“ನಮ್ಮ ಸರ್ಕಾರದ ಬಳಿ 136+ ಸೀಟುಗಳಿವೆ. ಹೀಗಾಗಿ ದೇವೇಗೌಡರು ನಮ್ಮ ಸರ್ಕಾರದ ಅಸ್ತಿತ್ವದ ಬಗ್ಗೆ ಭವಿಷ್ಯ ನುಡಿಯುವುದಕ್ಕಿಂತ, ಅವರ ಪಕ್ಷದ ಅಸ್ತಿತ್ವದ ಬಗ್ಗೆ ಭವಿಷ್ಯ ನುಡಿಯಲಿ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ನಿನ್ನೆ ‘ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಇಲ್ಲ’ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಇಂದು ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್, “ದೇವೇಗೌಡರು ಎಷ್ಟು ಭವಿಷ್ಯ ಕಾಲವನ್ನು ನೋಡಿದ್ದಾರೋ ನಾನು ಅಷ್ಟೇ ಭವಿಷ್ಯ ಕಾಲವನ್ನು ನೋಡಿದ್ದೇನೆ” ಎಂದು ತಿಳಿಸಿದರು.
“ದೇವೇಗೌಡರಿಗೆ 60 ವರ್ಷಗಳ ರಾಜಕೀಯದ ಅನುಭವವಿದ್ದರೆ, ನನಗೆ 40 ವರ್ಷಗಳ ರಾಜಕಾರಣದ ಅನುಭವವಿದೆ. 136+ ಸೀಟುಗಳು ನಮ್ಮ ಸರ್ಕಾರದ ಬಳಿ ಇವೆ. ಅವರು ತಮ್ಮ ಪಕ್ಷ ಜೀವಂತವಾಗಿ ಇರುತ್ತದೆಯೋ ಇಲ್ಲವೋ ಎಂಬುದನ್ನು ಮೊದಲು ಹೇಳಲಿ. ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗುತ್ತದೆಯೇ ಅಥವಾ ತನ್ನದೇ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲಿದೆಯೇ ಎಂಬುದರ ಬಗ್ಗೆ ಜನರಿಗೆ ತಿಳಿಸಿಲಿ. ಅವರೇ ಕಟ್ಟಿದ ಪಕ್ಷ ಹಾಗೂ ಅದರ ಬಗ್ಗೆ ಅವರ ನಿಷ್ಠೆಯನ್ನು ನಾನು ಪ್ರಶ್ನೆ ಮಾಡುವುದಿಲ್ಲ. ನಮ್ಮ ಸರ್ಕಾರದ ಅಸ್ತಿತ್ವ ಪಕ್ಕಕ್ಕಿರಲಿ, ಅವರ ಪಕ್ಷದ ಅಸ್ತಿತ್ವವೇ ಈಗ ಇಲ್ಲವಲ್ಲ” ಎಂದು ವ್ಯಂಗ್ಯವಾಡಿದರು.
ಅಂಬೇಡ್ಕರ್ ಅವರೇ ಬಂದರೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, “ಪ್ರಧಾನಮಂತ್ರಿ ಸ್ಥಾನದ ಬಗ್ಗೆ ನಮಗೆ ಬಹಳ ಗೌರವವಿದೆ. ಪ್ರಧಾನಮಂತ್ರಿಗಳು ಈ ವಿಚಾರವಾಗಿ ಈಗ ಯಾಕೆ ಮಾತನಾಡುತ್ತಿದ್ದಾರೆಯೋ ಗೊತ್ತಿಲ್ಲ. ಸಂವಿಧಾನ ಬದಲಿಸುತ್ತೇವೆ ಎಂದ ಅವರ ಪಕ್ಷದ ನಾಯಕರುಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿಲ್ಲ ಏಕೆ?” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಕೇಳಿದರು.
“ಪ್ರಧಾನಮಂತ್ರಿಗಳಿಗೆ ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದವರನ್ನು ಮೊದಲು ತಮ್ಮ ಪಕ್ಷದಿಂದ ಉಚ್ಛಾಟಿಸಲಿ. ಆಗ ಅವರ ಬದ್ಧತೆಯನ್ನು ನಾವು ಒಪ್ಪಬಹುದು. ಈಗ ಚುನಾವಣೆ ಬಂದಿದೆ ಎಂದು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ” ಎಂದು ಡಿಸಿಎಂ ಹೇಳಿದರು.
“ನಾವು ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇವೆ. ಬಿಜೆಪಿಗೆ 400 ಸೀಟು ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದೆಲ್ಲಾ ಅವರ ಪಕ್ಷದ ನಾಯಕರು, ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಇಷ್ಟು ದಿನ ಈ ವಿಚಾರವಾಗಿ ಮೌನವಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಡವರು ಸೇರಿದಂತೆ ಎಲ್ಲಾ ವರ್ಗದವರು ಸಂವಿಧಾನಕ್ಕೆ ಅಪಾಯ ಬಂದಿದೆ, ನಮ್ಮ ಹಕ್ಕುಗಳಿಗೆ ಕುತ್ತು ಬಂದಿದೆ ಎಂದು ಧ್ವನಿ ಎತ್ತಿದ ನಂತರ ಪ್ರಧಾನಿ ಮೋದಿಯವರು ಈ ಹೇಳಿಕೆ ನೀಡಿದ್ದಾರೆ. ಇದು ಕೇವಲ ರಾಜಕೀಯ ಹೇಳಿಕೆ” ಎಂದು ಡಿ ಕೆ ಶಿವಕುಮಾರ್ ಹೇಳಿದರು.
