ಹಾಸನದಲ್ಲಿ ಸ್ವರೂಪ್ ಗೆಲ್ಲಬೇಕು. ಚುನಾವಣೆ ಮುಖಾಂತರ ಬಿಜೆಪಿ ಶಾಸಕ ಪ್ರೀತಂ ಗೌಡರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಹಾಸನ ಕ್ಷೇತ್ರದ ಮತದಾರರಲ್ಲಿ ಭವಾನಿ ರೇವಣ್ಣ ಮನವಿ ಮಾಡಿದ್ದಾರೆ.
ಹಾಸನದಲ್ಲಿ ನಡೆದ ಜೆಡಿಎಸ್ ರೋಡ್ ಶೋನಲ್ಲಿ ಮಾತನಾಡಿದ ಅವರು, “ಸ್ವರೂಪ್‌ನನ್ನು ಗೆಲ್ಲಿಸಿ ಕೊಡುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹುಟ್ಟು ಹಬ್ಬಕ್ಕೆ ಗಿಫ್ಟ್ ನೀಡಿ” ಎಂದು ಮನವಿ ಮಾಡಿದ್ದಾರೆ.
“ನಮ್ಮ ಮೇಲಿನ ಪ್ರೀತಿಗೆ ಬೆಳಿಗ್ಗೆಯಿಂದ ಸಾವಿರಾರು ಜನ ಸೇರಿದ್ದೀರಿ. ರೇವಣ್ಣ ಅವರು ಹಾಸನದಲ್ಲಿ ಮೂರು ತಲೆಮಾರಿಗಾಗುವಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೆ, ಬಿಜೆಪಿ ಶಾಸಕರು ಗಾಳಿಮಳೆಗೆ ಬಿದ್ದು ಹೋಗೋ ಶೆಡ್ ನಿರ್ಮಾಣ ಮಾಡಿದ್ದಾರೆ. ಇದು ಪ್ರೀತಂಗೌಡ ಅವರ ಅಭಿವೃದ್ಧಿನಾ?” ಎಂದು ವ್ಯಂಗ್ಯವಾಡಿದ್ದಾರೆ.
“ದೇವೇಗೌಡರ ಸೂಚನೆಯಂತೆ ನಾವು ಪ್ರಚಾರ ನಡೆಸುತ್ತಿದ್ದೇವೆ. ಕುಮಾರಣ್ಣ ಸೂಚಿಸಿದ ಅಭ್ಯರ್ಥಿಗೆ ನಾವು ಕೆಲಸ ಮಾಡಬೇಕು. ಹೆಣ್ಣು ಮಕ್ಕಳಪರ ಹಾಸನ ಶಾಸಕರು ಎಷ್ಟು ಕೆಟ್ಟದಾಗಿ ಮಾತನಾಡಿದ್ದಾರೆ ಎಂಬುದನ್ನು ನೀವೆ ನೋಡಿದ್ದೀರಿ. ನಮ್ಮ ರಾಲಿಯಲ್ಲಿ ಜನರನ್ನ ನೋಡಿ ಹೆದರಿ ಇಂದು ಹೊಳೆನರಸೀಪುರಕ್ಕೆ ಹೋಗುವ ಮಾತಾಡಿದ್ದಾರೆ” ಎಂದು ಟೀಕಿಸಿದ್ದಾರೆ.
“ಮುಂದೆ ಬಿಜೆಪಿಯನ್ನ ಸೋಲಿಸಿ, ವಿಧಾನಸೌಧದಲ್ಲಿ ಕುಮಾರಣ್ಣನ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಕುಮಾರಣ್ಣನ ಮಡಿಲಿಗೆ ಅಧಿಕಾರ ಹಾಕೋಣ” ಎಂದು ಕರೆ ನೀಡಿದ್ದಾರೆ.
“ಹಾಸನದಿಂದಲೂ ಸ್ವರೂಪ್‌ರನ್ನ ನಾವು ಗೆಲ್ಲಿಸುತ್ತೇವೆ. ನಮ್ಮ ಕಾರ್ಯಕರ್ತರು ಇನ್ನು ಹದಿನೈದು ದಿನ ಹೋರಾಡಬೇಕು. ನಿದ್ರೆ ಮಾಡದ ರೀತಿ ಕೆಲಸ ಮಾಡಿ. ಸ್ವರೂಪ್‌ರನ್ನ ಗೆಲ್ಲಿಸಿ ಕೊಡಿ” ಎಂದು ಮನವಿ ಮಾಡಿದ್ದಾರೆ.

ಜೆಡಿಎಸ್ ರಾಲಿಯಲ್ಲಿ ಅಧಿಕ ಜನಸ್ತೋಮ ಹರಿದು ಬಂದಿತ್ತು. ಆರಂಭದಲ್ಲಿ ಬಿಸಿಲು, ನಂತರದಲ್ಲಿ ಮಳೆ ಶುರುವಾದರೂ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು, ಯಕಶ್ಚಿತ್ ಕದಲದೆ ತಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೊಳೆನರಸೀಪುರ | ರೇವಣ್ಣ ವಿರುದ್ಧ ಸ್ಪರ್ಧಿಸುತ್ತೇನೆಂದು, ನಾಮಪತ್ರವನ್ನೇ ಸಲ್ಲಿಸದ ಪ್ರೀತಂ ಗೌಡ
ಇಡೀ ರಾಜ್ಯವನ್ನೇ ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದ್ದ ಹಾಸನಾ ವಿಧಾನಸಭಾ ಕ್ಷೇತ್ರದಲ್ಲಿ ಸ್ವರೂಪ್‌ಗೆ ಟಿಕೆಟ್ ಕೊಡುವುದರ ಮೂಲಕ ಭವಾನಿ ಮತ್ತು ರೇವಣ್ಣ ಅವರಿಗೆ ತೀವ್ರ ಮುಖಭಂಗವಾಗಿತ್ತು. ಟಿಕೆಟ್ ಕೈ ತಪ್ಪಿದರೂ ಕೂಡ ʼಸ್ವರೂಪ್ ಹಾಸನದಲ್ಲಿ ಜೆಡಿಎಸ್ ಕೋಟೆ ಭದ್ರಪಡಿಸುವುದಕ್ಕಾಗಿ ಭವಾನಿ ರೇವಣ್ಣ ಸ್ಟಾರ್ ಪ್ರಚಾರಕರಾಗಿ ನಿಂತಿದ್ದಾರೆ.
ಜೆಡಿಎಸ್ ಭರ್ಜರಿ ರೋಡ್ ಶೋನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎ.ಮಂಜು, ಸಂಸದ ಪ್ರಜ್ವಲ್ ರೇವಣ್ಣ, ಎಂಎಲ್‌ಸಿ ಡಾ.ಸೂರಜ್ ರೇವಣ್ಣ, ಭವಾನಿ ರೇವಣ್ಣ ಹಾಗೂ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ.ಸ್ವರೂಪ್ ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.