“ಚುನಾವಣಾತ್ಮಕ ಸರ್ವಾಧಿಕಾರಿ ದೇಶವಾಗಿ ಭಾರತ ಹೊಮ್ಮಿದೆ, ಚುನಾವಣೆ ನಡೆಯುತ್ತಿರುವ ಕಾರಣಕ್ಕೆ ಇದನ್ನು ಸಂಪೂರ್ಣವಾಗಿ ಸರ್ವಾಧಿಕಾರಿ ದೇಶ ಎಂದು ಕರೆಯುತ್ತಿಲ್ಲವಷ್ಟೇ…”
“ದೇಶದಲ್ಲಿ ಈಗ ಸ್ವತಂತ್ರ ಮತ್ತು ನ್ಯಾಯೋಚಿತ ಚುನಾವಣೆ ನಡೆಯುತ್ತಿಲ್ಲ” ಎಂದು ರಾಜಕೀಯ ವಿಶ್ಲೇಷಕ ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.
ಸಮುದಾಯ ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಶನಿವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ, “ಸಂವಿಧಾನ ಉಳಿವಿಗಾಗಿ ಸಾಂಸ್ಕೃತಿಕ ಪ್ರತಿಶೋಧ” ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಚುನಾವಣಾ ಬಾಂಡ್‌ಗಳ ಭ್ರಷ್ಟಾಚಾರ, ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನು ಚುನಾವಣೆ ಘೋಷಣೆಯಾದ ಬಳಿಕ ಜೈಲಿಗೆ ಹಾಕುತ್ತಿರುವುದು, ಪ್ರಮುಖ ವಿರೋಧ ಪಕ್ಷಗಳ ಅಕೌಂಟ್‌ಗಳನ್ನು ಜಪ್ತಿ ಮಾಡುತ್ತಿರುವುದು- ಇವೆಲ್ಲವೂ ಸ್ವತಂತ್ರ ಮತ್ತು ನ್ಯಾಯೋಚಿತ ಚುನಾವಣೆ ನಡೆಯುವುದಿಲ್ಲ ಎಂಬುದನ್ನು ಸೂಚಿಸುತ್ತವೆ” ಎಂದು ಎಚ್ಚರಿಸಿದರು.
“ಪಶ್ಚಿಮ ಬಂಗಾಳದಲ್ಲಿ 900 ಕಂಪನಿಗಳಷ್ಟು ಪ್ಯಾರಾ ಮಿಲಿಟರಿ ಫೋರ್ಸ್‌ಗಳನ್ನು ನಿಯೋಜಿಸಲಾಗಿದೆ. ಒಂದೊಂದು ಕಂಪನಿಯಲ್ಲಿ ಸುಮಾರು 100 ಮಂದಿ ಇದ್ದಾರೆ. ಅತ್ಯಂತ ಉಗ್ರಗಾಮಿ ಪೀಡಿತ ಪ್ರದೇಶವಾದ ಕಾಶ್ಮೀರದಲ್ಲಿ ಕೇವಲ 700 ಕಂಪನಿಗಳನ್ನು ನಿಯೋಜಿಸಲಾಗಿದೆ. 400 ಸೀಟು ಗೆಲ್ಲುವುದಾಗಿ ಬಿಜೆಪಿ ಹೇಳುತ್ತಿರುವಲ್ಲಿ ಇಂತಹ ಹಲವಾರು ತಂತ್ರಗಳಿವೆ. ದೇಶದಲ್ಲಿ ಸ್ವತಂತ್ರ ಮತ್ತು ನ್ಯಾಯೋಜಿತ ಚುನಾವಣೆ ಇಲ್ಲವಾಗಿದೆ” ಎಂದು ವಿವರಿಸಿದರು.
“ಎಲೆಕ್ಟೋರಲ್ ಬಾಂಡ್ ವಿವರ ಪ್ರಕಟಿಸಯ್ಯ ಎಂದು ಸುಪ್ರೀಂಕೋರ್ಟ್ ಸೂಚಿಸಿದಾಗ, ಎಸ್‌ಬಿಐ ಮುಖ್ಯಸ್ಥ ಒಂದೂವರೆ ತಿಂಗಳು ಕಾಲಹರಣ ಮಾಡಿದ. ಮೂರು ಸೇನೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದ್ದ ಬಿಪಿನ್ ರಾವತ್, ಬದುಕಿರುವಷ್ಟು ಕಾಲ ಬಜರಂಗದಳದ ಬೀದಿ ರೌಡಿಗಳಂತೆ ಮಾತನಾಡುತ್ತಿದ್ದರು. ಅತ್ಯಂತ ಹೀನವಾಗಿ ರಾಜಕೀಯ ಭಾಷಣ ಮಾಡುತ್ತಿದ್ದರು. ನಮ್ಮ ಸೇನೆ ಯಾವ ಮಟ್ಟಕ್ಕೆ ಕೋಮುವಾದೀಕರಣಗೊಂಡಿದೆ ಎಂಬುದರ ಸೂಚನೆ ಇದು” ಎಂದು ಅಭಿಪ್ರಾಯಪಟ್ಟರು.

“ಇಂಡಿಯಾ ಇಸ್ ಇಂದಿರಾ ಎಂಬ ಕಾಲವಿತ್ತು. ಆದರೆ ಈಗ ಮೋದಿ ಇಸ್ ಇಂಡಿಯಾ ಅಂತ ಯಾರೂ ಹೇಳುತ್ತಿಲ್ಲ. ಬದಲಿಗೆ ಮೋದಿ ವಿಷ್ಣುವಿನ ಹನ್ನೊಂದನೆಯ ಅವತಾರ ಎನ್ನುತ್ತಿದ್ದಾರೆ. ಮೋದಿ ಆಡುವುದು ಬರೀ ಮಾತಲ್ಲ, ವೇದವಾಕ್ಯ, ದೈವವಾಣಿ ಎನ್ನುತ್ತಿದ್ದಾರೆ” ಎಂದು ಹೇಳಿದರು.
“ಮೋದಿ ಸುಳ್ಳು ಹೇಳಿದರೂ ನಂಬುತ್ತಿದ್ದಾರೆ. ಇದು ರಾತ್ರೋ ರಾತ್ರಿ ಆಗಿರುವ ಬೆಳವಣಿಗೆಯಲ್ಲ. ಇದಕ್ಕಾಗಿ ನೂರು ವರ್ಷ ಕೆಲಸ ಮಾಡಿದ್ದಾರೆ. 2025ನೇ ವರ್ಷಕ್ಕೆ ಆರ್‌ಎಸ್‌ಎಸ್ ಹುಟ್ಟಿ ನೂರು ವರ್ಷಗಳಾಗುತ್ತಿವೆ. ಜಗತ್ತಿನ ಯಾವುದೇ ದೇಶದಲ್ಲೂ ಇಷ್ಟು ಸುದೀರ್ಘವಾದ ಫ್ಯಾಸಿಸ್ಟ್ ಚಳವಳಿ ನಡೆದಿರಲಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
“ಸಿಎಸ್‌ಡಿಎಸ್- ಲೋಕನೀತಿ ಸಮೀಕ್ಷೆಯು ಅನೇಕ ವಿಚಾರಗಳನ್ನು ಬಯಲು ಮಾಡುತ್ತಿದೆ. ನಿರುದ್ಯೋಗ, ಬೆಲೆ ಏರಿಕೆ ಹೆಚ್ಚಾಗಿದೆ ಎನ್ನುತ್ತಿರುವ ಜನರೇ ಮತ್ತೊಮ್ಮೆ ಮೋದಿಗೆ ಅವಕಾಶ ಕೊಡಬೇಕು ಎನ್ನುತ್ತಿದ್ದಾರೆ. 100ರಲ್ಲಿ 58ರಷ್ಟು ಜನರು ಮೋದಿ ಬರಲಿ ಎಂದಿದ್ದಾರೆ. ಕೋವಿಡ್ ದುರಂತ, ನೋಟ್ ಬ್ಯಾನ್ ಎಲ್ಲವನ್ನೂ ನಡೆಸಿರುವ ಮೋದಿಯನ್ನು ಬಯಸುತ್ತಿದ್ದಾರೆ” ಎಂದು ವಿಷಾದಿಸಿದರು.
“ಪ್ರಜಾಪ್ರಭುತ್ವದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ವೀ-ಡೆಮ್ ಸಂಸ್ಥೆಯು ಭಾರತದ ಬಗ್ಗೆ ಕೆಲವು ಸಂಗತಿಗಳನ್ನು ಹೊರಹಾಕಿದೆ. ಭಾರತದಲ್ಲಿ ಎಲೆಕ್ಟೋರಲ್ ಅಟೋಕ್ರಸಿ ಇರುವುದಾಗಿ ವೀ-ಡೆಮ್ ಗುರುತಿಸಿದೆ. ಅಂದರೆ ಚುನಾವಣಾತ್ಮಕ ಸರ್ವಾಧಿಕಾರಿ ದೇಶವಾಗಿ ಭಾರತ ಹೊಮ್ಮಿದೆ. ಚುನಾವಣೆ ನಡೆಯುತ್ತಿರುವ ಕಾರಣಕ್ಕೆ ಇದನ್ನು ಸಂಪೂರ್ಣವಾಗಿ ಸರ್ವಾಧಿಕಾರಿ ದೇಶ ಎಂದು ಕರೆಯುತ್ತಿಲ್ಲವಷ್ಟೇ” ಎಂದು ವಿಶ್ಲೇಷಿಸಿದರು.
“ಭಾರತದಲ್ಲಿ ಕೆಲವು ವ್ಯಾಕರಣಗಳು ಬದಲಾಗಬೇಕಿದೆ. ರಾಜಕೀಯದ ಮೋದೀಕರಣ, ಆರ್ಥಿಕತೆಯ ಅದಾನೀಕರಣ, ಮಾಧ್ಯಮಗಳ ಅರ್ನಬೀಕರಣ, ನ್ಯಾಯಾಂಗದ ಅಯೋಧ್ಯೀಕರಣ, ರಾಷ್ಟ್ರದ ರಾಮಕರಣ ನಿಲ್ಲಬೇಕಿದೆ” ಎಂದು ಅಭಿಪ್ರಾಯಪಟ್ಟರು.
“ಮೋದಿ ಅಧಿಕಾರಕ್ಕೆ ಬಂದ ಮೇಲೆ ಚುನಾವಣಾ ಪ್ರಜಾತಂತ್ರ ನೆಪಮಾತ್ರಕ್ಕೂ ಉಳಿದಿಲ್ಲ. ಬಂಡವಾಳಶಾಹಿಗಳು ಪ್ರಜಾತಂತ್ರವನ್ನು ಖರೀದಿಸಿದ್ದಾರೆ. ಮಾಧ್ಯಮಗಳು ಆಳುವ ಪಕ್ಷಗಳ ಓಲೈಕೆ ಮಾಡುತ್ತಾ ವಿರೋಧ ಪಕ್ಷಗಳ ವಿಚಾರಣೆ ನಡೆಸುತ್ತಿವೆ. ಅನ್ಯಾಯಕಾರಿಯಾಗಿ ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಬಂತು. ಇಂದು ದೇಶ ಅಂದರೆ ದೇವರು, ರಾಮ ಅಂದರೆ ರಾಷ್ಟ್ರ ಎಂದು ಮೋದಿ ಹೇಳುತ್ತಿದ್ದಾರೆ. ಇವು ನಾಗರಿಕ ಸಮಾಜದ ಮುಂದಿರುವ ಸಮಸ್ಯೆಗಳು” ಎಂದು ವಿಸ್ತೃತವಾಗಿ ಮಾತನಾಡಿದರು.
