗೆ ಜಲಮಂಡಳಿ ಒಪ್ಪಂದಕ್ಕೆ ಸಹಿ ಹಾಕಿದೆ.
“ಸಾರ್ವಜನಿಕರ ನಗರದ ಪರಿಸರ ಹಾಗೂ ನೀರಿನ ಸಂರಕ್ಷಣೆಯ ಹಿತಾಸಕ್ತಿಯಿಂದ ಕೈಗೊಂಡಿರುವ ಮಹತ್ವದ ಹೆಜ್ಜೆಯಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಇಂತಹ ಮಹತ್ವದ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ನಗರದಲ್ಲಿ 1,200 ಎಂಎಲ್‌ಡಿಯಷ್ಟು ಸಂಸ್ಕರಿಸಿದ ನೀರು ಉತ್ಪತ್ತಿಯಾಗುತ್ತಿದೆ. ಅಪಾರ್ಟ್‌ಮೆಂಟ್‌ಗಳಿಂದಲೂ ಅಪಾರ ಪ್ರಮಾಣದ ಸಂಸ್ಕರಿಸಿದ ನೀರು ಉತ್ಪತ್ತಿಯಾಗುತ್ತಿದೆ. ಇದನ್ನ ಅಪಾರ್ಟ್‌ಮೆಂಟ್‌ಗಳಲ್ಲಿ ಬಳಕೆ ಮಾಡಿದ ನಂತರವೂ ಬಹಳಷ್ಟು ನೀರು ಉಳಿಯುತ್ತಿತ್ತು. ಅದನ್ನ ಅನಿವಾರ್ಯವಾಗಿ ನಾಲೆಗಳಿಗೆ ಹರಿಯ ಬಿಡಲಾಗುತ್ತಿತ್ತು” ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ. ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
“ಇದನ್ನ ತಡೆಯುವ ಹಾಗೂ ಸಂಸ್ಕರಿಸಿದ ನೀರಿನ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಮೂರನೇ ವ್ಯಕ್ತಿಗೆ ಸಂಸ್ಕರಿಸಿದ ನೀರನ್ನ ಮಾರಾಟ ಮಾಡಲು ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದ ನಂತರ ಸಂಸ್ಕರಿಸಿದ ನೀರನ್ನ ಬಳಕೆದಾರರಿಗೆ ಸಮರ್ಪಕವಾಗಿ ಪೂರೈಸುವ ಫೆಸಿಲಿಟೆಟರ್ ಸಂಸ್ಥೆಯ ಕೊರತೆ ಎದುರಾಗಿತ್ತು. ಇದನ್ನ ಮನಗೊಂಡ ಜಲಮಂಡಳಿ, ಬಿಎಎಫ್ ಮತ್ತು ಬಳಕೆದಾರರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ” ಎಂದು ಹೇಳಿದರು.
“ಸಂಸ್ಕರಿಸಿದ ನೀರನ್ನ ಗ್ರಾಹಕರಿಗೆ ಅವರ ಬೇಡಿಕೆಯ ಅನ್ವಯ ಸರಬರಾಜು ಮಾಡುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಮೊದಲ ಹಂತದಲ್ಲಿ ಟ್ಯಾಂಕರ್‌ಗಳನ್ನು ಉಪಯೋಗಿಸಿಕೊಂಡು ಸಮೀಪದ ಅಪಾರ್ಟ್‌ಮೆಂಟ್‌ಗಳಿಂದ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಿದೆ. ಮುಂದಿನ ಹಂತದಲ್ಲಿ ಸತತವಾಗಿ ಬೇಡಿಕೆ ಇರುವ ಗ್ರಾಹಕರಿಗೆ ಪೈಪ್‌ಲೈನ್ ಮೂಲಕವೂ ಸಂಸ್ಕರಿಸಿದ ನೀರು ಪೂರೈಸುವ ನಿಟ್ಟಿನಲ್ಲಿ ಜಲಮಂಡಳಿ ಚಿಂತಿಸಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ದಾಖಲೆಯಿಲ್ಲದ ₹1 ಕೋಟಿ ಹಣ ಪತ್ತೆ
“ಇದರಿಂದ ಬೆಂಗಳೂರು ಅಪಾರ್ಟ್‌ಮೆಂಟ್‌ಗಳಲ್ಲಿ ಉತ್ಪತ್ತಿಯಾಗುವಂತಹ ಸಂಸ್ಕರಿಸಿ ನೀರನ್ನ ಸದ್ಬಳಕೆ ಮಾಡಲು, ನೀರನ್ನ ಸಂಸ್ಕರಿಸಲು ಆದ ಖರ್ಚನ್ನು ಅಪಾರ್ಟ್‌ಮೆಂಟ್‌ಗಳು ಸರಿದೂಗಿಸಲು, ಕಾವೇರಿ ಮತ್ತು ಕೊಳವೆ ಬಾವಿಗಳ ಮೇಲೆ ಒತ್ತಡ ಕಡಿಮೆ ಮಾಡಲು ಅನುಕೂಲವಾಗಲಿದೆ. ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಮುಂದಿನ ದಿನಗಳಲ್ಲಿ ಜಲಮಂಡಳಿಗೂ ಆರ್ಥಿಕವಾಗಿ ಅನುಕೂಲವಾಗಲಿದೆ” ಎಂದು ಮಾಹಿತಿ ನೀಡಿದರು.
ಸಂಸ್ಕರಿಸಿದ ನೀರಿನ ಬೇಡಿಕೆ ಹೆಚ್ಚಳ
“ಬೆಂಗಳೂರಿನಲ್ಲಿ ಸಂಸ್ಕರಿಸಿದ ನೀರಿನ ಬೇಡಿಕೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಜಲಮಂಡಳಿ ಯಶಸ್ವಿಯಾಗಿದೆ. ಪ್ರತಿ ತಿಂಗಳೂ ₹10 ಲಕ್ಷ ಲೀಟರ್‌ಗೂ ಹೆಚ್ಚು ನೀರು ಬಳಸುವ 714 ಬಲ್ಕ್ ಬಳೆದಾರರಲ್ಲಿ, 127 ಬಲ್ಕ್ ಬಳಕೆದಾರರು ಸಂಸ್ಕರಿಸಿದ ನೀರಿಗೆ ಬೇಡಿಕೆ ಸಲ್ಲಿಸಿದ್ದಾರೆ. ಕಾವೇರಿ ನೀರು ಮತ್ತು ಕೊಳವೆ ಬಾವಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಏರಿಯೇಟರ್ ಅಳವಡಿಕೆಗೆ ಒತ್ತು ನೀಡಬೇಕು ಹಾಗೂ ಸಂಸ್ಕರಿಸಿದ ನೀರಿನ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸುವತ್ತ ಗಮನ ಹರಿಸುವಂತೆ” ಸೂಚನೆ ನೀಡಿದರು.
“ಸಂಸ್ಕರಿಸಿದ ನೀರು ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ನೀಡುವ ಉದ್ದಿಮೆಗಳು ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಸಂಸ್ಕರಿಸಿದ ನೀರಿನ ದರದಲ್ಲಿ ಇನ್ನಷ್ಟು ರಿಯಾಯಿತಿ ನೀಡಬಹುದಾಗಿದೆ. ಈ ಬಗ್ಗೆ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗುವುದು” ಎಂದು ತಿಳಿಸಿದರು.
ಕಾವೇರಿ ನೀರಿನ ಮೇಲಿನ ಒತ್ತಡ ಕಡಿಮೆ ಸಂಸ್ಕರಿಸಿದ ನೀರಿನ ಬಳಕೆಗೆ ಕ್ರಮ
“ಕಾವೇರಿ ನೀರಿನ ಮೇಲಿನ ಒತ್ತಡ ಕಡಿಮೆ ಮಾಡುವುದು ಹಾಗೂ ಜಲಮಂಡಳಿಗೆ ಇನ್ನಷ್ಟು ಆದಾಯ ತಂದು ಕೊಡುವಲ್ಲಿ ಸಂಸ್ಕರಿಸಿದ ನೀರು ಬಹಳ ಪ್ರಮುಖ ಪಾತ್ರವನ್ನು ವಹಿಸಲಿದೆ. ಪ್ರತಿ ದಿನ ಜಲಮಂಡಳಿಯ ವತಿಯಿಂದ 1200 ಎಂಎಲ್‌ಡಿಯಷ್ಟು ಸಂಸ್ಕರಿಸಿದ ನೀರು ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಬಹಳಷ್ಟು ಪಾಲು ನೀರನ್ನ ಬೆಂಗಳೂರು ನಗರದಲ್ಲಿ ಉಪಯೋಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದರು.
“ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇನ್ನಷ್ಟು ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ವಾಣಿಜ್ಯ ಉದ್ದೇಶಗಳಿಗಾಗಿ, ಕೈಗಾರಿಕೆಗಳ ಬಳಕೆಗಾಗಿ ಹಾಗೂ ಸ್ವಚ್ಚತೆಗಾಗಿ ಸಂಸ್ಕರಿಸಿದ ನೀರನ್ನು ಬಳಸುವ ನಿಟ್ಟಿನಲ್ಲಿ ಜನಾಂದೋಲನ ಪ್ರಾರಂಭಿಸಬೇಕಾದ ಅವಶ್ಯಕತೆಯಿದೆ. ಜನರಲ್ಲಿ ಸಂಸ್ಕರಿಸಿದ ನೀರಿನ ಬಳಕೆಯ ಬಗ್ಗೆ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.