ಕರ್ನಾಟಕದಲ್ಲಿ 24 ಗಂಟೆಗಳಲ್ಲಿ 87.78 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ಚಿನ್ನದ ಮೌಲ್ಯವು 32,58,68,623 ರೂ. ಆಗಿದ್ದು, ರಾಜ್ಯದಲ್ಲಿ ಇದುವರೆಗೆ ವಶಕ್ಕೆ ಪಡೆಲಾದ ಅತ್ಯಧಿಕ ಪ್ರಮಾಣದ ಚಿನ್ನವಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿ ಹೇಳಿದೆ.
ಏಪ್ರಿಲ್ 4ರಂದು ನಂಜನಗೂಡಿನಲ್ಲಿ 98.52 ಕೋಟಿ ಮೌಲ್ಯದ 23,160 ಲೀಟರ್ ಮದ್ಯದ 6.03 ಲಕ್ಷ ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ, 32.58 ಕೋಟಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಏಪ್ರಿಲ್ 12 ರ ಬೆಳಿಗ್ಗೆ 9ರಿಂದ ಏಪ್ರಿಲ್ 13 ರ ಬೆಳಿಗ್ಗೆ 9 ಗಂಟೆಯವರೆಗೆ ಒಟ್ಟು 87.78 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಚಿನ್ನದ ಜೊತೆಗೆ, ಅದೇ ಸಮಯದಲ್ಲಿ 27,82,000 ಮೌಲ್ಯದ 35.59 ಕೆಜಿ ಬೆಳ್ಳಿಯನ್ನು ಕೂಡ ವಶಪಡಿಸಿಕೊಂಡಿದೆ ಎಂದು ಆಯೋಗ ತಿಳಿಸಿದೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ, ಏಪ್ರಿಲ್ 13ರವರೆಗೆ ವಶಪಡಿಸಿಕೊಂಡಿರುವ ಒಟ್ಟು ಚಿನ್ನ ಮತ್ತು ಬೆಳ್ಳಿ 101.65 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಆಯೋಗ ಹೇಳಿದೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ 10,06,985 ರೂ. ಮೌಲ್ಯದ 22.96 ಕೆಜಿ ಬೆಳ್ಳಿಯನ್ನು ಎಫ್‌ಎಸ್‌ಟಿ ತಂಡ ವಶಪಡಿಸಿಕೊಂಡಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರಾಮನಗರ ಜಿಲ್ಲೆಯ ಹೆಜ್ಜಾಲ ಚೆಕ್‌ಪೋಸ್ಟ್‌ನಲ್ಲಿ 19,02,61,638 ರೂ. ಮೌಲ್ಯದ 28.5 ಕೆಜಿ ಚಿನ್ನ ಮತ್ತು 21,84,000 ರೂ. ಮೌಲ್ಯದ 28 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಯ ಬೀರೂರು ರಸ್ತೆಯ ಅಜ್ಜಂಪುರದಲ್ಲಿ ವಾಣಿಜ್ಯ ತೆರಿಗೆ ಇಲಾಖೆ 9,35,00,000 ರೂ. ಮೌಲ್ಯದ 30 ಕೆಜಿ ಚಿನ್ನ ಮತ್ತು 5,98,000 ರೂ. ಮೌಲ್ಯದ 7.59 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದೆ.