ಜನರ ಸಮಸ್ಯೆ ಆಲಿಸುವಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ವಿಫಲರಾಗಿದ್ದಾರೆ. ಎರಡು ಸಲ ಮೋದಿ ನಾಮಬಲದಿಂದ ಗೆಲುವು ಸಾಧಿಸಿದರೂ ಖೂಬಾ ಜನರಿಗೆ ಸ್ಪಂದಿಸಲಿಲ್ಲ. ಈ ಬಾರಿಯೂ ಜನರಿಗೆ ಭೇಟಿ ಮಾಡುವ ಅವಶ್ಯಕತೆಯಿಲ್ಲ. ಕೆಲಸ ಮಾಡುವ ಅವಶ್ಯಕತೆಯಿಲ್ಲ. ಪ್ರಧಾನಿ ಮೋದಿ ಹೆಸರಿನ ಮೇಲೆ ಮತ್ತೆ ಗೆಲುವು ಸಾಧಿಸುತ್ತೇನೆಂದು ಕನಸು ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಕುಟುಕಿದರು.
ಶನಿವಾರ ಔರಾದ ತಾಲೂಕಿನ ಬೆಳಕುಣ (ಚೌ), ಹೆಡಗಾಪೂರ, ಸಂತಪೂರ, ಶೆಂಬೆಳ್ಳಿ, ಲಾಧಾ, ಧೂಪತಮಾಹಾಗಾಂವ, ಕೌಠಾ (ಬಿ) ಗ್ರಾಮ ಪಂಚಾಯತ್ ಗ್ರಾಮಗಳಲ್ಲಿ ಮತಯಾಚನೆ ವೇಳೆ ಮಾತನಾಡಿ, “ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಬೀದರ ಜಿಲ್ಲೆಗೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅವರ ಸಾಧನೆ ಶೂನ್ಯವಾಗಿದೆ. ಅವರನ್ನು ಜನರೇ ತಿರಸ್ಕರಿಸಲು ಕಂಕಣಬದ್ಧರಾಗಿದ್ದಾರೆ, ಸ್ವಪಕ್ಷದ ಶಾಸಕರೇ ಅವರನ್ನು ವಿರೋಧಿಸುತ್ತಿದ್ದಾರೆ” ಎಂದರು.
“ನಾನು ಕಾನೂನು ಪದವಿ ಪಡೆದು ಸುಪ್ರಿಂಕೋರ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದೇನೆ. ನನಗೆ ಕಾನೂನಿನ ಜ್ಞಾನವಿದೆ. ಇಲ್ಲಿಯ ಯುವಕರಿಗೆ ಉದ್ಯೋಗವಿಲ್ಲ. ಈ ಬಾರಿ ನನ್ನನ್ನು ಸಂಸದನ್ನಾಗಿ ಆಯ್ಕೆ ಮಾಡಿದರೆ ಜಿಲ್ಲೆಯಲ್ಲಿ ಐಟಿ ಕಂಪನಿ, ಕಾರ್ಖಾನೆ ಸ್ಥಾಪಿಸಿ ನಿರುದ್ಯೋಗ ಯುವಕರಿಗೆ ಕೆಲಸ ಕೊಡಿಸುವೆ. ದಿನದ 24 ಗಂಟೆಯೂ ಜನರ ಸೇವೆಗಾಗಿ ಸಿದ್ಧನಿದ್ದೇನೆ. ಔರಾದ್ ತಾಲೂಕಿನ ನೀರಿನ ಸಮಸ್ಯೆ, ರೈತರ ಸಮಸ್ಯೆಗಳು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮೋದಿ-ಅಮಿತ್ ಶಾ ಬಳಿ ಮನುಷ್ಯರನ್ನು ಶುದ್ಧಗೊಳಿಸುವ ವಾಷಿಂಗ್ ಮಷೀನ್ ಇದೆ : ಮಲ್ಲಿಕಾರ್ಜುನ ಖರ್ಗೆ
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಡಾ. ಭೀಮಸೇನರಾವ ಶಿಂಧೆ, ಗಂಗಾಧರ ಮಜಿಗೆ, ಮಲ್ಲಿಕಾರ್ಜುನ ಪಾಟೀಲ್, ಹಣಮಂತರಾವ ಚವ್ಹಾಣ, ರಾಜಕುಮಾರ ಹಲಬರ್ಗೆ, ಸುಧಾಕಾರ ಕೊಳ್ಳುರ್, ಎಂ.ಡಿ ನಯೂಮ್, ಕರಬಸು, ದೇವಿದಾಸ, ಮಹೇಶ, ರವಿ ಮಾಳಗೆ, ಖದೀರ್, ಪಾಂಡು ರೆಡ್ಡಿ, ಸೈಯದ್ ಶರಿಫೋದ್ಧಿನ್, ಧೋಂಡಿಬಾ, ಶೇಷರಾವ, ಭೀಮರಾವ ಶೆಟಕಾರ ಸೇರಿದಂತೆ ಅನೇಕ ಕಾರ್ಯಕರ್ತರಿದ್ದರು.