ಬೆಂಗಳೂರಿನ ಮಾಜಿ ಮೇಯರ್, ಬಿಜೆಪಿ ನಾಯಕಿ ಶಾಂತಕುಮಾರಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹೊತ್ತಲ್ಲೇ ಕಾಂಗ್ರೆಸ್ ಸೇರುವ ಬಿಜೆಪಿ ನಾಯಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಮಾಜಿ ಶಾಸಕರು ಮತ್ತು ಮಾಜಿ ಸಚಿವರು ಬಿಜೆಪಿ ತೊರೆದು ‘ಕೈ’ ಹಿಡಿಯುತ್ತಿರುವ ಬೆನ್ನಲ್ಲೇ ಸ್ಥಳೀಯ ಮುಖಂಡರು ಸಹ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ.
ಸಿದ್ಧರಾಮಯ್ಯ, ಶಾಸಕ ಎಂ ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಅವರ ಸಮ್ಮುಖದಲ್ಲಿ ಬಿಜೆಪಿ ಮಾಜಿ ಮೇಯರ್ ಶಾಂತಕುಮಾರಿ ರವಿಕುಮಾರ್ ಮತ್ತು ನಾಗರಭಾವಿ ವಾರ್ಡ್ ಬಿಜೆಪಿ ಅಧ್ಯಕ್ಷ ಮಾರುತಿ ಅವರು ಕಾಂಗ್ರೆಸ್ ಸೇರಿದರು. ಶಾಂತಕುಮಾರಿ ಅವರು ಬಿಜೆಪಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶಾಂತಕುಮಾರಿ ಅವರು ಮೂಡಲ ಪಾಳ್ಯ ವಾರ್ಡ್ ಸದಸ್ಯರಾಗಿದ್ದರು, 2018ರ ಅವಧಿಯಲ್ಲಿ ಬೆಂಗಳೂರು ಮೇಯರ್ ಆಗಿದ್ದರು.
ಬಿಜೆಪಿ ನಾಯಕರು ಅಷ್ಟೇ ಅಲ್ಲದೆ, ಜೆಡಿಎಸ್ ನಾಯಕರಾದ ವಸಂತ್, ರಮೇಶ್, ನಾರಾಯಣಗೌಡ ಹಾಗೂ ಇತರ ಬೆಂಬಲಿಗರು ‘ಕೈ’ ಹಿಡಿದಿದ್ದಾರೆ.