ಜನವಾದಿ ಸಂಘಟನೆಯ ಅಧ್ಯಕ್ಷರಾದ ಮೀನಾಕ್ಷಿ ಬಾಳಿ ಅವರು ಮಾತನಾಡಿ, “ಹಿಟ್ಲರನ ಫ್ಯಾಸಿಸಂಗೂ ಇಂದು ಭಾರತದಲ್ಲಿರುವ ಫ್ಯಾಸಿಸಂಗೂ ಒಂದು ವ್ಯತ್ಯಾಸವಿದೆ. ಅಂದು ಕುದಿಯುವ ಬಿಸಿನೀರಿನೊಳಗೆ ಕಪ್ಪೆಯನ್ನು ಎಸೆದಂತೆ ಫ್ಯಾಸಿಸಂ ಇತ್ತು. ನೀರಿಗೆ ಬಿದ್ದೊಡನೆ ಕಪ್ಪೆ ಹಾರಿಬಿಡುತ್ತಿತ್ತು. ಆದರೆ ಇಂದು ಭಾರತದಲ್ಲಿ ತಣ್ಣೀರಿನೊಳಗೆ ಕಪ್ಪೆಯನ್ನು ಹಾಕಿ, ಕೆಳಗಡೆ ಉರಿ ಕೊಡಲಾಗುತ್ತಿದೆ. ಈ ಜನ ಫ್ಯಾಸಿಸಂಗೆ ಹೊಂದಿಕೊಂಡಿದ್ದಾರೆ ಎಂಬುದು ಅವರಲ್ಲಿ ಮಾತನಾಡಿದಾಗ ಗೊತ್ತಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
“ನಿರುದ್ಯೋಗಿ ಹುಡುಗರ ಮನಸ್ಸನ್ನು ಹಾಳು ಮಾಡಲಾಗಿದೆ. ಅವರ ಬಳಿ ಒಂದು ಮೋಟರ್ ಬೈಕ್ ಇದ್ದರೆ ಸಾಕು- ಪೆಟ್ರೋಲ್ ಹಾಕಿಸಿ, ಡಾಬಾದಲ್ಲಿ ಊಟ ಕೊಡಿಸಿ, ಒಂದು ಕ್ವಾಟರ್ ಹಾಕಿಸುತ್ತಾರೆ. ಇದರ ಮೇಲೆ ಎಲೆಕ್ಷನ್ ನಡೆಯುತ್ತಿದೆ. ದೇಶಕ್ಕಾಗಿ ಮೋದಿ ಗೆಲ್ಲಬೇಕು ಎನ್ನುತ್ತಿದ್ದಾರೆ. ಸುಳ್ಳುಗಳನ್ನೇ ಸತ್ಯವೆಂದು ಬಗೆದಿದ್ದಾರೆ. ಸತ್ಯ ಸಂಗತಿಗಳನ್ನು ಕೇಳಲು ಅವರು ಸಿದ್ಧವಿಲ್ಲ. ಕಷ್ಟವನ್ನು ದೇವರು ತಂದಿದ್ದಾನೆ, ಎಲ್ಲವನ್ನೂ ಮೋದಿಯೇ ಮಾಡಲು ಸಾಧ್ಯವಾ ಎಂದು ಕೇಳುತ್ತಾರೆ. ಮೋದಿ ಇಲ್ಲದಿದ್ದರೆ ದೇಶ ಉಳಿಯುತ್ತಿತ್ತಾ ಎಂದು ಪ್ರಶ್ನಿಸುತ್ತಾರೆ. ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಚುನಾವಣೆಗಳು ಮತ್ತೆ ನಡೆಯುವುದಿಲ್ಲ ಎಂದು ತಿಳಿಸಿದರೆ, ಒಳ್ಳೆಯದಾಯ್ತಲ್ಲ ಅಂತಾರೆ. ಆಪತ್ತನ್ನೇ ಸಮ್ಮತಿಸುವುದು ಫ್ಯಾಸಿಸಂನ ಪರಾಕಾಷ್ಠೆ. ನಾವು ರಾಜಕೀಯ ಪ್ರಜ್ಞೆಯನ್ನು ಮೂಡಿಸುವುದರಲ್ಲಿ ಸೋತಿದ್ದೇವೆ. ಹೀಗಾಗಿ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ನದಿಗಳೆಲ್ಲ ಸಮುದ್ರವನ್ನು ಸೇರುವಂತೆ ನಾವೀಗ ಎಂದು ಕಡೆ ಸಾಗಬೇಕಿದೆ” ಎಂದು ಆಶಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರು, “ಸಾಕ್ಷಾತ್ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದೇ ಮೋದಿ ಮುಂದುವರಿದು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನವರು ಶ್ರಾವಣ ಮಾಸದಲ್ಲಿ ಮಾಂಸ ತಿಂದು ಓಡುತ್ತಿದ್ದಾರೆ ಎಂಬ ಮಾತು ಸಂವಿಧಾನಕ್ಕೆ ಅಗೌರವ ತರುವಂತಹದ್ದಾಗಿದೆ. ಈ ರೀತಿಯಾದ ವೈರುದ್ಧ ನಮ್ಮ ಮುಂದೆ ಇದೆ” ಎಂದು ಕುಟುಕಿದರು.
ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಶ್ಲಾಘಿಸಿದ ಅವರು, “ಇಂದಿರಾ ಕ್ಯಾಂಟೀನ್‌ನಲ್ಲಿ ಶಾಲಾ ಮಕ್ಕಳು ಪ್ರತಿದಿನ ಉಪಾಹಾರ ಸೇವಿಸುವುದನ್ನು ನೋಡಿದ್ದೇನೆ. ಈ ದೃಶ್ಯ ನೋಡಿದರೆ ಯಾರು ಕೂಡ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ವಿರೋಧಿಸಲ್ಲ. ಇದು ಆಡಳಿತಾಂಗ ಮಾಡಲೇಬೇಕಾದ ಕೆಲಸ. ಒಂದು ರಾಜಕೀಯ ಸಿದ್ಧಾಂತದ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್‌ಅನ್ನು ವಿರೋಧಿಸಬಾರದು” ಎಂದು ಮನವಿ ಮಾಡಿದರು.
ಸಮುದಾಯ ಕರ್ನಾಟಕದ ಗೌರವಾಧ್ಯಕ್ಷ ಜನಾರ್ದನ (ಜನ್ನಿ) ಅವರು ಮಾತನಾಡಿ, “ಸರ್ವನಾಶದತ್ತ ಹೋಗುತ್ತಿದ್ದೇವೆ ಎಂಬ ಆತಂಕ ಕಾಡುತ್ತಿದೆ. ಕೊಳಕು ಮನಸ್ಥಿತಿಗಳೂ ದೇಶದಲ್ಲಿ ತಲೆಎತ್ತಿ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಮಾನವೀಯ ಗುಣಗಳಿಗಾಗಿ ಹುಡುಕಾಡುವವರು ಮೌನವಹಿಸುವುದು ಸರಿಯಲ್ಲ” ಎಂದರು.
ನಿವೃತ್ತ ಕನ್ನಡ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಕರ್ನಾಟಕದ ಅಧ್ಯಕ್ಷರಾದ ಜೆ.ಸಿ. ಶಶಿಧರ್, ವಲಯ ಕಾರ್ಯದರ್ಶಿ ರವೀಂದ್ರನಾಥ್ ಸಿರಿವರ, ಕಾರ್ಯದರ್ಶಿ ಮನೋಜ್ ವಾಮಂಜೂರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
